ಕೊಪ್ಪಳ: ವಾಲ್ಮೀಕಿ ನಿಗಮದ ಹಗರಣದಲ್ಲಿ ಬಂಧನವಾಗಿರುವ ನೆಕ್ಕಂಟಿ ನಾಗರಾಜ ಅಮಾಯಕನಾಗಿದ್ದು, ನನಗೂ ಆತ್ಮೀಯ ಮತ್ತು ಸಚಿವ ಶಿವರಾಜ ತಂಗಡಗಿ ಅವರಿಗೂ ಸ್ನೇಹಿತ ಎಂದು ಕನಕಗಿರಿಯ ಮಾಜಿ ಶಾಸಕ ಬಸವರಾಜ ದಢೇಸೂಗೂರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಆತ ಬಂಧಿತನಾಗಿರಬಹುದು. ಬಂಧಿಯಾದ ತಕ್ಷಣ ಅಪರಾಧಿಯಲ್ಲ, ವಿಚಾರಣೆ ನಡೆಯುತ್ತಿದ್ದು, ಮುಂದೆ ಆತ ನಿರಾಪರಾಧಿಯಾಗಬಹುದು ಎಂದು ಹೇಳಿದ್ದಾರೆ.
ಯಾಕೆ ನೆಕ್ಕಂಟಿ ಪರವಾಗಿ ನೀವು ಮಾತನಾಡುತ್ತಿದ್ದೀರಲ್ಲ ಎಂದು ಪದೇ ಪದೇ ಕೇಳಿದಾಗಲೂ ಆತ ಅಮಾಯಕ ಎಂದೇ ಉತ್ತರಿಸಿದ್ದಾರೆ.ಅಧಿಕಾರಿಗಳೊಂದಿಗೆ ಮಾತನಾಡಿದ್ದಾನಲ್ಲ, ಒತ್ತಡ ಹಾಕಿದ್ದಾನಲ್ಲ ಎಂದು ಕೇಳಿದರೆ, ನೋಡಿ, ಈ ಸರ್ಕಾರದಲ್ಲಿ ಅದು ಸಾಧ್ಯವಾಗುತ್ತದೆ. ನಮ್ಮ ಸರ್ಕಾರದಲ್ಲಿ ಆಗಿದ್ದರೆ ಆಗುತ್ತಿರಲಿಲ್ಲ ಎಂದು ತಿಪ್ಪೆಸಾರಿಸಿದರು.
ವರ್ಗಾವಣೆ ದಂಧೆ ನಮ್ಮ ಸರ್ಕಾರದಲ್ಲಿ ಇರಲಿಲ್ಲ, ನೀವೇ ನೋಡಿದ್ದೀರಲ್ಲ, ಪದೇ ಪದೇ ವರ್ಗಾವಣೆ ನಮ್ಮ ಸರ್ಕಾರದಲ್ಲಿ ಆಗುತ್ತಿರಲಿಲ್ಲ, ಈಗಿನ ಸರ್ಕಾರದಲ್ಲಿ ಆಗುತ್ತಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವ ಶಿವರಾಜ ತಂಗಡಗಿ ಅವರು ಅಧಿಕಾರಿಗಳನ್ನು ಪದೇ ಪದೇ ವರ್ಗಾಯಿಸುತ್ತಿದ್ದಾರೆ ಎಂದರೆ ಏನರ್ಥ ಎಂದು ಮರು ಪ್ರಶ್ನೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಡಾ. ಬಸವರಾಜ, ಪ್ರಮೋದ ಕಾರ್ಕೋನ ಮೊದಲಾದವರು ಇದ್ದರು.