ವಿಪತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಹಿಸಲ್ಲ: ಕೋಲಾರ ಡಿಸಿ

KannadaprabhaNewsNetwork |  
Published : Jun 09, 2026, 01:15 AM IST
೮ಕೆಎಲ್‌ಆರ್-೧೦ಕೋಲಾರದ ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ’ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿ’ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಮುಂಬರುವ ಮುಂಗಾರು ಮಳೆ ಹಾಗೂ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಹಂತದಲ್ಲೂ ಅಧಿಕಾರಿಗಳು ಕಿಂಚಿತ್ತೂ ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ

ಕನ್ನಡಪ್ರಭ ವಾರ್ತೆ ಕೋಲಾರಮುಂಬರುವ ಮುಂಗಾರು ಮಳೆ ಹಾಗೂ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಹಂತದಲ್ಲೂ ಅಧಿಕಾರಿಗಳು ಕಿಂಚಿತ್ತೂ ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಎಚ್ಚರಿಕೆ ನೀಡಿದರು.ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ವರ್ಷದ ಪೂರ್ವ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.೭ರಷ್ಟು ಮಳೆ ಕೊರತೆಯಾಗಿದೆ. ಆದರೆ, ಮುಂಬರುವ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮಳೆಯಿಂದಾಗುವ ಅನಾಹುತಗಳನ್ನು ತಡೆಯಲು ಮತ್ತು ಮಳೆ ನೀರನ್ನು ಸಮರ್ಪಕವಾಗಿ ಕೃಷಿಗೆ ಬಳಸಿಕೊಳ್ಳಲು ಎಲ್ಲಾ ಇಲಾಖೆಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.ಹವಾಮಾನ ವೈಪರೀತ್ಯದಿಂದ ಜಿಲ್ಲಾದ್ಯಂತ ಬರೋಬ್ಬರಿ ೧,೬೧೮ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ನಷ್ಟವಾಗಿದೆ. ಪರಿಹಾರ ವಿತರಣೆಗಾಗಿ ನಡೆಯುತ್ತಿರುವ ದತ್ತಾಂಶ ದಾಖಲಾತಿ ಪ್ರಕ್ರಿಯೆ ಶೇ.೮೯ರಷ್ಟು ಮುಗಿದಿದೆ. ವಿಳಂಬ ಮಾಡುತ್ತಿರುವ ಕೆಜಿಎಫ್, ಮಾಲೂರು ಹಾಗೂ ಅತಿ ಹೆಚ್ಚು ಹಾನಿಗೊಳಗಾಗಿರುವ ಶ್ರೀನಿವಾಸಪುರ ತಾಲೂಕುಗಳ ಅಧಿಕಾರಿಗಳು ಕೇವಲ ೨ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಶೇ.೧೦೦ರಷ್ಟು ಪೂರ್ಣಗೊಳಿಸಬೇಕು ಎಂದರು.ಇತ್ತೀಚಿನ ದಿಶಾ ಸಮಿತಿ ಸಭೆಯ ನಿರ್ದೇಶನದಂತೆ, ಮಾವು ಗುಣಮಟ್ಟ ಕುಸಿತ, ರಫ್ತು ಸಮಸ್ಯೆಗಳು ಹಾಗೂ ಮಾರುಕಟ್ಟೆ ತಿರಸ್ಕಾರದ ಹಿಂದಿನ ಕಾರಣಗಳನ್ನು ನಿಖರವಾಗಿ ಅಧ್ಯಯನ ಮಾಡಲು ತಕ್ಷಣವೇ ತಜ್ಞರ ಸಮಿತಿಯೊಂದನ್ನು ರಚಿಸುವಂತೆ ತೋಟಗಾರಿಕಾ ಇಲಾಖೆಗೆ ಆದೇಶಿಸಿದರು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೭೨ ರಿಂದ ೭೬ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಸ್ತುತ ೬,೪೭೪ ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ವಿಶೇಷವಾಗಿ ಶೇಂಗಾ ಬೀಜಕ್ಕೆ ಹೆಚ್ಚು ಬೇಡಿಕೆ ಬರುವ ನಿರೀಕ್ಷೆ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾ ಬೀಜಕ್ಕೆ ಕ್ವಿಂಟಾಲ್‌ಗೆ ೭,೦೦೦ ದಿಂದ ೮,೦೦೦ ರು. ದರವಿದ್ದರೆ, ಕೃಷಿ ಇಲಾಖೆಯಿಂದ ಸಬ್ಸಿಡಿಯಡಿ ಕೇವಲ ೪,೫೦೦ ರು.ಗೆ ವಿತರಿಸಲಾಗುತ್ತಿದೆ. ಈ ಬಗ್ಗೆ ರೈತರಿಗೆ ವ್ಯಾಪಕ ಅರಿವು ಮೂಡಿಸಿ, ಸಕಾಲದಲ್ಲಿ ಬೀಜ ವಿತರಣೆಯಾಗುವಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು ಎಂದರು.ಕ್ಷೇತ್ರನಹಳ್ಳಿ ಸೇರಿ ೧೩ ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಪ್ರಸ್ತುತ ೪ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ವಿಫಲವಾಗಿರುವ ಬೋರ್‌ವೆಲ್‌ಗಳ ಬದಲಿಗೆ ಪರ್ಯಾಯ ಜಾಗ ಗುರುತಿಸಿ ಹೊಸ ಬೋರ್‌ವೆಲ್ ಕೊರೆಯುವ ಹಾಗೂ ಪೈಪ್‌ಲೈನ್ ಅಳವಡಿಸುವ ಕಾರ್ಯವನ್ನು ಟಾಸ್ಕ್ ಫೋರ್ಸ್ ಅನುಮೋದನೆಯೊಂದಿಗೆ ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕಸ ವಿಲೇವಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವೆಡೆ ಪ್ಲಾಸ್ಟಿಕ್‌ ಸೇರಿ ಇತರ ತ್ಯಾಜ್ಯ ಸುರಿದಿರುವುದು ಕಂಡುಬಂದಿದೆ. ಈ ಕೂಡಲೇ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಆದೇಶಿದರು.

ಸಭೆಯಲ್ಲಿ ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಡಾ.ಎಸ್.ಎಂ.ಮಂಗಳ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್, ಉಪವಿಭಾಗಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಮೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತ್ಯಾಧುನಿಕ ಜಿಲ್ಲಾಸ್ಪತ್ರೆ 18 ತಿಂಗಳಲ್ಲಿ ಸೇವೆಗೆ ಲಭ್ಯ
2028ಕ್ಕೆ ಶಿಡ್ಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿಯೇ ಎಂಎಲ್‌ಎ: ಸೀಕಲ್