ಹರಪನಹಳ್ಳಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಾಯ್ದಿರಿಸಿದ ನಿವೇಶನಗಳನ್ನು ಈ ವರೆಗೂ ಹಂಚದೇ ಇರುವ ಗ್ರಾಪಂ ನಿರ್ಲಕ್ಷ್ಯ ಖಂಡಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಬಡ ಕೂಲಿಕಾರರು ಪಟ್ಟಣದ ತಾಪಂ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರ ಮಂಜೂರು ಮಾಡಿದ ಭೂಮಿಯಲ್ಲಿ ಗುಡಿಸಲನ್ನಾದರೂ ಕಟ್ಟಿಕೊಂಡು ಜೀವನ ಮಾಡೋಣ ಎಂದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮ ಸಭೆ ಮಾಡಿ ಮೂಲ ಸೌಕರ್ಯ ಒದಗಿಸಿಕೊಟ್ಟು ಹಂಚಿಕೆ ಮಾಡುತ್ತಾ ಇಲ್ಲ. ಇದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಅವರು ಆರೋಪಿಸಿದರು.
ಹೊಸದಾಗಿ ಸಾಕಷ್ಟು ಹಳ್ಳಿಗಳ ಬಡ ನಿವೇಶನ ರಹಿತರು ಸೂರು ಇಲ್ಲದೆ ಅವಿಭಕ್ತ ಕುಟುಂಬಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಬಡವರ ದುರಂತವಾಗಿದೆ ಎಂದು ಹೇಳಿದ್ದಾರೆ.ಸಿಂಗ್ರಿಹಳ್ಳಿ ಗ್ರಾಮದಲ್ಲಿ ನಿವೇಶನಕ್ಕಾಗಿ ಸರ್ಕಾರಿ ಜಮೀನು ಇದ್ದು, ಇದು ಒತ್ತುವರಿಯಾಗಿದೆ, ಬಿಡಿಸಬೇಕಾಗಿದೆ. ಹಲುವಾಗಲು ಗ್ರಾಪಂ ಗರ್ಭಗುಡಿ ಗ್ರಾಮದ ಜನರಿಗೆ ನಿವೇಶನ ಬೇಕು. ಇಲ್ಲಿ ಸರ್ಕಾರಿ ಜಮೀನು ಲಭ್ಯವಿದ್ದು, ನಿವೇಶನ ಮಂಜೂರು ಮಾಡಬೇಕಿದೆ. ಲಕ್ಷ್ಮೀಪುರ, ಸತ್ತೂರು ಗ್ರಾಮಗಳಲ್ಲಿ ಕೆಲವೊಂದು ಕುಟುಂಬಗಳಿಗೆ ಇರುವ ಮನೆಗಳು ಬಿದ್ದಿವೆ. ಇರಲು ಮನೆ ಇಲ್ಲ. ತೌಡೂರು, ಜಿಟ್ಟನಕಟ್ಟಿ ಗ್ರಾಮಗಳ ವಿವಿಧ ಕುಟುಂಬಗಳಿಗೆ ವಾಸಿಸಲು ಮನೆಗಳು ಇಲ್ಲ. ಬಡ ಕೂಲಿಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಿಕೊಡಬೇಕೆಂದು ಅವರು ಕೋರಿದ್ದಾರೆ.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಭಾಗ್ಯಮ್ಮ ಬಿ., ಶ್ರುತಿ ನೇತೃತ್ವದಲ್ಲಿ ಅನೇಕ ಬಡ ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.