ಕೃಷಿ ನಿರ್ಲಕ್ಷಿಸಿದರೆ ದೇಶಕ್ಕೆ ಸಮಸ್ಯೆ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ

KannadaprabhaNewsNetwork |  
Published : Sep 18, 2025, 01:10 AM IST
ಫೋಟೋ : 17ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಪ್ರತಿವರ್ಷ ದೇಶದಲ್ಲಿ 1.8 ಲಕ್ಷ ರೈತರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಕೃಷಿ ನಿರ್ಲಕ್ಷಿಸಿದರೆ ದೇಶವೇ ಸಮಸ್ಯೆಗೆ ಒಳಗಾಗಲಿದೆ. ರೈತರನ್ನು ನೆನೆದೇ ನಾವು ಉಣಬೇಕು.

ಹಾನಗಲ್ಲ: ಉಪಕರಿಸಿದವರನ್ನು ಸ್ಮರಿಸಿ ಅಭಿನಂದಿಸುವುದು ನಮ್ಮ ಧರ್ಮ. ಎಲ್ಲರೂ ರೈತರನ್ನು ನೆನೆದು ಉಣ್ಣಬೇಕು. ಆಹಾರ ಭದ್ರತೆಗಾಗಿ ಹಸಿರು ಕ್ರಾಂತಿ ನಡೆದಿದೆ, ವರದಾ ಬೇಡ್ತಿಗೆ ಸರ್ಕಾರ ಸ್ಫಂದಿಸಬೇಕಾಗಿದೆ. ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆಯೋಣ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ಬುಧವಾರ ಇಲ್ಲಿನ ಸದಾಶಿವ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ ರೈತ ಸಂಕಷ್ಟಕ್ಕೆ ಸ್ಪಂದಿಸಿದ ಅಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರತಿವರ್ಷ ದೇಶದಲ್ಲಿ 1.8 ಲಕ್ಷ ರೈತರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಕೃಷಿ ನಿರ್ಲಕ್ಷಿಸಿದರೆ ದೇಶವೇ ಸಮಸ್ಯೆಗೆ ಒಳಗಾಗಲಿದೆ. ರೈತರನ್ನು ನೆನೆದೇ ನಾವು ಉಣಬೇಕು ಎಂದರು.

ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಆತ್ಮಹತ್ಯೆ ಹಾವೇರಿ ಜಿಲ್ಲೆಯಲ್ಲಿ ನಡೆದಿರುವುದು ವಿಷಾದದ ಸಂಗತಿ. ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರ ಅಲ್ಲ. ನಾವು ನಿಮ್ಮೊಂದಿಗಿದ್ದೇವೆ. ಅಧಿಕಾರಿಗಳು ಕೂಡ ರೈತರ ಸಮಸ್ಯೆ ಆಲಿಸಿ ಸಂಕಷ್ಟಕ್ಕೆ ಸ್ಪಂದಿಸಬೇಕು.

ಅಧಿಕಾರಿಗಳು ಮಾತ್ರವಲ್ಲ, ವಿಧಾನಸೌಧದಲ್ಲಿ ನಮ್ಮ ಪ್ರತಿನಿಧಿಯಾಗಿರುವವರೂ ರೈತರ ಹಿತಕ್ಕಾಗಿ ಸರಿಯಾಗಬೇಕು. ನೀವು ನಮ್ಮ ಸಹನೆ ಪರೀಕ್ಷಿಸುವ ಗೊಡವೆಗೆ ಯಾರೂ ಹೋಗಬೇಡಿ. ಮುಗ್ಧ ರೈತರ ಬಾಳು ಹಸನಾಗಲು ಆಸಕ್ತಿಯಿಂದ ಕೆಲಸ ಮಾಡಿದರೆ ನಾವು ನಿಮ್ಮನ್ನು ಗೌರವಿಸುತ್ತೇವೆ, ಅಭಿನಂದಿಸುತ್ತೇವೆ, ಸದಾ ನೆನಪಿನಲ್ಲಿರುತ್ತೀರಿ. ತಪ್ಪಿದರೆ ಹೋರಾಟ, ತಪ್ಪಿತಸ್ಥರಿಗೆ ಶಿಕ್ಷೆಗೂ ನಮ್ಮ ಒತ್ತಾಸೆ ಮುಂದುವರಿಯುತ್ತದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಇಡೀ ರಾಜ್ಯದಲ್ಲಿಯೇ ರೈತರ ಸಹಾಯಕ್ಕೆ ನಿಂತ ಅಧಿಕಾರಿಗಳನ್ನು ಗೌರವಿಸಿದ ಜಿಲ್ಲೆ ಹಾವೇರಿ ಆಗಿದೆ. ನಾವು ನಮ್ಮ ಹಕ್ಕಿಗಾಗಿ ಶಾಂತಿಯುತವಾಗಿ ಬದ್ಧತೆಯಿಂದ ಹೋರಾಟ ಮಾಡಿದ್ದೇವೆ. ಸರ್ಕಾರ ರೈತರ ವಿಷಯದಲ್ಲಿ ಸದಾ ಎಚ್ಚರಿಕೆಯಿಂದ ಕೆಲಸ ಮಾಡಲಿ. ರೈತ ಧ್ವನಿ ಸರ್ಕಾರಕ್ಕೆ ಮುಟ್ಟಿಸುವಂತೆ ಹೋರಾಟಕ್ಕೆ ನಾವು ಸಿದ್ಧ. ಮಾರಕ ಕಾನೂನು ತಂದು ರೈತರನ್ನು ಕಂಗೆಡಿಸಿದರೆ ಸಹಿಸುವುದಿಲ್ಲ. ನಮ್ಮದು ನ್ಯಾಯಕ್ಕಾಗಿ ಹೋರಾಟ. ಸಂಘಟನೆಯಲ್ಲಿ ಶಕ್ತಿ ಇದೆ ಎಂದರು.ಸನ್ಮಾನ: ಹಾನಗಲ್ಲ ತಾಲೂಕಿನ ರೈತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ರೈತರ ಪ್ರೀತಿಗೆ ಪಾತ್ರರಾದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ, ಜಂಟಿ ನಿರ್ದೇಶಕ ಬಿ. ಮಂಜುನಾಥ, ಮುಂಡರಗಿ ತಹಸೀಲ್ದಾರ್ ಪಿ.ಎಸ್. ಯರ‍್ರಿಸ್ವಾಮಿ ಅವರನ್ನು ಜಿಲ್ಲಾ ರೈತ ಸಂಘದಿಂದ ವಿಶೇಷ ಅಭಿನಂದನಾ ಗೌರವ ಸಲ್ಲಿಸಲಾಯಿತು.

ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಆಶಯ ನುಡಿ ತಿಳಿಸಿದರು. ರೈತ ಸಂಘದ ಮುಖಂಡರಾದ ಮಾಲತೇಶ ಪೂಜಾರ, ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್. ಮುಲ್ಲಾ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ. ಮಲ್ಲಿಕಾರ್ಜುನ, ಶಿವಕುಮಾರ ಮಲ್ಲಾಡದ, ಎಸ್. ರೇಣುಕಮ್ಮ, ಸಿದ್ದರಾಮಯ್ಯ ಭರಗಿಮಠ, ಜಿ.ಆರ್. ವೀರಭದ್ರಸ್ವಾಮಿ, ವಿ.ಎಸ್. ಮರಿಗೌಡ್ರ, ಎನ್. ಗಿರೀಶ, ರವೀಂದ್ರ ಯಲಿಗಾರ, ಬಸವರಾಜ ಕೊಪ್ಪದ, ಗುರುನಾಥ ಗವಾಣಿಕರ ಅತಿಥಿಗಳಾಗಿದ್ದರು.

ಸುಜಾತಾ ನಂದಿಶೆಟ್ಟರ ಸಂಗಡಿಗರು ಪ್ರಾರ್ಥನೆ ಹಾಡಿದರು. ರುದ್ರಗೌಡ ಕಾಡಗೌಡ್ರ ಸ್ವಾಗತಿಸಿದರು. ಕಿರಣ ಹೂಗಾರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ