ಹುಬ್ಬಳ್ಳಿ:
ಬೆಳಗ್ಗೆಯಿಂದಲೇ ನಿರಂಜನ ಹಿರೇಮಠ ಮನೆಗೆ ಭೇಟಿ ನೀಡುತ್ತಿದ್ದ ಗಣ್ಯರು, ಕುಟುಂಬಕ್ಕೆ ಸಮಾಧಾನ ಹೇಳುತ್ತಿದ್ದರು. ಘಟನೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗಲೇಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರಿದ್ದರು.
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀ ಭೇಟಿ ನೀಡಿ ಸಾಂತ್ವನ ಹೇಳಿದರು. ಅಲ್ಲದೇ, ಕಾನೂನು ಸುವ್ಯವಸ್ಥೆ ದಾರಿ ತಪ್ಪಿರುವ ಆತಂಕ ಎದುರಾಗಿದೆ. ಸರ್ಕಾರ ಮತ್ತು ಜನಪ್ರನಿಧಿಗಳು ಬೇಜಬಾಬ್ದಾರಿ ಹೇಳಿಕೆ ನೀಡಿ ಕುಟುಂಬಕ್ಕೆ ನೋವನ್ನುಂಟು ಮಾಡಬಾರದು. ಬದಲಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.ಇನ್ನು ಶಿರಹಟ್ಟಿ ಫಕೀರೇಶ್ವರ ಮಠದ ಹಿರಿಯ ಸ್ವಾಮೀಜಿ ಸಿದ್ಧರಾಮ ಶ್ರೀಗಳು ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗದೇ ಹೋದಲ್ಲಿ ಇಂತಹ ಘಟನೆ ಮರುಕಳಿಸುತ್ತವೆ. ಕಾನೂನು ಬದಲಾವಣೆ ತಂದು ಕಟ್ಟುನಿಟ್ಟಿನ ಶಿಕ್ಷೆಗೆ ಗುರಿಪಡಿಸುವ ಕೆಲಸವಾಗಬೇಕಿದೆ ಎಂದರು.
ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ಎರಡೆತ್ತಿನ ಮಠದ ಸಿದ್ಧಲಿಂಗ ಶ್ರೀ, ಹಂದಿಗುಂದದ ಶಿವಾನಂದ ಶ್ರೀ, ಬೂದಿಹಾಳದ ಪ್ರಭು ಶ್ರೀ ಸೇರಿದಂತೆ ಹಲವು ಮಠಾಧೀಶರು ಭೇಟಿ ನೀಡಿದ್ದರು.ರಾಜಕಾರಣಿಗಳ ಭೇಟಿ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭೇಟಿ ನೀಡಿ ಸಾಂತ್ವನ ಹೇಳಿ, ನಿಮ್ಮ ಹೋರಾಟದಲ್ಲಿ ನಾವು ಕೂಡ ಭಾಗಿ. ನಿಮ್ಮೊಂದಿಗೆ ಸದಾಕಾಲ ಇರುತ್ತೇವೆ. ಸರ್ಕಾರ ನಿರ್ಲಕ್ಷ್ಯ ಮಾಡದೇ, ಬೇಜವಾಬ್ದಾರಿ ಹೇಳಿಕೆ ನೀಡದೇ ಸೂಕ್ತವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.