ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕಕ್ಕಬ್ಬೆ ನೆಟ್ಟುಮಾಡು ಶ್ರೀ ಭಗವತಿ ದೇವಾಲಯದ ಜೀರ್ಣೋದ್ಧಾರಕ್ಕೆ ಜೀರ್ಣೋದ್ಧಾರ ಸಮಿತಿ ಮುಂದಾಗಿದೆ.ಸುಮಾರು 700 ವರ್ಷಗಳ ಹಿಂದೆ ಜಿಲ್ಲೆಯ ಕೊಡವರು ಸಮೀಪದ ಕೇರಳ ರಾಜ್ಯಕ್ಕೆ ತೆರಳಿ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಯವಕಪಾಡಿಯ ನಾಟೋಳಂಡ ಕುಟುಂಬಸ್ಥರು ಎತ್ತು ಪೋರಾಟದೊಂದಿಗೆ ಬೈತೂರು ದೇವಸ್ಥಾನಕ್ಕೆ ತೆರಳಿದ್ದು ಅಲ್ಲಿಂದ ಹಿಂತಿರುಗುವ ಸಂದರ್ಭದಲ್ಲಿ ದೇವಿಯು ಯವಕಪಾಡಿ ಗ್ರಾಮಕ್ಕೆ ಆಗಮಿಸಿ ನಾಟೋಳಂಡ ಕುಟುಂಬಸ್ಥರ ಅರಣ್ಯದಲ್ಲಿ ನೆಲೆಸಿದ್ದರು ಎನ್ನುವ ಪ್ರತೀತಿಯಿದೆ. ಬಳಿಕ ನೆಟ್ಟುಮಾಡುವಿನಲ್ಲಿ ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಿಂದ ಐದು ಕಿಲೋಮೀಟರ್ ದೂರದಲ್ಲಿ ದೇವಿಗೆ ದೇವಾಲಯವನ್ನು ನಿರ್ಮಿಸಲಾಯಿತು. ಈ ತಾಣದಲ್ಲಿ ಭಗವತಿ ನೆಲೆ ಸೇರಿದಂತೆ ಶಾಸ್ತಾವು
ಅಯ್ಯಪ್ಪ, ಕರಿಮೂರ್ತಿ, ವಿಷ್ಣುಮೂರ್ತಿ ನಾಗದೇವತೆ , ಗುಳಿಗ, ಅಜ್ಜಪ್ಪ ಸೇರಿದಂತೆ ವಿವಿಧ ನೆಲೆಗಳನ್ನು ಸ್ಥಾಪಿಸಿ ಗ್ರಾಮ ಸುರಕ್ಷೆಗಾಗಿ, ಊರಿನ ಸುರಕ್ಷೆಗಾಗಿ ಕಟ್ಟುಪಾಡುಗಳನ್ನು ವಿಧಿಸಲಾಯಿತು. ಇಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತಿತ್ತು. ಈಚಿನ ದಿನಗಳಲ್ಲಿ ದೇವಾಲಯವನ್ನು ನವೀಕರಿಸಬೇಕಾಗಿ ಕಂಡುಬಂದುದರಿಂದ ಊರಿನ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ನೀಲೇಶ್ವರ ತಂತ್ರಿಗಳನ್ನು ಸಂಪರ್ಕಿಸಿದಾಗ ದೇವಾಲಯದ ಪುನರ್ ನಿರ್ಮಾಣದ ಅವಶ್ಯಕತೆ ಕಂಡು ಬಂತು. ಸುಮಾರು 60 ಲಕ್ಷ ರು. ವೆಚ್ಚದಲ್ಲಿ ದೇವಾಲಯದ ಗರ್ಭಗುಡಿ ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸಲು ಜೀರ್ಣೋದ್ಧಾರ ಸಮಿತಿ ತೀರ್ಮಾನಿಸಿದೆ. ಊರಿನ ಹಾಗೂ ಪರ ಊರಿನ ಭಕ್ತರಿಂದ ದೇಣಿಗೆ ಸಂಗ್ರಹಿಸಿ ದೇವಾಲಯವನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಿದೆ.ಆಸಕ್ತರು ದೇವಾಲಯದ ಅಭಿವೃದ್ಧಿಗೆ ಕೊಡುಗೆಗಳನ್ನು ಖಾತೆಗೆ ಸಂದಾಯ ಮಾಡಬಹುದು ಎಂದು ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ. ನೆಟ್ಟುಮಾಡು ಶ್ರೀ ಭಗವತಿ ಜೀರ್ಣೋದ್ಧಾರ ಸಮಿತಿ, ಖಾತೆಸಂಖ್ಯೆ:008522010000287, IFSC ಸಂಕೇತ UBIN0900851