ಹುಬ್ಬಳ್ಳಿ: ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ಯಾವುದೇ ಬೇಡಿಕೆಗಳ ಈಡೇರಿಸದೇ ರಾಜ್ಯ ಸರಕಾರ ಜೈನ ಸಮಾಜಕ್ಕೆ ತೀವ್ರವಾದ ಅನ್ಯಾಯ ಮಾಡಿದೆ. ಸಮಾಜದ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸದಿದ್ದರೆ ವಿಧಾನಸೌಧದ ಎದುರು ದೇಹ ತ್ಯಾಗದ ಸಲ್ಲೇಖನ ವ್ರತ ಕೈಗೊಳ್ಳುತ್ತೇನೆ ಎಂದು ವರೂರು ನವ್ರಗ್ರಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದ್ದಾರೆ. ಮೊದಲ ಹಂತದ ಹೋರಾಟವಾಗಿ ಮಾ. 19ರಂದು ಬೆಂಗಳೂರು ಚಲೋ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇಲ್ಲಿನ ವರೂರು ನವಗ್ರಹ ತೀರ್ಥ ಕ್ಷೇತ್ರದ ಸಭಾಭವನದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು.ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಮಾಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ಪ್ರಮುಖ ಬೇಡಿಕೆಗಳನ್ನೇ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಚಲೋಹೋರಾಟದ ಮೊದಲ ಹಂತವಾಗಿ ಸರ್ಕಾರದ ಜೈನ ವಿರೋಧಿ ನೀತಿಯನ್ನು ಖಂಡಿಸಿ ಮಾ.19ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ನಂತರ ಮಹಾವೀರ ಜಯಂತಿ ಆಚರಣೆ ಮೆರವಣಿಗೆಯನ್ನು ಪ್ರತಿಭಟನಾ ಮೆರವಣಿಗೆಯನ್ನಾಗಿ ನಡೆಸಲಾಗುವುದು ಎಂದರು.
ಮಾ. 18ರಂದು ರಾತ್ರಿ ಪ್ರತಿ ತಾಲೂಕಿನ ಹಳ್ಳಿ, ನಗರ ಪ್ರದೇಶದಿಂದ ಜೈನ ಸಮಾಜದ ಬಾಂಧವರು 500ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರಿನತ್ತ ಪ್ರಯಾಣಿಸಲಿದ್ದಾರೆ. ಮಾ. 19ರಂದು ಬೆಳಗ್ಗೆ 9ಕ್ಕೆ ಸಚಿವ ಜಮೀರ ಅಹ್ಮದ್ ಅವರನ್ನು ಭೇಟಿಯಾಗಿ, ನಿಗಮ ರಚನೆಗೆ ಮನವಿ ನೀಡಿ, ಅವರನ್ನು ಸತ್ಕರಿಸಲಾಗುವುದು. ಜತೆಗೆ ಅಧಿವೇಶನದಲ್ಲಿ ಜೈನ ಸಮಾಜದ ಪರ ಧ್ವನಿ ಎತ್ತಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಸತ್ಕರಿಸಲಾಗುವುದು. ನಂತರ ಎಲ್ಲ ಸಚಿವರನ್ನು ಭೇಟಿಯಾಗಿ ಕೊನೆಯ ಮನವಿ ಸಲ್ಲಿಸಲಾಗುವುದು ಎಂದರು.ಸಮಾಜದ ಹಿತಕ್ಕಾಗಿ ನಾವು ಹಲವಾರು ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಕೇವಲ ಭರವಸೆ ಮಾತ್ರ ಸಿಕ್ಕಿದೆ. ಬಜೆಟ್‌ನಲ್ಲಿ ಸರ್ವರಿಗೂ ಸಮಪಾಲು ಇರಬೇಕು. ಆದರೆ ನಮ್ಮ ಸಮಾಜಕ್ಕೆ ಅತೀ ಕಡಿಮೆ ಅನುದಾನ ನೀಡಿದ್ದಾರೆ ಎಂದರು.
ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಕೇಂದ್ರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ ಸ್ಥಾಪನೆ ಮಾಡಬೇಕು. ಬಜೆಟ್ ಅಧಿವೇಶನದಲ್ಲಿ ನಿಗಮ ಮಂಡಳಿ ಸ್ಥಾಪನೆಗೆ ಸರಕಾರ ಒಪ್ಪಿಗೆ ಸೂಚಿಸುತ್ತಿದೆ ಎಂಬ ಆಶಾಭಾವನೆ ಇತ್ತು ಎಂದರು.ಪ್ರತಿಭಟನಾ ಮೆರವಣಿಗೆ
ಏಪ್ರಿಲ್ 10 ರಂದು ನಡೆಯುವ ಮಹಾವೀರ ಜಯಂತಿ ದಿನ ಸರಕಾರದ ವಿರುದ್ಧ ಮೌನ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು. ಇಷ್ಟಾದರೂ ಸರಕಾರ ಬೇಡಿಕೆ ಈಡೇರಿಕೆಗೆ ನಿರ್ಲಕ್ಷ್ಯ ಮಾಡಿದರೆ ಜೂನ್ 8ರಂದು ಬೆಳಗಾವಿ ಜಿಲ್ಲೆಯ ಐನಾಪೂರದಲ್ಲಿ ಸಮಾಜದ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಆಯೋಜಿಸಲಾಗುವುದು. ಅಲ್ಲಿ ಮುಂದಿನ ಹೋರಾಟದ ಬಗ್ಗೆ ಸಮಾಜದ ಸಭೆ ನಡೆಸಿ ನಿರ್ಧರಿಸಲಾಗುವುದು. ಜತೆಗೆ ಪ್ರತಿ ಹಳ್ಳಿಗೆ ಖುದ್ದಾಗಿ ಭೇಟಿ ನೀಡಿ, ನಿಗಮ ಮಂಡಳಿ ರಚನೆ ಬಗ್ಗೆ ಸಮಾಜದ ಬಾಂಧವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂದೀಪ ಕ್ಯಾತನವರ ಇದ್ದರು.ಕಣ್ಣೀರು ಹಾಕಿದ ಸ್ವಾಮೀಜಿ
ರಾಜ್ಯ ಸರಕಾರ ಜೈನ ಸಮಾಜ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಇದೇ ರೀತಿ ನಿರ್ಲಕ್ಷ್ಯವಹಿಸಿದಲ್ಲಿ ನಾನು ಸಮಾಜಕ್ಕಾಗಿ ವಿಧಾನಸೌಧ ಎದುರು ಸಲ್ಲೇಖ ವ್ರತದ (ಆಮರಣ ಉಪವಾಸ) ಮೂಲಕ ದೇಹ ತ್ಯಾಗ ಮಾಡುತ್ತೇನೆ ಎಂದು ಗುಣಧರ ನಂದಿ ಮಹಾರಾಜ ಕಣ್ಣೀರು ಸುರಿಸುತ್ತಾ ಎಚ್ಚರಿಕೆ ಸಂದೇಶ ನೀಡಿದರು.
ಬುದ್ಧಿವಂತ ಸಿಎಂ ಸಿದ್ದರಾಮಯ್ಯ ಅವರು, 2 ವರ್ಷದಿಂದ ನಾವು ಮನವಿ ಸಲ್ಲಿಸುತ್ತಿದ್ದರೂ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅವರ ಚಿಂತನೆಗಳ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವುದೇಕೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ನಮ್ಮ ಸಮಾಜ ಮಾಡಿದ ಅಪರಾಧ ಏನು? ಎಲ್ಲ ಸಮಯದಲ್ಲಿ ನಾವು ಅವರ ಕೈ ಹಿಡಿದಿದ್ದೇವೆ. ಸಿದ್ದರಾಮಯ್ಯ ಸರಕಾರಕ್ಕೆ ಇದು ನಾನು ಕೊಡುವ ಕೊನೆಯ ಮನವಿ. ಬೇಡಿಕೆ ಈಡೇರಿದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದರು.ನಿರ್ದಯಿ ಮುಖ್ಯಮಂತ್ರಿ
ಡಿಸಿಎಂ ಡಿ.ಕೆ. ಶಿವಕುಮಾರ ಬಂದಾಗ ಅವರಿಗೆ ಮುಖ್ಯಮಂತ್ರಿಯಾಗಲಿ ಎಂಬ ಆಶೀರ್ವಾದ ಮಾಡಿದ್ದೇನೆ ಹೊರತು, ಅವರನ್ನು ಆ ಹುದ್ದೆಗೇರಿಸಿ, ಸಿದ್ದರಾಮಯ್ಯ ಅವರನ್ನು ಇಳಿಸಿ ಎಂದರ್ಥವಲ್ಲ. ಜೈನ ಸಮಾಜವನ್ನು ನಿರ್ಲಕ್ಷ್ಯ ಮಾಡುತ್ತಿರುವ ಸಿದ್ದರಾಮಯ್ಯ ನಿರ್ದಯಿ ಮುಖ್ಯಮಂತ್ರಿ. ಸರಕಾರದ ಆಡಳಿತದಲ್ಲಿ ನಮ್ಮ ಸಮಾಜದವರು ಕಸಗುಡಿಸುವ ಹುದ್ದೆಯಲ್ಲೂ ಇಲ್ಲ. ಇದು ನೋವಿನ ಸಂಗತಿ ಎಂದು ಕಣ್ಣೀರು ಸುರಿಸಿದರು.