ಕಷ್ಟದಲ್ಲಿ ಜೊತೆಗಿದ್ದವರನ್ನು ಎಂದಿಗೂ ಮರೆಯದಿರಿ: ರಂಭಾಪುರಿ ಶ್ರೀಗಳು

KannadaprabhaNewsNetwork | Published : Sep 9, 2024 1:34 AM

ಸಾರಾಂಶ

ರಾಯಚೂರಿನ ಸಾವಿರದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಲ್ಲಿ ಜರುಗಿದ ಶ್ರಾವಣ ಪುರಾಣ ಪ್ರವಚನ ಶತಮಾನೋತ್ಸವ ಮಂಗಲ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸುಖ ದುಃಖಗಳು ಶಾಶ್ವತವಲ್ಲ. ಸುಖದ ನಂತರ ದುಃಖ, ದುಃಖದ ನಂತರ ಸುಖ ಇದ್ದೇ ಇರುತ್ತದೆ. ಆದರೆ ಕಷ್ಟದಲ್ಲಿ ಜೊತೆಗಿದ್ದವರನ್ನು ಸುಖ ಬಂದಾಗ ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸ್ಥಳೀಯ ಸಾವಿರದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಲ್ಲಿ ಜರುಗಿದ ಶ್ರಾವಣ ಪುರಾಣ ಪ್ರವಚನ ಶತಮಾನೋತ್ಸವ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮೌನ ಮನಸ್ಸನ್ನು ಶುದ್ಧಿ ಮಾಡುತ್ತದೆ. ಸ್ನಾನ ದೇಹ ಶುದ್ಧಿ ಮಾಡುತ್ತದೆ. ಉಪವಾಸ ಆರೋಗ್ಯವನ್ನು ಶುದ್ಧ ಮಾಡುತ್ತದೆ. ಬಳಸಿಕೊಂಡವರನ್ನು ಮರೆತರೂ ಬೆಳೆಸಿದವರನ್ನು ಮರೆಯಬಾರದು ಎಂದರು.

ದುಡಿಯುವ ಕೈಗೆ ಬಡತನವಿಲ್ಲ. ಆಲಸ್ಯದ ಬದುಕಿಗೆ ನೆಮ್ಮದಿ ಇಲ್ಲ. ಕರ್ತವ್ಯದ ಕಾಲು ದಾರಿಯಲ್ಲಿ ನಡೆಯುವವರಿಗೆ ಯಶಸ್ಸು ನಿಶ್ಚಿತ. ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು. ಸತ್ಯ, ಧರ್ಮ, ನ್ಯಾಯ, ನೀತಿ, ದೇವರು ಉಳಿತಾಯ ಖಾತೆಗೆ ಜಮಾ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ವೀರಶೈವ ಧರ್ಮದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಕಂಡಿದ್ದಾರೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಶ್ರೀ ಗುರುಪಾದ ಶಿವಯೋಗೀಶ್ವರ ಪುರಾಣ ಗ್ರಂಥ ಲೋಕಾರ್ಪಣೆ ಮಾಡಿದ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಕತ್ತಲಲ್ಲಿ ಬೆಳಕಿನ, ಬಿಸಿಲಿನಲ್ಲಿ ನೆರಳಿನ ಮತ್ತು ಜೀವನದ ದಾರಿಯಲ್ಲಿ ಸಾಗುವಾಗ ಒಳ್ಳೆಯವರ ಒಡನಾಟದ ಅವಶ್ಯಕತೆಯಿದೆ. ಜೀವನ ಅನಿಶ್ಚತೆಯಿಂದ ತುಂಬಿದೆ. ಬದುಕಿನಲ್ಲಿ ಒಬ್ಬ ಶ್ರೇಷ್ಠ ಗುರು ಮತ್ತು ಗುರಿ ಹೊಂದಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಕಿಲ್ಲೇಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಇದೇ ವೇಳೆ ನೀಲುಗಲ್ ಡಾ.ಪಂಚಾಕ್ಷರ ಶಿವಾಚಾರ್ಯರು, ದೇವದುರ್ಗದ ಕಪಿಲ ಸಿದ್ಧರಾಮ ಶಿವಾಚಾರ್ಯರು, ಗಬ್ಬೂರು ಬೂದಿಬಸವ ಶಿವಾಚಾರ್ಯರು, ಕರೇಗುಡ್ಡ ಮಹಾಂತಲಿಂಗ ಶಿವಾಚಾರ್ಯರು, ನವಿಲಕಲ್ ಅಭಿನವ ಸೋಮನಾಥ ಶಿವಾಚಾರ್ಯರು, ಸೋಮವಾರಪೇಟೆ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರಿಗೆ ಗುರು ಕಾರುಣ್ಯ ಪ್ರಶಸ್ತಿ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.

ತೆಂಡೆಕೆರೆ ಗಂಗಾಧರ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಮಂಗಳವಾರಪೇಟೆ ವೀರಸಂಗಮೇಶ್ವರ ಶಿವಾಚಾರ್ಯರು, ರೌಡಕುಂದ ಸಿದ್ಧರಾಮ ಶರಣರು, ಚೇಗುಂಟ ಡಾ. ಕ್ಷೀರಲಿಂಗ ಶರಣರು, ಜಾಗಟಗಲ್ ಬೆಟ್ಟದಯ್ಯಪ್ಪ ತಾತ ಮತ್ತು ಸಾಂಬಯ್ಯಪ್ಪ ತಾತ ಸಮಾರಂಭದ ಸಮ್ಮುಖ ವಹಿಸಿದ್ದರು.

ಶ್ರಾವಣ ಒಂದು ತಿಂಗಳ ಕಾಲ ಪುರಾಣ ಪ್ರವಚನ ಮಾಡಿದ ಮಟ್ಟಿಮಲ್ಲಾಪುರ ಶಾಂತಾಶ್ರಮದ ನಿಜಾನಂದ ಸ್ವಾಮಿಗಳಿಗೆ ರಂಭಾಪುರಿ ಜಗದ್ಗುರುಗಳು ವಿಶೇಷ ಗುರುರಕ್ಷೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಮುಖಂಡರು, ಭಕ್ತರು ಭಾಗವಹಿಸಿದ್ದರು.

08ಕೆಪಿಆರ್‌ಸಿಆರ್ 01ರಾಯಚೂರಿನ ಸಾವಿರದೇವರ ಸಂಸ್ಥಾನ ಕಿಲ್ಲೇಬೃಹನ್ಮಠದಲ್ಲಿ ಶ್ರಾವಣ ಪುರಾಣ ಪ್ರವಚನ ಶತಮಾನೋತ್ಸವ ಮಂಗಲ ಸಮಾರಂಭ ನಡೆಯಿತು.

Share this article