ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕಿನ ನೇರುಗಳಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೨೦೨೫-೨೬ ನೇ ಸಾಲಿಗೆ ಕರ್ನಾಟಕ ಸರ್ಕಾರ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಲು ಅನುಮತಿ ನೀಡಿದ್ದು, ಮಂಗಳವಾರ ಪ್ರಾರಂಭಿಸಲಾಯಿತು.ತರಗತಿಯನ್ನು ಸ್ಥಳೀಯ ಉದ್ಯಮಿ ವಿ.ಎಮ್. ವಿಜಯ ಉದ್ಘಾಟಿಸಿ ಮಾತನಾಡಿ, ಆಂಗ್ಲಮಾಧ್ಯಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾಗಿದೆ. ಘನ ಸರ್ಕಾರ ನಮ್ಮೂರಿನ ಶಾಲೆಗೆ ಪ್ರಾರಂಭಿಸಲು ಅನುಮತಿ ನೀಡಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕಿದೆ ಎಂದರು.ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಆಂಗ್ಲ ಮಾಧ್ಯಮ ಪ್ರಮುಖವಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಕಲಿತು ಸಮಾಜದ ಸಧೃಡ ಪ್ರಜೆಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿಗಳು ಊರಿಗೆ ಹಾಗೂ ಕಲಿಸಿದ ಗುರುಹಿರಿಯರಿಗೆ ಗೌರವ ತರುವಂತಹ ಕಾಯಕ ನಿಮ್ಮಿಂದಾಗಬೇಕೆಂದು ಸಲಹೆ ನೀಡಿದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಮಾತನಾಡಿ, ಅಂಕುರ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ವತಿಯಿಂದ ಸುಮಾರು ೨೦ ಲಕ್ಷ ರುಪಾಯಿಗಳ ವೆಚ್ಚದಲ್ಲಿ ೫ ಕೊಠಡಿಗಳನ್ನು ನವೀಕರಣ ಮಾಡುವ ಮೂಲಕ ಅದರಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಮಾಡಲಾಗಿದೆ. ಈ ಕಾರ್ಯಕ್ಕೆ ಕೈಜೋಡಿಸಿದ ಸರ್ವರನ್ನು ಅಭಿನಂದಿಸಿದ ಅವರು, ಮುಂದೆಯೂ ನಮ್ಮೂರಿನ ಶಾಲೆಯಲ್ಲಿ ಹೆಚ್ಚು ಮಕ್ಕಳು ದಾಖಲಾಗಿ ಸರ್ಕಾರಿ ಶಾಲೆಯ ಸಬಲೀಕರಣಕ್ಕೆ ನಮ್ಮ ಟ್ರಸ್ಟ್ ಸಹಾಯವನ್ನು ನಿರಂತರವಾಗಿ ಮಾಡುತ್ತದೆಂದು ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್ ಮಾತನಾಡಿ, ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಸರ್ಕಾರ ನೀಡಿರುವ ಈ ಸವಲತ್ತುನ್ನು ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಪೋಷಕರು ಬಳಸಿಕೊಳ್ಳಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾ, ಪ್ರಕಾಶ್, ಅಜಿತ್ ಕುಮಾರ್, ವಿನಯ್, ಸಂಭ್ರಮ್, ಅಂಕುರಂ ಹಿರಿಯ ವಿದ್ಯಾರ್ಥಿಗಳ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಭೋಜೆಗೌಡ ಮತ್ತು ಪದಾಧಿಕಾರಿಗಳು, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರವಿಕಮಾರ್ ಮತ್ತು ಪದಾಧಿಕಾರಿಗಳು, ಪ್ರೌಢಶಾಲಾ ಮುಖ್ಯಶಿಕ್ಷಕಿ ರಾಜೇಶ್ವರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಎಸ್ತೆಲಾ ಹಾಗೂ ಶಿಕ್ಷಕರು ಇದ್ದರು.