ಕನ್ನಡಪ್ರಭ ವಾರ್ತೆ, ಯಳಂದೂರು
ಪಟ್ಟಣ ಪಂಚಾಯಿತಿ ವತಿಯಿಂದ ಸಮೀಪದ ಮೂಡಲ ಅಗ್ರಹಾರ ಗ್ರಾಮದ ಸರ್ವೇ ನಂ. ೮೯ರಲ್ಲಿ ಸ್ವಚ್ಛ ಭಾರತ್ ಮಿಷನ್ ೨.೦ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಉಪಯೋಗ ಅಕ್ಕಪಕ್ಕದ ಗ್ರಾಮ ಪಂಚಾಯಿತಿಯವರೂ ಪಡೆದುಕೊಳ್ಳಬಹುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.ಗ್ರಾಮದಲ್ಲಿ ೧.೬೬ ಕೋಟಿ ರು. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲೇ ಜಿಲ್ಲಾಧಿಕಾರಿ ಕಾವೇರಿ ಅವರು ೯ ಎಕರೆ ಸರ್ಕಾರಿ ಜಮೀನು ನೀಡಿದ್ದರು. ಇದು ಕುದೇರು ಗ್ರಾಪಂಗೆ ಸೇರಿದ ಜಮೀನಾಗಿದೆ. ಯಳಂದೂರು ಪಟ್ಟಣ ಪಂಚಾಯಿತಿಯಿಂದ ದೂರವಿರುವ ಈ ಸ್ಥಳದಲ್ಲಿ ಘಟಕ ನಿರ್ಮಾಣಕ್ಕೆ ವಿರೋಧವಿತ್ತು. ಆದರೂ ಇಲ್ಲಿ ಕಾಮಗಾರಿ ಆರಂಭವಾಗಿತ್ತು. ಇದು ಸರ್ಕಾರಿ ಜಮೀನು. ಈ ಹಿಂದೆ ನಿಗದಿಯಾಗಿ ಆರಂಭಗೊಂಡಿರುವ ಮುಂದುವರಿದ ಕಾಮಗಾರಿ ಇದಾಗಿದೆ. ಈಗ ಸುತ್ತುಗೋಡೆ ಸೇರಿ ಇತರೆ ಕೆಲಸಗಳು ಆರಂಭಗೊಂಡಿವೆ. ಈಗ ೨ನೇ ಹಂತದಲ್ಲಿ ಮುಂದುದರಿದ ಕಾಮಗಾರಿಯಾಗಿ ಕಾಂಪೌಂಡ್, ಗೇಟ್ ನಿರ್ಮಾಣ, ಆಂತರಿಕ ರಸ್ತೆ, ಚರಂಡಿ, ಡೆಕ್ ಸ್ಲಾಬ್, ಕಚೇರಿ, ವಾಚ್‌ಮನ್ ಮತ್ತು ಶೌಚಗೃಹ ನಿರ್ಮಾಣ, ವೇ ಬ್ರಿಡ್ಜ್‌ಗೆ ತಳಪಾಯ, ಸೋಕ್‌ಪಿಟ್, ಸೆಪ್ಟಿಕ್ ಟ್ಯಾಂಕ್, ರ್‍ಯಾಂಪ್, ಏರೋಬಿಕ್ ಕಾಂಪೋಸ್ಟಿಂಗ್ ಪ್ಯಾಡ್ ನಿರ್ಮಾಣ, ಸ್ಟೋರೇಜ್ ಶೆಡ್, ಹಾಗೂ ಏರೋಬಿಕ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಇಲ್ಲಿ ಹಸಿ ಹಾಗೂ ಒಣ ಕಸ ಬೇರ್ಪಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಅಕ್ಕಪಕ್ಕದಲ್ಲಿರುವ ಕುದೇರು, ದೇಮಳ್ಳಿ ಸೇರಿ ಇತರೆ ಪಂಚಾಯಿತಿಯವರು ಕಸವನ್ನು ಇಲ್ಲಿಗೆ ತಂದು ಸಂಸ್ಕರಿಸಲು ಅವಕಾಶವಿದೆ. ಹಾಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಸದಸ್ಯರಾದ ವೈ.ಜಿ. ರಂಗನಾಥ, ಬಿ. ರವಿ, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಇಇ ಅಪ್ತಾಫ್ ಪಾಷ, ಜೆಇ ನಾಗೇಂದ್ರ, ಆರೋಗ್ಯಾಧಿಕಾರಿ ಮನೋಜ್, ಮಲ್ಲಿಕಾರ್ಜುನ, ರಘು, ಅರವಿಂದ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ರಾಜಶೇಖರ್, ಚೇತನ್‌ಕುಮಾರ್ ಸೇರಿ ಅನೇಕರು ಇದ್ದರು.