ಉಡುಪಿ: ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಕರಣಗಳಾದಾಗ ಸರ್ಕಾರಗಳೇ ತಪ್ಪಿತಸ್ಥರ ಪರವಾಗಿ ನಿಂತ ಉದಾಹರಣೆಗಳಿವೆ. ಲೋಕಸೇವಾ ಆಯೋಗದ ಪ್ರಕರಣದಲ್ಲಿ ರಾಜ್ಯ ಸರ್ಕಾರ ದೋಷಿಗಳ ಪರ ನಿಂತಿತ್ತು. ಆದರೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟಿನ ಕ್ರಮ ಕೈಗೊಂಡಿದೆ. ಸೋರಿಕೆ ಬಹಿರಂಗವಾದ ತಕ್ಷಣ ಸಿಬಿಐ ತನಿಖೆ ಮಾಡಿಸಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಮಜಾಯಿಷಿ ನೀಡಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಆರೋಪಿಗಳ ಬಂಧನವಾಗಿದೆ. ಯಾವುದೇ ಶುಲ್ಕ ಇಲ್ಲದೆ ಮರು ಪರೀಕ್ಷೆ ನಡೆಯಲಿದೆ. ಲೋಪ ಆಗಿರುವುದು ಸತ್ಯ. ಇನ್ನು ಮುಂದೆ ಅಂತಹ ಕ್ರಮ ಆಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ದೂರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನೆಹರು, ಶಾಸ್ತ್ರಿ, ಮೋದಿ...: ಪ್ರಧಾನಿ ನರೇಂದ್ರ ಮೋದಿ ಅವರು ಮಿತವ್ಯಯಕ್ಕೆ ಕರೆ ನೀಡಿದ್ದಾರೆ. ನೆಹರು, ಶಾಸ್ತ್ರಿ, ಇಂದಿರಾ ಗಾಂಧಿ ಕಾಲದಿಂದಲೂ ಇಂತಹ ನಿರ್ಧಾರಗಳನ್ನು ಕೈಗೊಳ್ಳಲಾಗಿತ್ತು, ಒಂದು ಹೊತ್ತಿನ ಊಟ ಬಿಡಬೇಕು, ಚಿನ್ನ ಖರೀದಿ ಮಾಡಬಾರದು ಎಂದು ಕರೆ ನೀಡಿದ್ದು ಇದೆ. ಮೋದಿ ಅವರು ಒಂದು ವರ್ಷ ಯಾವುದೇ ದಿನಾಚರಣೆಗಾಗಿ ಚಿನ್ನ ಖರೀದಿ ಬೇಡ ಎಂದಿದ್ದಾರೆ. ಮದುವೆ ಆಗುವವರು ಚಿನ್ನ ಖರೀದಿಸಬೇಡಿ ಎಂದಿಲ್ಲ ಎಂದು ಕೋಟ ಸಮರ್ಥಿಸಿದರು.
ಅವರ ತಂದೆ ಅಜ್ಜನಿಂದಲೇ ಆಗಿಲ್ಲ...ಸನಾತನ ಧರ್ಮ ನಾಶ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. ಉದಯನಿಧಿ ಅವರ ತಂದೆ ಅವರ ಅಜ್ಜನಂತವರು ಸನಾತನ ಧರ್ಮವನ್ನು ನಿರ್ನಾಮ ಮಾಡುತ್ತೇವೆ ಅಂದರೂ ಏನು ಆಗಿಲ್ಲ. ಬದಲಿಗೆ ಅವರೇ ನಿರ್ನಾಮ ಆಗಿದ್ದು ಬಿಟ್ಟರೆ ಧರ್ಮ ನಿರ್ನಾಮ ಆಗಿಲ್ಲ. ಸನಾತನ ಧರ್ಮ ನಿರ್ನಾಮ ಮಾಡಲು ಹೋದವರು ಯಾರೂ ಉಳಿದಿಲ್ಲ. ಉದಯನಿಧಿ ಅವರಷ್ಟಕ್ಕೆ ಏನಾದರೂ ಮಾತನಾಡಲಿ ಅದಕ್ಕೆ ಮಹತ್ವ ಬೇಡ ಎಂದು ಕೋಟ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.