ಐ ಆ್ಯಮ್ ಕಾಕ್ರೋಚ್ ಟೀ ಶರ್ಟ್, ಕಾಕ್ರೋಚ್ ಮಾಸ್ಕ್ ಧರಿಸಿದ್ದ ಎನ್‌ಎಸ್‌ಯು ಐ ಕಾರ್ಯಕರ್ತರು
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಫಿನಾಡು ಚಿಕ್ಕಮಗಳೂರಿನ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವರೆಗೆ ಸುಮಾರು ಒಂದೂವರೆ ಕಿ.ಮೀ ಕಾಲ್ನಡಿಗೆ ರ್‍ಯಾಲಿ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಮತ್ತು ನೀಟ್ ಪರೀಕ್ಷೆ ಉಸ್ತುವಾರಿ ನಿರ್ವಹಿಸುವ ಎನ್‌ಟಿಎ ವಿರುದ್ಧ ಘೋಷಣೆ ಕೂಗಿದರು.ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಕಾಲೇಜು ನೂರಾರು ಸಂಖ್ಯೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪ್ರತಿಭಟನೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಾಥ್ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎನ್‌ಎಸ್‌ಯುಐನ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಮಾತನಾಡಿ, ಬಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ವರೆಗೆ ಒಟ್ಟು ಮೂರು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ₹5ರಿಂದ ₹10 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದರೂ ಈವರೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಬಿ.ಟಿ.ಸುಮಂತ್ ಮಾತನಾಡಿ, ನೀಟ್ ಪರೀಕ್ಷೆಯ ನಡೆಸುತ್ತಿರುವ ಎನ್‌ಟಿಎಯಿಂದ ಪ್ರಶ್ನೆ ಪತ್ರಿಕೆ ಎರಡ್ಮೂರು ಬಾರಿ ಸೋರಿಕೆ ಆಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೊಬ್ಬ ಸಂಸದರು ಈ ಬಗ್ಗೆ ಮಾತನಾಡುತ್ತಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರು ರಾಷ್ಟ್ರದ ಯುವ ಜನತೆಯನ್ನು ನಿರ್ಲಕ್ಷ್ಯಿಸಿದ್ದಾರೆ. ಈ ಮೂಲಕ ಕೇಂದ್ರ ಮತ್ತು ಬಿಜೆಪಿ ವಿದ್ಯಾರ್ಥಿಗಳ ಪರವಾಗಿಲ್ಲ ಎಂದು ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಶಿವಕುಮಾರ್, ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಸಿ.ಕೆ.ಶ್ರೀಕಾಂತ್, ಎನ್‌ಎಸ್‌ಯುಐನ ಇಕ್ರಾಸ್‌ಖಾನ್, ಕಾರ್ತಿಕ್, ಸೃಜನ್, ಸುಭಾನ್ ಮೊದಲಾದರಿದ್ದರು.
ವಿದ್ಯಾರ್ಥಿಗಳ ಕ್ಷಮೆಗೆ ಮತ್ತು ಪರಿಹಾರ ಆಗ್ರಹ
ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ನೀಟ್ ಪರೀಕ್ಷೆ ಆರಂಭಿಸಲಾಯಿತು. ಆದರೆ, ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಈ ವ್ಯವಸ್ಥೆ ದುರುಪ ಯೋಗ ಪಡಿಸಿಕೊಂಡು ಹಾಳು ಮಾಡುತ್ತಿದೆ. ವಿದ್ಯಾರ್ಥಿಗಳ ಬದುಕಲ್ಲಿ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.ನೀಟ್ ಪರೀಕ್ಷೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ತಕ್ಷಣ ಕೇಂದ್ರ ಸಚಿವ ಸಂಪುಟದಿಂದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸಿದಬೇಕು. ಸೋರಿಕೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
-- ಫೋಟೋ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ವೇಳೆ ಕಾಕ್ರೋಚ್ ಮಾಸ್ಕ್ ಧರಿಸಿದ ವಿದ್ಯಾರ್ಥಿಗಳು.-- ಫೋಟೋಸೋಮವಾರ ನಗರದ ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವರೆಗೆ ನಡೆದ ಪ್ರತಿಭಟನೆ ರ್‍ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
--ಫೋಟೋನಗರದ ಅಜಾದ್ ಪಾರ್ಕ್‌ನಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಎನ್‌ಟಿಎ ವಿರುದ್ಧ ಘೋಷಣೆ ಕೂಗಿ ಕೇಂದ್ರಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹಿಸಿದರು.