ಸಹೃದಯರನ್ನು ಮಂತ್ರಮುಗ್ಧಗೊಳಿಸಿದ ನೀನಾಸಂ ನಾಟಕಗಳು

KannadaprabhaNewsNetwork | Published : Dec 19, 2024 12:31 AM

ಸಾರಾಂಶ

ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ನೀನಾಸಂ ತಿರುಗಾಟ-೨೦೨೪ರ ಅಂಗವಾಗಿ ಆಯೋಜಿಸಿದ್ದ ಎರಡು ನಾಟಕಗಳು ಪ್ರೇಕ್ಷಕರ ಮೆಚ್ಚುಗೆ ಪಡೆದವು.

ಮಾರುತಿ ಶಿಡ್ಲಾಪುರ

ಹಾನಗಲ್ಲ: ಮದುವೆಯ ತೊಡಕು ಬಿಡಿಸುವ ಮಾಲತಿ ಮಾಧವ ಹಾಗೂ ಹಿರಿಯ ನಾಗರಿಕರ ಆಶ್ರಯಧಾಮದಲ್ಲಿ ಸಂಧ್ಯಾ ಕಾಲದ ಸತ್ಯ ಕಥೆಗಳನ್ನು ಅನಾವರಣಗೊಳಿಸಿದ ಅಂಕದ ಪರದೆ ನಾಟಕಗಳು ರಂಗಗ್ರಾಮ ಶೇಷಗಿರಿಯ ರಂಗಮಂದಿರದಲ್ಲಿ ಸಹೃಯರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾದವು.

ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ನೀನಾಸಂ ತಿರುಗಾಟ-೨೦೨೪ರ ಅಂಗವಾಗಿ ಆಯೋಜಿಸಿದ ಎರಡು ನಾಟಕಗಳು ಪ್ರೇಕ್ಷಕರ ಕಣ್ಣಾಲಿಗಳನ್ನು ತುಂಬಿದವು. ಎರಡು ದಿನಗಳಲ್ಲಿ ಶೇಷಗಿರಿಯ ನವೀಕೃತ ರಂಗ ಮಂದಿರದಲ್ಲಿ ಕಲಾ ಪ್ರದರ್ಶನದ ಮೂಲಕ ಕಲಾವಿದರು ಕೂಡ ಸಂಭ್ರಮಿಸಿದ್ದು ಅತ್ಯಂತ ಗಮನಾರ್ಹವಾದುದು.

ಕ್ರಿಶ ೮ನೇ ಶತಮಾನದ ಸಂಸ್ಕೃತ ನಾಟಕಕಾರ ಭವಭೂತಿಯ ಮಾಲತಿ ಮಾಧವ ನಾಟಕವನ್ನು ಅಕ್ಷರ ಕೆ.ವಿ. ಅವರು ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿ ರಂಗ ವೈಭವವನ್ನು ನೀಡಿದರು. ಮಾಲತಿ ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗಿರುವ ತೊಡಕುಗಳನ್ನು ದಾಟಿದ್ದು ಮಾತ್ರವಲ್ಲ, ಇನ್ನೆರಡು ಜೋಡಿ ಮದುವೆಗಳು ಕೂಡ ನಡೆಯಲು ಕಾರಣವಾಗಿದ್ದು ಇಲ್ಲಿನ ವಿಶೇಷ. ಹತಾಶನಾದ ಮಾಧವ ನಾಗರಿಕ ಲೋಕ ತೊರೆದು ಸ್ಮಶಾನವಾಸಿಯಾಗುವುದು, ಮಾಲತಿಯ ಅಪಹರಣ, ಬೌದ್ಧ ಸಾಧಕಿ ಆಕೆಯನ್ನು ರಕ್ಷಿಸುವುದು, ಅಂತಿಮವಾಗಿ ಮಾಲತಿ ಮಾಧವರ ಸಮಾಗಮ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರದಾರರಾಗಿರುವುದು ಇಲ್ಲಿನ ಇನ್ನೊಂದು ವಿಶೇಷ. ಆಗಬೇಕಾದ ಮದುವೆಗಳು ತಂತಾನೆ ಮತ್ತೆ ನಡೆಯುವುದು ಈ ನಾಟಕದ ವಿಶೇಷತೆಗಳು.

ಅಭಿರಾಮ್ ಭಡ್ಕಮ್ಕರ ಅವರ ಅಂಕದ ಪರದೆ ನಾಟಕವನ್ನು ಜಯಂತ ಕಾಯ್ಕಿಣಿ ಕನ್ನಡಕ್ಕೆ ತಂದಿದ್ದಾರೆ. ವಿದ್ಯಾನಿಧಿ ವನಾರಸೆ ನಿರ್ದೇಶಿಸಿದ ಈ ನಾಟಕ ವೃದ್ಧಾಶ್ರಮಗಳಲ್ಲಿ ಬದುಕಿನ ಸಂಧ್ಯಾ ಕಾಲದಲ್ಲಿ ನೋವಿನಿಂದ ದಿನ ನೂಕದೆ, ಹತಾಶರಾಗದೇ, ಕ್ರಿಯಾಶೀಲರಾಗಿರುವುದು ಒಂದಾದರೆ ಪತ್ನಿಯಿಂದ ಹೀಗಳೆಯಲ್ಪಟ್ಟರೂ, ಮಕ್ಕಳಿಂದ ಬೇರ್ಪಟ್ಟರೂ ಪರಿಗಣಿಸದೇ ಒಟ್ಟಾಗಿ ನೆಮ್ಮದಿಯತ್ತ ನಡೆಯುವುದು. ಮಾನಸಿಕ ವೈಚಾರಿಕ ಭಿನ್ನತೆಗಳು, ವಯೋ ನಿಮಿತ್ತದ ಅಭಿವ್ಯಕ್ತಿಗಳು ಇಲ್ಲಿ ಗಮನಾರ್ಹವಾದವುಗಳು. ಹೊಸ ಕಾಲದ ಯುವ ರಂಗಭೂಮಿ ಕಲಾವಿದ ವೇಷಾಂತರದಲ್ಲಿ ಬಂದು ಇಲ್ಲಿನ ಸಂಗತಿ ಅರಿಯಲು ಹೋಗಿ ಆತನೇ ಇಲ್ಲಿ ಪಾಠ ಕಲಿಯಬೇಕಾಗುತ್ತದೆ. ವೃದ್ಧಾಪ್ಯವೆಂಬ ವಾಸ್ತವವು ರಂಗಭೂಮಿಯ ಭೂಮಿಕೆಗಳಾಗಿ ಪರಿವರ್ತನೆಯಾಗುವ ವಿಸ್ಮಯದಲ್ಲಿ ನಾಟಕ ಮುನ್ನಡೆಯುತ್ತದೆ.

ನೀನಾಸಂ ಕಲಾವಿದರದಾದ ಎಂ.ಎ. ಕೃಷ್ಣಮೂರ್ತಿ, ರಾಘು ಪುರಪ್ಪಮನೆ, ಪಿ.ಬಿ. ಸತೀಶ, ಜಿ.ಆರ್. ಶ್ರೀಕಾಂತ, ಅಕ್ಷಿತಾ ನಂದಗೋಲ, ಅಶೋಕಕುಮಾರ ಸಿ, ಇಂದು ಡಿ, ಓಂಕಾರ ಮೇಗಳಾಪುರ, ಕೆ.ಎಚ್. ಕವಿತಾ, ಕೃಷ್ಣ ಅಶೋಕ ಬಡಿಗೇರ, ಎಂ.ಎಚ್. ಗಣೇಶ, ಮುಂಡೇಶ ಹಿರೇಮಠ, ಪೂಜಿತಾ ಹೆಗಡೆ, ಮಮತಾ ಕಲ್ಮಕಾರ್, ಮಹಂತೇಶ ಬೆಳ್ಳಕ್ಕಿ, ಕುಣಿಗಲ್ ರಂಗ, ಆರ್. ವಿನೋದಕುಮಾರ್ ಅವರ ಅದ್ಭುತ ನಟನೆಗೆ ಪ್ರೇಕ್ಷಕರು ತಲೆದೂಗಿದರು.

Share this article