ಕನ್ನಡಪ್ರಭ ವಾರ್ತೆ ಹಿರಿಯೂರು
ಸಭೆಯನ್ನು ಉದ್ದೇಶಿಸಿ ಪೌರಾಯುಕ್ತ ಎ.ವಾಸಿಂ ಮಾತನಾಡಿ, ಹಿರಿಯೂರು ನಗರ ವ್ಯಾಪ್ತಿಯಲ್ಲಿ ಸುಮಾರು 1,650 ನಾಯಿಗಳಿರುವುದು ಕಂಡು ಬಂದಿದ್ದು ಸುಪ್ರೀಂ ಕೋರ್ಟ್ ಆದೇಶದಂತೆ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಪ್ರತಿ ವಾರ್ಡ್‌ಗಳಲ್ಲಿ ಎರಡೆರಡು ಫೀಡಿಂಗ್ ಜೋನ್ ಗಳನ್ನು ಗುರುತಿಸಿ ಅಲ್ಲಿಯೇ ಬೌಲ್ ವ್ಯವಸ್ಥೆ ಮಾಡಿ ನಾಯಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಬೀದಿ ನಾಯಿಗಳಲ್ಲದೆ ಎಲ್ಲಾ ಸರ್ಕಾರಿ, ಖಾಸಗಿ ಸಂಸ್ಥೆಗಳು, ಸರ್ಕಾರಿ ಬಸ್‌ನಿಲ್ದಾಣ, ಕ್ರೀಡಾಂಗಣ ಕಾಂಪೌಂಡ್ ಒಳಗಡೆಯಿರುವ ನಾಯಿಗಳನ್ನು ಪರಿಶೀಲಿಸಿ ಆಯಾ ಸಂಸ್ಥೆಗಳ ನೋಡೆಲ್ ಅಧಿಕಾರಿಗಳ ಹತ್ತಿರ ಸಹಿ ಪಡೆದು ಎಲ್ಲಾ ನಾಯಿಗಳನ್ನು ಶೆಲ್ಟರ್‌ನಲ್ಲಿ ಹಾಕಿ ಸಾಕುವ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಮಟನ್, ಚಿಕನ್ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಆಹಾರ ಹಾಕುವುದು ಕಂಡು ಬಂದರೆ ಕೇಸ್ ಹಾಕಲಾಗುವುದು. ಯಾರಿಗಾದರೂ ಕಚ್ಚಿದರೆ ಆ ಅಂಗಡಿಯವರೇ ಜವಾಬ್ದಾರರಾಗುತ್ತಾರೆ. ಸುಪ್ರೀಂ ಕೋರ್ಟ್ ಆದೇಶದ ಸೂಚನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಮತ್ತು ಪ್ರತಿ ವಾರ್ಡ್‌ಗಳಲ್ಲಿ ಫೀಡಿಂಗ್ ಜೋನ್ ಮಾಡಿರುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರಸಭೆ ಆಟೋಗಳ ಮೂಲಕ ಪ್ರಚುರ ಪಡಿಸಲಾಗುವುದು. ಕರಪತ್ರ ಮಾಡಿಸಿ ಮನೆ ಮನೆಗಳಿಗೆ ಹಂಚಿಸಲಾಗುವುದು. ಯಾರಿಗಾದರೂ ಆಸಕ್ತಿ ಇದ್ದರೆ ನಾಯಿಗಳಿಗೆ ಆಹಾರ ಹಾಕಲು ಬೌಲ್ ಗಳ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಪೌರಾಯುಕ್ತರ ಮನವಿಗೆ ಚಿಕನ್ ಅಂಗಡಿ ಮಾಲೀಕರೊಬ್ಬರು ಸ್ಪಂದಿಸಿ ಬೌಲ್ ಗಳನ್ನು ಕೊಡಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಆಶ್ರಯ ಕಮಿಟಿ ಸದಸ್ಯರು, ಚಿಕನ್ ಮಟನ್ ಅಂಗಡಿಗಳ ಸಂಘದ ಸದಸ್ಯರು, ಪ್ರಾಣಿ ದಯಾ ಸಂಘದ ಸದಸ್ಯರು, ನಗರಸಭೆ ಕಿರಿಯ ಮತ್ತು ಹಿರಿಯ ಆರೋಗ್ಯ ನೀರಿಕ್ಷಕರುಗಳು, ಸ್ವಚ್ಛತಾ ಕಾರ್ಮಿಕರು ಹಾಜರಿದ್ದರು.