ಚನ್ನಪಟ್ಟಣ: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನು ದಲಿತರಿಗೆ ಸೂರು, ಸ್ಮಶಾನಭೂಮಿ ಕಲ್ಪಿಸಲಾಗಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ದಲಿತರ ಬಡಾವಣೆಗಳ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ಅಸ್ಪೃಶ್ಯತೆ ತೊಡೆದುಹಾಕುವಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ವಿಫಲವಾಗಿದೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಸೀಲ್ದಾರ್ ಮಹೇಂದ್ರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಹಾಗೂ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ತಮ್ಮ ಸಮಸ್ಯೆಗಳ ಕುರಿತು ತಾಲೂಕು ಆಡಳಿತದ ಗಮನ ಸೆಳೆಯುವ ಜತೆಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಗೌರವ ನೀಡದ ಅಧಿಕಾರಿಗಳು:
ಸರ್ಕಾರಿ ಕಚೇರಿಗಳಲ್ಲೇ ದಲಿತ ಸಮುದಾಯದ ಸಿಬ್ಬಂದಿ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕೆಲ ಅಧಿಕಾರಿಗಳು ಕಿರಿಯ ದಲಿತ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಗೌರವಯುತವಾಗಿ ನಡೆಸಿಕೊಳ್ಳದ ಆರೋಪಗಳಿವೆ. ಅರಿವು ಮೂಡಿಸಬೇಕಾದ ಹಿರಿಯ ಅಧಿಕಾರಿಗಳೇ ಈ ರೀತಿ ನಡೆದುಕೊಂಡರೆ, ದಲಿತರ ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.ಸ್ಮಶಾನಭೂಮಿಗೆ ಆಗ್ರಹ:
ತಾಲೂಕಿನ ಎಷ್ಟೋ ಗ್ರಾಮಗಳಲ್ಲಿ ದಲಿತರ ಶವ ಸಂಸ್ಕಾರಕ್ಕೆ ಇಂದಿಗೂ ಸ್ಮಶಾನವಿಲ್ಲ. ಈ ಕುರಿತು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲವೆಡೆ ಸ್ಮಶಾನ ಭೂಮಿ ಇದೆಯಾದರೂ ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ. ಈ ಕೂಡಲೇ ಅಗತ್ಯವಿರುವೆಡೆ ಸ್ಮಶಾನ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಿ, ಇಲ್ಲವೇ ಗ್ರಾಮಗಳಲ್ಲಿರುವ ಸ್ಮಶಾನಗಳನ್ನು ಸಾರ್ವನಿಕ ಎಂದು ಘೋಷಿಸಿ ನಮಗೂ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿ ಎಂದು ಆಗ್ರಹಿಸಿದರು.ನಿವೇಶನ ನೀಡಿ:
ಅವಿಭಕ್ತ ದಲಿತ ಕುಟುಂಬಗಳು ಕಿಷ್ಕೆಂದೆಯಂತಹ ಮನೆಗಳಲ್ಲಿ ವಾಸಮಾಡುತ್ತಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಸಣ್ಣ ಮನೆಗಳಲ್ಲೇ ಏಳೆಂಟು ಜನ ವಾಸಿಸುವಂತಾಗಿದೆ. ಈ ಕೂಡಲೇ ತಾಲೂಕು ಆಡಳಿತ ನಗರ ಹಾಗೂ ಗ್ರಾಮಾಂತರ ಪ್ರದೇಶಲ್ಲಿ ನಿವೇಶನ ಕಲ್ಪಿಸಲು ಮುಂದಾಗಬೇಕು. ಶತಮಾನಗಳಿಂದ ಇನ್ನು ಎಷ್ಟೋ ದಲಿತರು ಭೂರಹಿತರಾಗಿದ್ದಾರೆ. ಬಲಾಢ್ಯರಿಗೆ ಎರಡುಮೂರು ಕಡೆ ಭೂಮಿ ಮಂಜೂರು ಮಾಡಿದೆ. ತಾರತಮ್ಯ ಸರಿಪಡಿಸಿ ದಲಿತ ಸಮುದಾಯದವರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.ನಗರಸಭೆ ನಿರ್ಲಕ್ಷ್ಯ:
ನಗರ ವ್ಯಾಪ್ತಿಯಲ್ಲಿ ದಲಿತ ಸಮುದಾಯದವರು ವಾಸಿಸುವ ಬಡಾವಣೆಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಇತರೆ ಸಮುದಾಯದವರ ಬಡಾವಣೆಗಳನ್ನು ಸ್ವಚ್ಛ ಮಾಡುವ ನಗರಸಭೆ, ದಲಿತರ ಬಡಾವಣೆಗಳ ಸ್ವಚ್ಛತೆ ಕಡೆಗಣಿಸಿದೆ. ನಮ್ಮ ಅಭಿವೃದ್ಧಿ ಕುಂಠಿತಕ್ಕೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಇಂದಿನ ಸಭೆಗೆ ಪೌರಾಯುಕ್ತರು ಗೈರಾಗಿರುವುದೇ ಇದಕ್ಕೊಂದು ನಿರ್ದಶನ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪೂರ್ಣಗೊಳ್ಳದ ಅಂಬೇಡ್ಕರ್ ಭವನ:
ನಗರದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿ ಎರಡು ವರ್ಷವಾದರೂ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಲಾಗಿಲ್ಲ. ಅದೇ ರೀತಿ ಕೆಲ ಗ್ರಾಮಗಳಲ್ಲೂ ಅಂಬೇಡ್ಕರ್ ಭವನ ಹಾಗೂ ಬಾಬು ಜನಜೀವನ್ ರಾಂ ಭವನಗಳು ಪಾಳು ಬಿದ್ದಿವೆ. ಇದನ್ನು ದುರಸ್ತಿಗೊಳಿಸಿ ಗ್ರಂಥಾಲಯವನ್ನಾದರೂ ತೆರೆಯಬೇಕು ಎಂದು ಆಗ್ರಹಿಸಿದರು.ನಗರ ಪೊಲೀಸ್ ಠಾಣೆಯ ಮುಂದಿರುವ ಅಂಬೇಡ್ಕರ್ ಪುತ್ಥಳಿ ಬಳಿ ಕಸ ಸುರಿಯುವುದನ್ನು ನಿಲ್ಲಿಸಬೇಕು. ಹಿಂದೆ ನಗರಸಭೆಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್‌ಶಿಪ್ ಮುಂದುವರಿಸಬೇಕು. ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಗಳನ್ನು ಆಲಿಸುವ ವ್ಯವಧಾನವಿಲ್ಲ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಬದುಕುವುದಾದರೂ ಹೇಗೆ ಎಂದು ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಮಹೇಂದ್ರ, ಇಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳನ್ನು ಪಟ್ಟಿಮಾಡಿಕೊಳ್ಳಲಾಗಿದೆ. ಸ್ಮಶಾನ ಇಲ್ಲದ ಕಡೆಗಳಲ್ಲಿ ಊರಿನಿಂದ ಜಮೀನು ನೀಡಲು, ಸರ್ಕಾರಿ ಜಮೀನು ಲಭ್ಯವಿರುವ ಕಡೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲಾಗುವುದು. ನಗರದ ಸಮಸ್ಯೆಗೆ ಸಂಬಂಧಿಸಿದಂತೆ ಪೌರಾಯುಕ್ತರಿಗೆ ಪತ್ರ ಬರೆದು ಸಮಸ್ಯೆ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ದಲಿತ ಮುಖಂಡರಾದ, ಮತ್ತೀಕೆರೆ ಹನುಮಂತಯ್ಯ, ಕೋಟೆ ಸಿದ್ದರಾಮಯ್ಯ, ಶೇಖರ್, ಕೂಡ್ಲೂರು ಸಿದ್ದರಾಮು, ಕಿರಣ್ ಕುಮಾರ್, ಶಿವಾನಂದ, ಅಪ್ಪಗೆರೆ ಶ್ರೀನಿವಾಸಮೂರ್ತಿ, ದೇವರಾಜು, ಬಿವಿಎಸ್ ಕುಮಾರ್ ಇತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸರೋಜಮ್ಮ, ಹಿಂದುಳಿದ ವರ್ಗಗಳ ಇಲಾಖೆಯ ಮೋಹನ್, ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಟಿ.ಕೃಷ್ಣ, ಟಿಎಚ್‌ಒ ಡಾ.ರಾಜು, ಸಂಚಾರಿ ಪಿಎಸ್‌ಐ ಪಾಂಡು ಇತರರಿದ್ದರು.ಬಾಕ್ಸ್.................
28ರಲ್ಲಿ 19ಪ್ರಕರಣಕ್ಕೆ ಬಿ ರಿಪೋರ್ಟ್!
ಕಳೆದು ಒಂದು ವರ್ಷದ ಅವಧಿಯಲ್ಲಿ ತಾಲೂಕಿನಲ್ಲಿ 28 ಅಟ್ರಾಸಿಟಿ ಪ್ರಕರಣಗಳು ದಾಖಲಾಗಿವೆ. ಆದರೆ, ಅದರಲ್ಲಿ 19 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಲಾಗಿದೆ. ಯಾವುದೇ ಪ್ರಕರಣದಲ್ಲೂ ಆರೋಪಿಯನ್ನು ದಸ್ತಗಿರಿ ಮಾಡುವುದಿಲ್ಲ. ಇದು ಕೆಲವರಲ್ಲಿ ನಾವು ಏನು ಮಾಡಿದರು ದಕ್ಕಿಸಿಕೊಳ್ಳುತ್ತೇವೆ ಎಂಬ ಮನೋಭಾವ ಮೂಡವಂತೆ ಮಾಡಿದೆ. ಅದೇ ದಲಿತರ ಮೇಲೆ ಯಾವುದಾದರೂ ಪ್ರಕರಣ ದಾಖಲಾದರೆ ರಾತ್ರೋರಾತ್ರಿ ಅವರನ್ನು ಬಂಧಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪೊಟೋ೩೧ಸಿಪಿಟಿ೧,೨:
ಚನ್ನಪಟ್ಟಣ ತಾಪಂ ಕಚೇರಿಯಲ್ಲಿ ತಹಸೀಲ್ದಾರ್ ಮಹೇಂದ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಹಾಗೂ ಹಿತರಕ್ಷಣಾ ಸಮಿತಿ ಸಭೆ ನಡೆಯಿತು.