ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ

KannadaprabhaNewsNetwork |  
Published : Apr 19, 2025, 12:37 AM IST
 ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ರಾಣಿ ಅಬ್ಬಕ್ಕ 500ನೇ ಜಯಂತಿ, ರಾಣಿ ಚೆನ್ನಮ್ಮ 200ನೇ ಜಯಂತಿ, ನೇಹಾ ಹಿರೇಮಠಗೆ ವಾರ್ಷಿಕ ಶ್ರದ್ಧಾ ಶ್ರದ್ಧಾಂಜಲಿ, ತ್ರಿಶೂಲ ದೀಕ್ಷೆ, ಲವ್‌ ಜಿಹಾದ್‌ ಪುಸ್ತಕ ಹಾಗೂ ಯುಟ್ಯೂಬ್‌ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತ್ರಿಶೂಲ ವಿತರಿಸಲಾಯಿತು | Kannada Prabha

ಸಾರಾಂಶ

ನೇಹಾ ಹತ್ಯೆ ಸಂದರ್ಭದಲ್ಲಿ ಮೂರೇ ತಿಂಗಳಲ್ಲಿ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿದ್ದರು. ಒಂದು ವರ್ಷವಾದರೂ ಯಾಕೆ ಶಿಕ್ಷೆ ಆಗಿಲ್ಲ?

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆಯಾಗಿ ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಆರೋಪಿ ಜೈಲಿನಲ್ಲಿ ಆರಾಮಾಗಿ ಕಾಲಕಳೆಯುತ್ತಿದ್ದಾನೆ. ಆತನಿಗೆ ಯಾಕೆ ಶಿಕ್ಷೆಯಾಗಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಪ್ರಶ್ನಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ರಾಣಿ ಅಬ್ಬಕ್ಕ 500ನೇ ಜಯಂತಿ, ರಾಣಿ ಚೆನ್ನಮ್ಮ 200ನೇ ಜಯಂತಿ, ನೇಹಾ ಹಿರೇಮಠಗೆ ವಾರ್ಷಿಕ ಶ್ರದ್ಧಾಂಜಲಿ, ತ್ರಿಶೂಲ ದೀಕ್ಷೆ, ಲವ್‌ ಜಿಹಾದ್‌ ಪುಸ್ತಕ ಹಾಗೂ ಯುಟ್ಯೂಬ್‌ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೇಹಾ ಹತ್ಯೆ ಸಂದರ್ಭದಲ್ಲಿ ಮೂರೇ ತಿಂಗಳಲ್ಲಿ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿದ್ದರು. ಒಂದು ವರ್ಷವಾದರೂ ಯಾಕೆ ಶಿಕ್ಷೆ ಆಗಿಲ್ಲ? ಸಿದ್ದರಾಮಯ್ಯ ಅವರೇ ನೀವು ನಿದ್ದೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಎನ್‌ಕೌಂಟರ್ ಆದಂತೆ ಉಳಿದ ಪ್ರಕರಣಗಳಲ್ಲೂ ತ್ವರಿತ ನ್ಯಾಯದಾನವಾಗಬೇಕು. ನೇಹಾ ಹತ್ಯೆ ಆರೋಪಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ, ನಾವೇ ಕಲ್ಲು ಹೊಡೆದು ಸಾಯಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಮಾತು ಕೇಳಲಿಲ್ಲ:1947ರ ದೇಶ ವಿಭಜನೆ ಸಂದರ್ಭದಲ್ಲಿ ರಾಜಕಾರಣಿಗಳು ಡಾ. ಬಿ.ಆರ್‌. ಅಂಬೇಡ್ಕರ್‌ ಮಾತು ಕೇಳಿದ್ದರೆ ದೇಶದಲ್ಲಿ ಲವ್‌ ಜಿಹಾದ್‌ ಪ್ರಕರಣಗಳು ಆಗುತ್ತಿರಲಿಲ್ಲ. ಆ ಸಂದರ್ಭದಲ್ಲಿ ಎಲ್ಲ ಮುಸ್ಲಿಮರನ್ನು ಪಾಕಿಸ್ತಾನ, ಬಾಂಗ್ಲಾಗೆ ಕಳುಹಿಸಿ, ಎಲ್ಲ ಹಿಂದೂಗಳನ್ನು ಭಾರತಕ್ಕೆ ಕರೆ ತಂದಿದ್ದರೆ ಲವ್‌ ಜಿಹಾದ್‌ನಂತಹ ಪ್ರಕರಣಗಳು ಆಗುತ್ತಿರಲಿಲ್ಲ. ಅಂದು ಅಂಬೇಡ್ಕರ್ ಮಾತು ಕೇಳಿದ್ದರೆ ದೇಶ ಹಾಗೂ ನಮ್ಮ ಮಹಿಳೆಯರು ಇಂದು ಸುರಕ್ಷಿತವಾಗಿರುತ್ತಿದ್ದರು ಎಂದು ಹೇಳಿದರು.

ಲ್ಯಾಂಡ್ ಜಿಹಾದ್:ದೇಶದಲ್ಲಿ ಲವ್‌ ಜಿಹಾದ್‌ನಂತೆ ಲ್ಯಾಂಡ್ ಜಿಹಾದ್‌ ಕೂಡ ನಡೆದಿದೆ. ದೇಶದಲ್ಲಿ 9 ಲಕ್ಷ ಎಕರೆ ವಕ್ಫ್ ಬೋರ್ಡ್ ಆಸ್ತಿ ಇದೆ. ದೇಶದ ಜಮೀನು ಕಬಳಿಸಿ, ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿಸಿ ಇಸ್ಲಾಂ ದೇಶ ಮಾಡುವ ಹುನ್ನಾರ ನಡೆದಿದೆ. ಹೀಗಾಗಿ, ಹಿಂದೂಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು. ತಮ್ಮಿಂದ ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಆ ಜವಾಬ್ದಾರಿಯನ್ನು ಶ್ರೀರಾಮ ಸೇನೆ ಹೊರಲು ಸಿದ್ಧವಿದೆ ಎಂದು ಹೇಳಿದರು.

ತ್ರಿಶೂಲ ವಿತರಣೆ: ಕಾರ್ಯಕ್ರಮದಲ್ಲಿ ತ್ರಿಶೂಲ ಪ್ರದರ್ಶಿಸಿ ಮಾತನಾಡಿದ ಮುತಾಲಿಕ್, ಶ್ರೀರಾಮ ಸೇನೆಯಿಂದ ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅದರಿಂದ ಚುಚ್ಚಿ. ಪೊಲೀಸರು, ಸರ್ಕಾರ ಮಹಿಳೆಯರ ರಕ್ಷಣೆ ನೀಡುತ್ತಿಲ್ಲ. ಹೀಗಾಗಿ, ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ಹೆಣ್ಣು ಮಕ್ಕಳನ್ನು ನಾವೇ ದುರ್ಗಾಮಾತೆಯರಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಆಯುಧ ಪೂಜೆ ದಿನ ಶಸ್ತ್ರಾಸ್ತ ಪೂಜೆ ಮಾಡಿ. ಆಯುಧ ಪೂಜೆಯಂದು ಮನೆಯಲ್ಲಿ ಪೆನ್‌, ಪುಸ್ತಕಕ್ಕೆ ಪೂಜೆ ಮಾಡದೆ, ತಲ್ವಾರ್‌ ಚಾಕು, ಕೊಡಲಿ ಇತ್ಯಾದಿಗಳನ್ನು ಆಯುಧ ಪೂಜೆಗಿಡಿ. ಇದರಿಂದ ವೀರರಂತೆ ಸ್ಫೂರ್ತಿ ದೊರೆಯುತ್ತದೆ. ಪೊಲೀಸರು ಕೇಳುತ್ತಾರೆಂಬ ಭಯ ಬೇಡ. ಅವರೂ, ಆಯುಧಪೂಜೆಯಂದು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ಆಯುಧ ಪೂಜೆ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಮಾತಾ ಆಶ್ರಮದ ಮಾತಾ ತೇಜೋಮಯಿ ಆಶೀರ್ವಚನ ನೀಡಿ, ಪಾಲಕರು ಮಕ್ಕಳಲ್ಲಿ ಹಿಂದೂ ಧರ್ಮದ ಸಂಸ್ಕೃತಿ-ಆಚಾರ-ವಿಚಾರ ಬಿತ್ತಬೇಕು. ಮಾತಾ ಜಿಜಾಬಾಯಿ, ಸ್ವಾಮಿ ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, 2003ರಿಂದ ಇಲ್ಲಿ ವರೆಗೆ ಸುಮಾರು 1800 ಮಹಿಳೆಯರನ್ನು ಲವ್‌ ಜಿಹಾದ್‌ ಪ್ರಕರಣದಿಂದ ಹೊರತರಲಾಗಿದೆ. ಹಿಂದೂ ಮಹಿಳೆಯರ ರಕ್ಷಣೆಗೆ ಶ್ರೀರಾಮಸೇನೆ ಸದಾ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಬಳಿಕ ನೂರಾರು ಮಹಿಳೆಯರಿಗೆ ತ್ರಿಶೂಲ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಲವ್‌ ಜಿಹಾದ್‌ ಸಂತ್ರಸ್ತರು ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟರು. ಈ ವೇಳೆ, ಮಹಿಳಾ ವಕೀಲರಿಂದ ಕಾನೂನು ತಿಳಿವ‍ಳಿಕೆ ಸಹ ನೀಡಲಾಯಿತು. ರಾಣಿ ಅಬ್ಬಕ್ಕ, ಕಿತೂರು ಚೆನ್ನಮ್ಮ, ನೇಹಾ ಹಿರೇಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಹೋಮ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ್, ಯಶೋದಾ ತಾಂಭೆ, ಮಹಾಂತೇಶ ಟೊಂಗಳಿ, ಈರಯ್ಯ ಸಾಲಿಮಠ, ನೇಹಾ ಹಿರೇಮಠ ಚಿಕ್ಕಪ್ಪ ಶಿವಕುಮಾರ ಹಿರೇಮಠ, ವೆಂಕಟೇಶ ಕಾಟವಾ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ