ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಎರಡನೇ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರು ತಾಲೂಕನ್ನು ಪ್ರಸಕ್ತ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ತಾಲೂಕಿನ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಬಿಜೆಪಿ ಹಾಗೂ ವಿವಿಧ ರೈತ ಸಂಘಟನೆಗಳು ಸೋಮವಾರ ನೀಡಿದ್ದ ''ಜಗಳೂರು ಬಂದ್''ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಸಂಪೂರ್ಣ ಯಶಸ್ವಿಯಾಗಿದೆ.
- ರಸ್ತೆ ತಡೆದು ಟೈರ್‌ಗಳಿಗೆ ಬೆಂಕಿ । ವಾಣಿಜ್ಯ ವ್ಯವಹಾರ ಸ್ತಬ್ಧ । ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ
- - -
- ಭದ್ರಾ ಮೇಲ್ದಂಡೆ ಯೋಜನೆ, ಬರಪಟ್ಟಿಗೆ ತಾಲೂಕು ಸೇರ್ಪಡೆಯಲ್ಲಿ ತಾರತಮ್ಯ ಖಂಡಿಸಿ ಬಿಜೆಪಿ, ರೈತ ಸಂಘಟನೆಗಳ ಪ್ರತಿಭಟನೆ
- ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ವಶ: ಉದ್ರಿಕ್ತರಿಂದ ಸಾರಿಗೆ ಬಸ್‌ಗೆ ಕಲ್ಲು- ಗಾಜು ಪುಡಿಪುಡಿ
- - -
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಎರಡನೇ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರು ತಾಲೂಕನ್ನು ಪ್ರಸಕ್ತ ಸಾಲಿನ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ಹಾಗೂ ತಾಲೂಕಿನ ಜೀವನಾಡಿ ಭದ್ರಾ ಮೇಲ್ದಂಡೆ ಯೋಜನೆ ನನೆಗುದಿಗೆ ಬಿದ್ದಿರುವುದನ್ನು ಖಂಡಿಸಿ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ನೇತೃತ್ವದಲ್ಲಿ ಬಿಜೆಪಿ ಹಾಗೂ ವಿವಿಧ ರೈತ ಸಂಘಟನೆಗಳು ಸೋಮವಾರ ನೀಡಿದ್ದ ''''ಜಗಳೂರು ಬಂದ್''''ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗೆಯಿಂದಲೇ ಪಟ್ಟಣದ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಧರ್ಮಾನಾಯ್ಕ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಔಷಧ ಅಂಗಡಿ, ಹಾಲು ಹಾಗೂ ಆಸ್ಪತ್ರೆಗಳಂತಹ ತುರ್ತು ಸೇವೆಗಳನ್ನು ಹೊರತುಪಡಿಸಿ, ಪಟ್ಟಣದ ವ್ಯಾಪಾರ- ವಹಿವಾಟು, ವಾಣಿಜ್ಯ ಮಳಿಗೆಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು. ಸಾರ್ವಜನಿಕರಿಂದಲೂ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ರಸ್ತೆ ತಡೆ-ಉದ್ವಿಗ್ನ ವಾತಾವರಣ:
ಜಗಳೂರು ಪಟ್ಟಣದ ಚಳ್ಳಕೆರೆ ಗೇಟ್ ಬಳಿ ಪ್ರತಿಭಟನಾಕಾರರು ರಸ್ತೆಗೆ ಮುಳ್ಳುಬೇಲಿ ಹಾಕಿ, ಟೈರ್‌ಗಳಿಗೆ ಬೆಂಕಿಹಚ್ಚಿ ಆಕ್ರೋಶ ಪ್ರದರ್ಶಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ ಹಾಗೂ ಎಚ್.ಪಿ. ರಾಜೇಶ್ ಸೇರಿದಂತೆ ಪ್ರಮುಖ ಮುಖಂಡರನ್ನು ವಶಕ್ಕೆ ಪಡೆದು, ಸಾರಿಗೆ ಬಸ್‌ನಲ್ಲಿ ಕರೆದೊಯ್ಯಲು ಯತ್ನಿಸಿದರು. ಇದರಿಂದ ಕೆರಳಿದ ಕಾರ್ಯಕರ್ತರು ಬಸ್‌ನ ಗಾಜು ಒಡೆದು ಪ್ರತಿಭಟಿಸಿದರು. ಅಲ್ಲದೇ, ಬಿಜೆಪಿ ತಾಲೂಕು ಕಾರ್ಯದರ್ಶಿ ಧರ್ಮಾನಾಯ್ಕ್ ಅವರನ್ನು ವಶಕ್ಕೆ ಪಡೆದಾಗ ಕಾರ್ಯಕರ್ತರು ಪೊಲೀಸ್ ಜೀಪ್‌ಗೆ ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸಿದ್ದರಿಂದ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಶಾಸಕರು, ಸಚಿವರ ವಿರುದ್ಧ ರೈತರ ಮುಗಿಲುಮುಟ್ಟಿದ ಆಕ್ರೋಶ:
ಬಂಧನದ ನಂತರವೂ ಎದೆಗುಂದದ ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್ ಹಾಗೂ ಭಾರತೀಯ ಕಿಸಾನ್ ಸಂಘದ ನಾಯಕರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಉರಿಬಿಸಿಲನ್ನು ಲೆಕ್ಕಿಸದೇ ಪ್ರತಿಭಟನೆ ಮುಂದುವರಿಸಿದರು. ಶಾಸಕ ಬಿ.ದೇವೇಂದ್ರಪ್ಪ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ತೀವ್ರ ಆಕ್ರೋಶ ತೋರ್ಪಡಿಸಿದರು. ಮಧ್ಯಾಹ್ನ ತಹಸೀಲ್ದಾರ್‌ಗೆ ಬಿಜೆಪಿ ಘಟಕದಿಂದ ಮನವಿ ಸಲ್ಲಿಸಲಾಯಿತು.
ಮಲತಾಯಿ ಧೋರಣೆ ಸರಿಯಲ್ಲ:
ಮನವಿ ಸಲ್ಲಿಸಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ನಮ್ಮ ತಾಲೂಕಿನಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹರಿಹರ, ಹೊನ್ನಾಳಿ ಮುಂತಾದ ತಾಲೂಕುಗಳಿಗೆ ಬರ ಪರಿಹಾರ ಕೊಟ್ಟು, ಅತ್ಯಂತ ಬರದ ಸುಳಿಗೆ ಸಿಲುಕಿರುವ ಜಗಳೂರು ತಾಲೂಕನ್ನೇ ಸರ್ಕಾರ ಕೈಬಿಟ್ಟಿದೆ. ನಮ್ಮ ತಾಲೂಕಿನ ಬಗ್ಗೆ ಸರ್ಕಾರಕ್ಕೆ ಮಲತಾಯಿ ಧೋರಣೆ ಸರಿಯಲ್ಲ. ಬರಪೀಡಿತ ತಾಲೂಕುಗಳ ಪಟ್ಟಿಗೆ ಜಗಳೂರನ್ನು ಸೇರಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಕಂದಾಯ ಇಲಾಖೆಯ ಅಧಿಕಾರಿಗಳು ಮಂಗಳವಾರ ತಾಲೂಕನ್ನು ಬರಪಟ್ಟಿಗೆ ಸೇರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ತನ್ನ ನಿರ್ಲಕ್ಷ್ಯ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಮಾಡಲಾಗುವುದು. ಪಟ್ಟಣದ ಸಾರ್ವಜನಿಕರು ಹಾಗೂ ಸಂಘಟನೆಗಳ ಸಹಕಾರದಿಂದ ಜಗಳೂರು ಪಟ್ಟಣ ಬಂದ್ ಯಶಸ್ವಿಯಾಗಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಎಲ್ಲರಿಗೂ ಧನ್ಯ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ಮಳೆಯಿಲ್ಲದೇ ತಾಲೂಕಿನ ರೈತರು ಕಂಗಾಲಾಗಿ ಗುಳೆ ಹೋಗುತ್ತಿದ್ದಾರೆ. ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿ ನಿರ್ಲಕ್ಷ್ಯದಿಂದ ಜಗಳೂರಿನ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಸರ್ಕಾರ ಕೂಡಲೇ ವಿಶೇಷ ಅನುದಾನ ನೀಡಿ ತಾಲೂಕನ್ನು ಬರಪಟ್ಟಿಗೆ ಸೇರಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲೇ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವ ಜಗಳೂರನ್ನು ಮೊದಲ ಪಟ್ಟಿಯಲ್ಲೇ ಬರಪೀಡಿತ ಎಂದು ಘೋಷಿಸಬೇಕಿತ್ತು. ಸರ್ಕಾರ ಕೂಡಲೇ ಎಚ್ಚೆತ್ತು ಬರಪಟ್ಟಿಗೆ ತಾಲೂಕನ್ನು ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್, ಎಚ್.ಸಿ.ಮಹೇಶ್, ನಾಗರಾಜ್, ಜಿ.ಪಂ. ಮಾಜಿ ಸದಸ್ಯ, ಮರೇನಹಳ್ಳಿ ಕಾರ್ತೀಕ್, ಏಳುಕೋಟಿ, ಲ್ಯಾಬ್ ಶಿವು, ಬಾಲು, ಕಾಮಗೇತನಹಳ್ಳಿ ಸುರೇಶ್, ಬಸವರಾಜ್, ಎಸ್.ಟಿ. ನಾಗರಾಜ್, ದೇವಿಕೆರ ಪ್ರವೀಣ್, ಗೌಡಗೊಂಡನಹಳ್ಳಿ ನಾಗರಾಜ್, ಹನುಮಂತಾಪುರ ಶಿವು, ಚಿಕ್ಕ ಉಜ್ಜಿನಿಯ ಸಾಗರ ಅಂಜಿನಪ್ಪ, ಬಿಸ್ತುವಳ್ಳಿ ಬಾಬು, ಶಿವಕುಮಾರ್ ಸ್ವಾಮಿ,ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಕೊಟ್ರೋಶ್, ಯೋಗಾನಂದ್ ಧನಂಜಯ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾನನಕಟ್ಟೆ ತಿಪ್ಪೇಸ್ವಾಮಿ, ರಾಜನಹಟ್ಟಿ ರಾಜು, ಚಿರಂಜೀವಿ, ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು, ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
- - -
-21ಜೆ.ಜಿ.ಎಲ್.1: ''''ಜಗಳೂರು ಬಂದ್'''' ವೇಳೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
-21ಜೆ.ಜಿ.ಎಲ್.2: ''''ಜಗಳೂರು ಬಂದ್'''' ಹಿನ್ನೆಲೆ ಬಸ್‌ಗಳು, ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಭಣಗುಡುತ್ತಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.