ಕನ್ನಡಪ್ರಭ ವಾರ್ತೆ ಬೆಳಗಾವಿ
ರುದ್ರಣ್ಣ ಸಾವಿನ ಘಟನೆ ಬಗ್ಗೆ ಮಾಧ್ಯಮಗಳಿಂದ ನಾನು ತಿಳಿದಿದ್ದೇನೆ. ಈ ಬಗ್ಗೆ ನನಗೂ ಹೆಚ್ಚೇನೂ ಮಾಹಿತಿ ಇಲ್ಲ. ರುದ್ರೇಶನನ್ನು ನಾನು ಯಾವತ್ತಿಗೂ ಭೇಟಿಯಾಗಿಲ್ಲ. ಯಾವುದೇ ಕೆಲಸಕ್ಕೂ ಸಂಪರ್ಕಿಸಿಲ್ಲ. ರುದ್ರಣ್ಣ ನನ್ನನ್ನು ಭೇಟಿಯಾಗಲು ನಮ್ಮ ಮನೆಗೆ ಬಂದಿರುವ ವಿಚಾರ ನನಗೆ ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಚೇರಿಯಲ್ಲಿ ಸಾವಿರಾರು ಜನ ಭೇಟಿಗೆ ಬರುತ್ತಾರೆ. ಸಚಿವರು ಎಂದ ಮೇಲೆ 10-15 ಜನ ಆಪ್ತ ಕಾರ್ಯದರ್ಶಿಗಳಿರುವುದು ಸ್ವಾಭಾವಿಕ. ಕ್ಷೇತ್ರದ ಕೆಲಸ, ಇತರೆ ಕೆಲಸಗಳಿಗೆ ಪಿಎಗಳ ನೇಮಕ ಮಾಡಿರುತ್ತೇವೆ ಎಂದರು.
ಬೆಳಗಾವಿಯ ತಹಸೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣವರ ಸಾವಿನ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ರುದ್ರಣ್ಣ ಯಡವಣ್ಣವರ ಸಾವಿನ ವಿಷಯ ಅತ್ಯಂತ ದುಃಖ ತರುವಂತಹದು. ಇದೊಂದು ದುರದೃಷ್ಟಕರ ಘಟನೆ. ಇಂತಹ ಘಟನೆಗಳು ನಡೆಯಬಾರದು. ರುದ್ರಣ್ಣವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.ರುದ್ರಣ್ಣವರ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರಿಗೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ. ಆದರೆ ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ವ್ಯರ್ಥ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು.
ಈ ಹಿಂದಿನ ಈಶ್ವರಪ್ಪನವರ ಪ್ರಕರಣಕ್ಕೂ ಮತ್ತು ಈ ಪ್ರಕರಣಕ್ಕೂ ಬಹಳ ವ್ಯತ್ಯಾಸವಿದೆ. ಈ ಸಾವಿನ ಪ್ರಕರಣ ಆದಷ್ಟು ಬೇಗ ತನಿಖೆಯಾಗಲಿ. ನಿಷ್ಪಕ್ಷಪಾತ ತನಿಖೆ ಆಗಬೇಕೆಂದು ಪೊಲೀಸ್ ತನಿಖಾಧಿಕಾರಿಗಳಿಗೂ ಮನವಿ ಮಾಡುತ್ತೇನೆ. ಸಾವಿಗೀಡಾದ ನೌಕರನ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದರು.ಲಕ್ಷ್ಮೀ ಹೆಬ್ಬಾಳಖರ ಅವರ ಪಾಪದ ಕೊಡ ತುಂಬಿದೆ ಎಂಬ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಬ್ಬಾಳಕರ, ಅವರು ಹಿರಿಯರು, ಯಾರು ಪಾಪ ಮಾಡಿದ್ದಾರೋ ಅವರ ಕೊಡ ತುಂಬುತ್ತದೆ ಎಂದರು.