ಬಳ್ಳಾರಿ: ಕೋವಿಡ್ ವೇಳೆ ಸೂಕ್ತ ಚಿಕಿತ್ಸೆ ನೀಡದೆ ವೈದ್ಯಕೀಯ ನಿರ್ಲಕ್ಷ್ಯ ಎಸಗಿದ್ದ ನಗರದ ಶಾವಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಕೇಶ್ ಶಾವಿ, ಡಾ. ನಂದಿನಿ ಹಾಗೂ ಡಾ. ಎಂ. ಚಂದ್ರಶೇಖರ್ ಅವರುಗಳಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಮತ್ತು ಸದಸ್ಯರಾದ ಮಾರ್ಲ ಶಶಿಕಲಾ ಅವರು ₹25 ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಇಲ್ಲಿನ ರಾಘವೇಂದ್ರ ಕಾಲನಿ ನಿವಾಸಿ ಮಧುಸೂದನ್ ಬಾಬು ಎಂಬವರು ಕೋವಿಡ್ ಸಂದರ್ಭದಲ್ಲಿ ಸೋಂಕು ತಗುಲಿದ್ದ ಪತ್ನಿ ಲಕ್ಷ್ಮಿ ಸುಜಾತ ಹಾಗೂ ಪುತ್ರ ಪಿ. ವಿನಿತ್‌ರನ್ನು ನಗರದ ಶಾವಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರು ಸೂಕ್ತ ಚಿಕಿತ್ಸೆ ನೀಡದ ಕಾರಣ ಪತ್ನಿ ಹಾಗೂ ಪುತ್ರ ನಿಧನ ಹೊಂದಿದ್ದು, ವೈದ್ಯಕೀಯ ನಿರ್ಲಕ್ಷ್ಯತೆ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮಧುಸೂದನ್ ಬಾಬು ದೂರು ಸಲ್ಲಿಸಿದ್ದರು.ಈ ಹಿನ್ನೆಲೆ ಆಗಿನ ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಡಿಎಚ್‌ಒ ನೇತೃತ್ವದ ತಜ್ಞರ ತಂಡ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಹೇಳಿಕೆ ಪಡೆದು, ಕೋವಿಡ್ ಸೋಂಕು ನಿಯಂತ್ರಣದ ಮಾರ್ಗಸೂಚಿಗಳನ್ನು ಪಾಲನೆ ಮಾಡಿರದ ಬಗ್ಗೆ ವರದಿ ನೀಡಿತ್ತು. ವರದಿಯೊಂದಿಗೆ ಖಾಸಗಿ ಆಸ್ಪತ್ರೆಯ ವಿರುದ್ಧ ಮಧುಸೂದನ ಅವರು 2022ರ ನವೆಂಬರ್ 24ರಂದು ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಜ. 4ರಂದು ಪ್ರಕರಣದ ಕುರಿತು ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಮತ್ತು ಸದಸ್ಯರಾದ ಮಾರ್ಲ ಶಶಿಕಲಾ ಅವರು, ಕೋವಿಡ್ ವೇಳೆ ಚಿಕಿತ್ಸೆ ನೀಡಿದ ದಾಖಲೆಗಳು ಹಾಗೂ ಡಿಎಚ್‌ಒ ನೇತೃತ್ವದ ತಂಡ ನೀಡಿದ ವರದಿ ಪರಿಶೀಲನೆ ನಡೆಸಿ, ಸೂಕ್ತ ಚಿಕಿತ್ಸೆ ದೊರೆಯದೆ ದೂರುದಾರರ ಮಗ ಮತ್ತು ಪತ್ನಿ ಮರಣ ಹೊಂದಿದ್ದಾರೆಂದು ಆಸ್ಪತ್ರೆ ವಿರುದ್ಧ ವಿನಿತ್ ಸಾವಿಗೆ ₹15 ಲಕ್ಷ ಮತ್ತು ಲಕ್ಷ್ಮೀ ಸುಜಾತ ಸಾವಿಗೆ ₹10 ಲಕ್ಷವನ್ನು ಶೇ. 6 ಬಡ್ಡಿಯೊಂದಿಗೆ ಆದೇಶವಾದ 45 ದಿನದಲ್ಲಿ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ. ದೂರುದಾರರ ಪರ ವಕೀಲ ಎನ್. ಪ್ರಕಾಶ ಅವರು ವಾದಿಸಿದ್ದರು.