ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷರಾಗಿ ನೆಲ್ಲು ಇಸ್ಮಾಯಿಲ್ ಆಯ್ಕೆ ಬಹುತೇಕ ಖಚಿತ

KannadaprabhaNewsNetwork |  
Published : Apr 26, 2026, 03:00 AM IST
ನೆಲ್ಲು ಇಸ್ಮಾಯಿಲ್ | Kannada Prabha

ಸಾರಾಂಶ

ಮುಸ್ಲಿಂ ಜನಾಂಗದ ಪ್ರಶ್ನಾತೀತ ಹಿರಿಯ ನಾಯಕ ನೆಲ್ಲು ಇಸ್ಮಾಯಿಲ್ ತಮ್ಮ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸಿದ್ದಾರೆ.

ಬಿ.ಲಕ್ಷ್ಮೀಕಾಂತಸಾ

ಹಗರಿಬೊಮ್ಮನಹಳ್ಳಿ: ಇದೇ ಏ.೩೦ರಂದು ಪಟ್ಟಣದ ಪುರಸಭೆಯ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದೆ. ೨೩ ಸದಸ್ಯ ಬಲದ ಪುರಸಭೆಯಲ್ಲಿ ೧೨ ಸದಸ್ಯರ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದ ಸದಸ್ಯ ನೆಲ್ಲು ಇಸ್ಮಾಯಿಲ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಪಕ್ಷ ನಿಷ್ಠೆ ಅವರ ಆಯ್ಕೆಯನ್ನು ಸುಗಮಗೊಳಿಸಿದೆ.

ಸ್ಥಳೀಯ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಾಜಿ ಶಾಸಕ ಭೀಮಾನಾಯ್ಕ ಆಪ್ತ ಬಳಗದ ಹಾಗೂ ಮುಸ್ಲಿಂ ಜನಾಂಗದ ಪ್ರಶ್ನಾತೀತ ಹಿರಿಯ ನಾಯಕ ನೆಲ್ಲು ಇಸ್ಮಾಯಿಲ್ ತಮ್ಮ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಿಸಿದ್ದಾರೆ. ಅದರಲ್ಲೂ ಕಳೆದ ಎಂಟು ವರ್ಷದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರಾಗಿಯೇ ಪಕ್ಷದ ವರಿಷ್ಠರ ಗಮನ ಸೆಳೆದಿದ್ದಾರೆ.

ವ್ಯಾಪಾರದ ಮೂಲಕ ತಾಲೂಕಿನ ರೈತರ ವಿಶ್ವಾಸ ಗಳಿಸಿರುವ ನೆಲ್ಲು ಇಸ್ಮಾಯಿಲ್ ಜೀವಪರ ಕಾಳಜಿ ಹೊಂದಿದವರು. ಬಡತನದಿಂದ ಮೇಲೆ ಬಂದು ಸಾಕಷ್ಟು ಪ್ರಗತಿ ಕಂಡವರು. ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ಸರಳ ಮತ್ತು ಪರಸ್ಪರ ಸಮನ್ವಯದೊಂದಿಗೆ ತಾಲೂಕಿನ ಬಹುತೇಕ ಸಮಾಜದವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

ಪಟ್ಟಣದ ಆಡಳಿತ ಎಂಟು ವರ್ಷದ ಹಿಂದೆ ಪುರಸಭೆ ದರ್ಜೆಗೇರಿದಾಗ ನಡೆದ ಮೊದಲ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದರು. ಮೂರು ಬಾರಿ ನಡೆದ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ರಾಜಕೀಯ ಒತ್ತಡ, ಹಣದ ಆಮಿಷಗಳಿಗೆ ಮಣಿಯದೇ ಕಾಂಗ್ರೆಸ್ ಪಕ್ಷದ ಸದಸ್ಯರಾದ ಜೋಗಿ ಹನಮಂತಪ್ಪ, ತಳವಾರ್ ರಾಘು, ಕವಿತಾ ಹಾಲ್ದಾಳ್ ಅಧ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಎರಡನೇ ಬಾರಿಯ ಚುನಾವಣೆಯಲ್ಲಿ ನೆಲ್ಲು ಇಸ್ಮಾಯಿಲ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಗೆದ್ದು ಬೀಗಿದಾಗ ಮೀಸಲಾತಿಯ ಗೊಂದಲದಿಂದಾಗಿ 30 ತಿಂಗಳುಗಳ ಕಾಲ ಪುರಸಭೆಗೆ ಅಧ್ಯಕ್ಷರ ಆಯ್ಕೆ ನಡೆಯಲಿಲ್ಲ. ನಂತರ ಅಧ್ಯಕ್ಷ ಸ್ಥಾನ ಓಬಿಸಿ ಜನರಲ್‌ಗೆ ನಿಗದಿಯಾದಾಗ ನೆಲ್ಲು ಇಸ್ಮಾಯಿಲ್ ಅವರ ಹೆಸರೇ ಕೇಳಿ ಬಂದಿತ್ತು.

ಆದರೆ ಪಕ್ಕದ ಮರಿಯಮ್ಮನಹಳ್ಳಿಯ ಪಪಂಗೆ ಅಧ್ಯಕ್ಷರಾಗಿ ಮುಸ್ಲಿಂ ಸದಸ್ಯರು ಆಯ್ಕೆಯಾದ ಹಿನ್ನೆಲೆಯಲ್ಲಿ ನೆಲ್ಲು ಇಸ್ಮಾಯಿಲ್ ಅವರಿಗೆ ಹಿನ್ನಡೆಯಾಯಿತು. ಕುರುಬ ಸಮಾಜದ ಮರಿರಾಮಣ್ಣ ಅಧ್ಯಕ್ಷರಾಗಿ ಆಯ್ಕೆಯಾಗುವ ವೇಳೆ ಪಕ್ಷದ ೮ ಸದಸ್ಯರ ತೀವ್ರ ವಿರೋಧವನ್ನು ಶಮನಗೊಳಿಸಿ ಮರಿರಾಮಣ್ಣನವರ ಸುಗಮ ಆಯ್ಕೆಗೂ ನೆಲ್ಲು ಇಸ್ಮಾಯಿಲ್ ಶ್ರಮಿಸಿದ್ದರು.

ಉಳಿದ 30 ತಿಂಗಳ ಅವಧಿಗೆ ತಲಾ 10 ತಿಂಗಳುಗಳ ಕಾಲ ಮೂವರು ಸದಸ್ಯರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಒಡಂಬಡಿಕೆ ನಡೆದಿತ್ತು. ಆದರೂ ಕಳೆದ ೧೭ ತಿಂಗಳುಗಳ ಕಾಲ ಅಧ್ಯಕ್ಷರಾಗಿಯೇ ಮುಂದುವರೆದ ಮರಿ ರಾಮಣ್ಣ, ೨೩ ವಾರ್ಡ್‌ಗಳ ಯಾವುದೇ ಸದಸ್ಯರ ವಿಶ್ವಾಸ ಪಡೆಯದೇ ಬೇಕಾಬಿಟ್ಟಿಯಾಗಿ ದುರಾಡಳಿತ ನಡೆಸಿದರು. ಪರಿಣಾಮ ತಮ್ಮ ಪಕ್ಷದವರಿಂದಲೇ ತೀವ್ರ ವಿರೋಧ ಎದುರಿಸಿ ಅವಿಶ್ವಾಸ ನಿರ್ಣಯದ ಭೀತಿಯಿಂದಾಗಿ ಭೀಮಾ ನಾಯ್ಕ ಸೂಚನೆಯಂತೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ಚುನಾವಣಾ ದಿನಾಂಕ ನಿಗದಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾತಿ ಮಸೂದೆ ತಡೆದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರತಿಭಟನೆ
ಒಳ ಮೀಸಲಾತಿ ಹಂಚಿಕೆ ಅವೈಜ್ಞಾನಿಕ-ಮಾಜಿ ಸಚಿವ ಬಿ.ಸಿ. ಪಾಟೀಲ್ ಆರೋಪ