ಕನ್ನಡಪ್ರಭ ವಾರ್ತೆ ತಿಪಟೂರು
ರೈತರ ಬದುಕಿನ ನೀರಿನ ಮೂಲವಾದ ಕೆರೆಗಳು ಅಭಿವೃದ್ಧಿಯಾಗುತ್ತಿಲ್ಲ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಆಸರೆಯಾಗಿರುವ ಕೆರೆ- ಕಟ್ಟೆಗಳು ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಗಿಡಗಂಟೆಗಳು ಬೆಳೆದು ಹೂಳು ತುಂಬಿಕೊಂಡು ಕಣ್ಮರೆಯಾಗುತ್ತಿವೆ.ಒಂದು ಕಾಲದಲ್ಲಿ ಯಾವುದೇ ಹಳ್ಳಿಗಳಿಗೆ ಹೋದರೂ ಊರ ಮುಂದಿನ ಕೆರೆ-ಕಟ್ಟೆಗಳು ಬಿರು ಬೇಸಿಗೆಯಲ್ಲೂ ನೀರು ತುಂಬಿ ತುಳುಕುತ್ತಿದ್ದವು. ಆ ಕೆರೆಯ ನೀರಿನ ಸೊಬಗು ಹಾಗೂ ಸುತ್ತಮುತ್ತಲಿನ ಹಚ್ಚ ಹಸಿರಿನ ಅಂದ- ಚೆಂದ ಪಕ್ಷಿಗಳ ಕಲರವದ ಪರಿಸರವೇ ಒಂದು ಆಕರ್ಷಣೆಯಾಗಿತ್ತು. ಆದರೆ, ಈಗೀಗ ಕೆರೆ- ಕಟ್ಟೆಗಳೆಂದರೆ ಅದು ಕಾಡು, ಜಾಲಿ ಗಿಡ, ಗಂಟೆಗಳ ಆವಾಸ ಸ್ಥಾನದಂತಾಗಿ ಬಿಟ್ಟಿವೆ. ಯಾವ ಊರಿನ ಕೆರೆಕಟ್ಟೆಗಳನ್ನು ನೋಡಿದರೂ ಕೆರೆ ಏರಿಗಳಿಗಿಂತ ಕಾಡು ಜಾಲಿಗಿಡಗಳೇ ಎತ್ತರವಾಗಿ ಬೆಳೆದು ಕೆರೆಗಳನ್ನೇ ನುಂಗಿ ನೀರು ಕುಡಿದುಬಿಟ್ಟಿವೆ.
ಈಗಿನ ಕೆರೆಗಳಲ್ಲಿ ಯಾವ ಮೂಲೆ ಹುಡುಕಿದರೂ ಹನಿ ನೀರಿನ ಕುರುಹು ಸಹ ಸಿಗುವುದಿಲ್ಲ. ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ಬಹಳ ಹಿಂದಿನಿಂದಲೂ ಗ್ರಾಮೀಣರ ಬೆನ್ನಲುಬಾಗಿವೆ. ಆದರೆ ದುರ್ದೈವ ಎಂದರೆ ಇಂದು ಈ ಕೆರೆಗಳು ಸದ್ದಿಲ್ಲದೇ ಕ್ಷಿಪ್ರಗತಿಯಲ್ಲಿ ಅವನತಿಯ ಹಾದಿಯಲ್ಲಿ ಸಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮತ್ತೊಂದೆಡೆ ಎಲ್ಲರಿಂದಲೂ ಕೆರೆಗಳ ಒತ್ತುವರಿ, ನಿರಂತರವಾಗಿ ಕೈಕೊಡುತ್ತಿರುವ ಮಳೆರಾಯನ ಸಿಟ್ಟಿನಿಂದ ಕೆರೆಗಳೆಲ್ಲ ಬರಡು ಭೂಮಿಯಂತಾಗಿ ಗಿಡಗಂಟೆಗಳ ಆಶ್ರಯ ತಾಣಗಳಾಗಿವೆ.ಕೆರೆಗಳ ಕಾಯಕಲ್ಪ ಯಾವಾಗ?:
ತಾಲೂಕಿನ ಹಲವಾರು ಕೆರೆಗಳಿಗೆ ತುರ್ತಾಗಿ ಕಾಯಕಲ್ಪವಾಗಿಬೇಕಿದೆ. ಹೂಳು, ಮರ, ಗಿಡ- ಗಂಟೆಗಳಿಂದ ತುಂಬಿಕೊಂಡು ನೀರಿನ ಸಂಗ್ರಹಣ ಸಾಮರ್ಥ್ಯ ಕ್ಷೀಣಿಸಿರುವ ಕೆರೆಗಳ ಹೂಳೆತ್ತುವ ಕೆಲಸವನ್ನು ಸರ್ಕಾರ, ಜಿಲ್ಲಾಡಳಿತ ವೈಜ್ಞಾನಿಕವಾಗಿ ಸಮರೋಪಾದಿಯಲ್ಲಿ ಮಾಡಬೇಕಿದೆ. ಆದರೆ ಈ ಕೆಲಸ ಮಾಡದ ಕಾರಣ ರೈತರೇ ಹತ್ತಿರದ ಕೆರೆ-ಕಟ್ಟೆಗಳಲ್ಲಿ ಅವೈಜ್ಞಾನಿಕ, ಅನಧಿಕೃತವಾಗಿ ಹೂಳೆತ್ತಿಕೊಂಡು ತಮ್ಮ ತೋಟ, ಜಮೀನುಗಳಿಗೆ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಕಾಮಗಾರಿ, ಇಟ್ಟಿಗೆ ಫ್ಯಾಕ್ಟರಿಗಳಿಗೆ ಕದ್ದು ಕೆರೆಗಳ ಒಡಲನ್ನೇ ಬಗೆದು ಮಣ್ಣು ಮಾರಿಕೊಂಡು ದುಡ್ಡು ಮಾಡುತ್ತಿದ್ದಾರೆ.ಮನಸೋಇಚ್ಛೆ ಕೆರೆ ಹೂಳನ್ನು ಅಗೆದು ಅಲ್ಲಲ್ಲಿ ಆಳವಾದ ಗುಂಡಿಗಳನ್ನು ಮಾಡುತ್ತಿದ್ದಾರೆ. ಕೆಲ ಜೆಸಿಬಿಯವರು ಅವೈಜ್ಞಾನಿಕವಾಗಿ ಕೆರೆಗಳ ಹೂಳೆತ್ತಿ ಜಮೀನುಳ್ಳವರಿಗೆ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಿಂದ ಕೆರೆಯ ಮೇಲ್ಭಾಗದ ಮಣ್ಣಿನ ಪದರ ನಾಶವಾಗುತ್ತಿದ್ದು, ಸಂಗ್ರಹವಾಗುವ ನೀರು ಬೇಸಿಗೆ ಆರಂಭಕ್ಕೂ ಮುನ್ನವೇ ಖಾಲಿಯಾಗುತ್ತಿರುವುದು ಆತಂಕಕಾರಿಯಾಗಿದೆ.
ಕೆರೆಗಳಲ್ಲಿ ಆಡು, ಕುರಿ, ದನಕರುಗಳಿಗೆ ಕುಡಿಯಲು ನೀರಲ್ಲದೇ ಪರದಾಡುವಂತಾಗಿದ್ದು, ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ತಾಲೂಕಿನ ಒಳಗಡೆಯೇ ಹಾಯ್ದು ಹೋಗುವ ಹೇಮಾವತಿ ನಾಲೆಯ ನೀರನ್ನು ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಸಮಪರ್ಕವಾಗಿ ಬಳಸಿಕೊಳ್ಳದ ಕಾರಣ, ಕಲ್ಪತರು ನಾಡಿನಲ್ಲಿ ಸಮೃದ್ಧಿಯಾಗಿದ್ದ ಕೆರೆಕಟ್ಟೆಗಳು ನೀರಿಲ್ಲದೆ ಬಣಗುಡುವಂತಾಗಿವೆ. ಇನ್ನಾದರೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ತೀವ್ರ ಗಮನ ಹರಿಸುವರೋ ಎಂದು ಕಾಯ್ದು ನೋಡಬೇಕಿದೆ.ಬಹುಬೇಗ ನೀರು ಇಂಗದಂತೆ ಕೆಲಸ ಮಾಡುವ ಕೆರೆಯಲ್ಲಿನ ಎರೆಮಣ್ಣ (ಗೂಡು)ನ್ನು ಕೆಲವರು ಜಮೀನುಗಳಿಗೆ ಅವೈಜ್ಞಾನಿಕ ಹಾಗೂ ಅನಧಿಕೃತವಾಗಿ ಜೆಸಿಬಿ ಯಂತ್ರಗಳಿಂದ ಅಗೆದು ಟ್ರ್ಯಾಕ್ಟರ್‌ಗಳ ಮೂಲಕ ಸಾಗಿಸುತ್ತಿದ್ದಾರೆ. ಕೆರೆಗಳಲ್ಲಿ ಕೇವಲ ಮರಳಿನ ಅಂಶ ಮಾತ್ರ ಉಳಿದುಕೊಳ್ಳುತ್ತಿದ್ದು, ಮಳೆಗಾಲದಲ್ಲಿ ಸಂಗ್ರಹವಾಗುವ ನೀರು ಬಹುಬೇಗ ಇಂಗಿ ಹೋಗುತ್ತಿದೆ. ಈ ಬಗ್ಗೆ ಕಂದಾಯ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. -ಚಂದ್ರಶೇಖರ್, ರಂಗಾಪುರ, ಕೃಷಿಕರು.ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ಹಾಗೂ ಹೇಮಾವತಿ ಯೋಜನೆಯಿಂದ ನೀರು ತುಂಬಿಸುವ ಕೆರೆಗಳ ನಿರ್ವಹಣೆಗೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹಾಗೂ ನಮ್ಮ ಇಲಾಖೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜಿಪಂ ವ್ಯಾಪ್ತಿಗೆ ಒಳಪಡುವ ಹಲವಾರು ಕೆರೆಗಳ ನಿರ್ವಹಣೆ ಬಗ್ಗೆ ಸರ್ಕಾರ ಹೆಚ್ಚು ಒತ್ತು ನೀಡಿ ಕೆರೆಗಳನ್ನು ಸಂರಕ್ಷಿಸುವ ಕೆಲಸ ಮಾಡಿದಲ್ಲಿ ಅಂತರ್ಜಲ ವೃದ್ಧಿಯಾಗುವುದಲ್ಲದೇ, ಕೆರೆ-ಕಟ್ಟೆಗಳಲ್ಲಿ ನೀರು ನಿಲ್ಲುವ ಮೂಲಕ ಜನ-ಜಾನುವಾರುಗಳಿಗೆ ಆಸರೆಯಾಗುತ್ತವೆ.
-ದೊಡ್ಡಯ್ಯ ಎಇಇ, ಸಣ್ಣ ನೀರಾವರಿ ಇಲಾಖೆ, ತಿಪಟೂರು ವಿಭಾಗ.