ಕನ್ನಡಪ್ರಭ ವಾರ್ತೆ ತುಮಕೂರು
ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ ಜವಹರ್ ನೆಹರು ಅವರು ಅಧುನಿಕ ಭಾರತದ ನಿರ್ಮಾತೃವಾಗಿದ್ದು, ಅವರ ದೂರದೃಷ್ಟಿ ಆಡಳಿತದಿಂದಲೇ ಭಾರತ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಾಲಿಗೆ ಸೇರಲು ಸಾಧ್ಯವಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ. ಚಂದ್ರಶೇಖರಗೌಡ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಪಂಡಿತ್ ನೆಹರು ಅವರು 134 ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಹಾನ್ ದೇಶಪ್ರೇಮಿ ನೆಹರು ಎಂದು ಬಣ್ಣಿಸಿದರು.
ಬಡತನ, ನಿರುದ್ಯೋಗ, ಹಸಿವು ತಾಂಡವವಾಡುತ್ತಿದ್ದ ಸ್ವಾತಂತ್ರ್ಯ ಭಾರತಕ್ಕೆ ಪಂಚವಾರ್ಷಿಕ ಯೋಜನೆಗಳ ಮೂಲಕ ಕೃಷಿ, ಕೈಗಾರಿಕೆ, ಶಿಕ್ಷಣ, ಔದ್ಯೋಗೀಕರಣದ ಮೂಲಕ ಭಾರತ ಸ್ವಾವಲಂಬಿ ರಾಷ್ಟ್ರವಾಗಲು ನೆಹರು ಕಾರಣ. ಅವರ ಅಲಿಪ್ತ ನೀತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಇಂತಹ ನೆಹರು ಕಾಂಗ್ರೆಸ್ ಪಕ್ಷದವರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಅವರು ಹೇಳಿದರು.ಕಾಂಗ್ರೆಸ್ ಮುಖಂಡರಾದ ಆತೀಕ್ ಅಹಮದ್ ಮಾತನಾಡಿ, ಪಂಡಿತ್ ಜವಹರ್ ನೆಹರು ಅವರು ಭಾರತದ ಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದರು. ದುಡಿಯುವ ಕೈಗಳಿಗೆ ಕೆಲಸ ನೀಡಲು ಕೈಗಾರಿಕಾ ಕ್ರಾಂತಿಯನ್ನೇ ಮಾಡಿದರು. ಆದರೆ ಇಂದು ಯುವಜನತೆ ಡ್ರಗ್ಸ್ ನಂತಹ ಮಾದಕ ಪದಾರ್ಥಗಳ ಅಮಲಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು, ಇದರ ವಿರುದ್ದ ಜಾಗೃತಿ ಮೂಡಿಸಲು ಶೀಘ್ರವಾಗಿ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ನಯಾಜ್ ಮಾತನಾಡಿ, ನೆಹರು ಅವರ ಇಡೀ ಕುಟುಂಬ ದೇಶದ ಒಳಿತಿಗಾಗಿ ದುಡಿದಿದೆ. ದೇಶದ ಜನರನ್ನು ಹಿಂದೂ, ಮುಸ್ಲಿಂ ಎಂದು ವಿಭಜಿಸದೆ ಎಲ್ಲರನ್ನೂ ಸಮಾನವಾಗಿ ಕಂಡರು ಎಂದರು.ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ದೇಶಕ್ಕಾಗಿ ಹೋರಾಡಿದ ಯಾವುದಾದರೂ ಕುಟುಂಬವಿದ್ದರೆ ಅದು ನೆಹರು ಮನೆತನ. ದೇಶದ ಒಳಿತಿಗಾಗಿ ನಡೆದ ಯಾವ ಘಟನೆಗಳನ್ನು ತನ್ನ ವೈಯುಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಳಕೆ ಮಾಡಲಿಲ್ಲ. ಜನರಿಗೆ ಆಹಾರ, ಆರೋಗ್ಯ ಭದ್ರತೆ ನೀಡಿದವರು ನೆಹರು. ಇಂತಹ ನೆಹರು ಅವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಸರಿಯಾಗಿ ತಿಳಿದುಕೊಂಡು, ನೆಹರು ಅವರನ್ನು ಅವಹೇಳನ ಮಾಡುವವರಿಗೆ ದಿಟ್ಟ ಉತ್ತರ ನೀಡಬೇಕಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಪಿ. ಶಿವಾಜಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ 9 ಬಾರಿ ಜೈಲುವಾಸ ಅನುಭವಿಸಿದ ನೆಹರು, ಜೈಲಿನ ಅನುಭವಗಳನ್ನೇ ಕುರಿತು ಹಲವಾರು ಪುಸ್ತಕ ಬರೆದಿದ್ದಾರೆ. ಅವುಗಳನ್ನು ಓದಿದರೆ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಚಿತ್ರಣ ದೊರೆಯಲಿದೆ ಎಂದರು.ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ 15 ಅಂಶಗಳ ಪರಿಶೀಲನಾ ಸಮಿತಿ ಸದಸ್ಯ ಖಲೀಂ ವುಲ್ಲಾ, ಆಡಿಟರ್ ಸುಲ್ತಾನ್ ಮೊಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಯಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ಜಿಲ್ಲಾ ಹಿಂದುಳಿದ ವರ್ಗಗಳ ಸೆಲ್ ಕಾರ್ಯದರ್ಶಿ ಅನಿಲ್ ಕುಮಾರ್, ನ್ಯಾತೇಗೌಡ ಮತ್ತಿತರರು ಉಪಸ್ಥಿತರಿದ್ದರು.