ಎಚ್.ಕೆ.ಅಶ್ವತ್ಥ್ ಹಳುವಾಡಿ
ಮಹಿಳೆಯರ ಆರೋಗ್ಯಕ್ಕಾಗಿ ಗ್ರಾಮ ಪಂಚಾಯ್ತಿಯಲ್ಲಿ ಶೇ.5 ರಷ್ಟು ಹಣವನ್ನು ಮೀಸಲಿಟ್ಟು ಪಂಚಾಯ್ತಿ ವ್ಯಾಪ್ತಿಯ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸುವ ಮೂಲಕ ತಾಲೂಕಿನ ಬೇವುಕಲ್ಲು ಪಂಚಾಯ್ತಿ ಜಿಲ್ಲೆಯಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ.
ಮಹಿಳೆಯರ ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದಲ್ಲಿ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಿದ ಬೇವುಕಲ್ಲು ಜಿಲ್ಲೆಯ ಏಕೈಕ ಗ್ರಾಮ ಪಂಚಾಯ್ತಿಯಾಗಿದೆ.ಪ್ರಸ್ತುತ ಮಹಿಳೆಯರ ಆರೋಗ್ಯದ ಕುರಿತು ಅನೇಕ ಕಾರ್ಯಕ್ರಮ, ಶಿಬಿರಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಆದರೂ ಬಹುತೇಕ ಆಸ್ಪತ್ರೆಗಳಲ್ಲಿ ಮಹಿಳಾ ರೋಗಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಇದಕ್ಕೆ ಮಹಿಳೆಯರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಕಾರಣವಾಗಿದೆ.
ಗ್ರಾಪಂನಲ್ಲಿ ಯಾವುದೇ ಅಭಿವೃದ್ಧಿ ಕ್ರಿಯಾ ಯೋಜನೆ ತಯಾರಿಸಬೇಕಾದರೂ ಪ್ರಮುಖವಾಗಿ ಬಹುತೇಕ ಸದಸ್ಯರ ಆಸಕ್ತಿ ರಸ್ತೆ ಮತ್ತು ಚರಂಡಿಯೇ ಆಗಿರುತ್ತದೆ. ಆದರೆ, ಬೇವುಕಲ್ಲು ಗ್ರಾಪಂ ಸದಸ್ಯರು ಇದಕ್ಕೆ ಭಿನ್ನ ಆಲೋಚನೆ ಮೂಲಕ ಜಿಲ್ಲೆಯ ಇತರೆ ಪಂಚಾಯ್ತಿ ಸದಸ್ಯರಿಗೆ ಮಾದರಿಯಾಗಿ ಕೆಲಸ ಮಾಡುತ್ತಿದೆ.
ಗ್ರಾಮೀಣ ಪ್ರದೇಶದ ಬಹುತೇಕ ಮಹಿಳೆಯರಿಗೆ ಮುಟ್ಟಿನ ಕಪ್ ಬಳಕೆ ಹೊಸತು. ಇನ್ನು ಎಷ್ಟೋ ಮಂದಿ ಪ್ಯಾಡ್ ಬಳಕೆ ಮಾಡಲು ಹಿಂದು- ಮುಂದು ನೋಡುತ್ತಾರೆ. ಈ ನಡುವೆ ಮುಟ್ಟಿನ ಕಪ್ ಬಳಸುವಂತೆ ಗ್ರಾಮಗಳ ಮಹಿಳೆಯರು, ಯುವತಿಯರಲ್ಲಿ ಅರಿವು ಮೂಡಿಸುವುದು ಸವಾಲಿನ ಕೆಲಸವಾಯಿತು.
ಮಹಿಳಾ ಸ್ವ- ಸಹಾಯ ಸಂಘಗಳ ಮೂಲಕ ಮಹಿಳೆಯರನ್ನು ಗ್ರಾಪಂನಿಂದ ಆಯೋಜಿಸಿದ್ದ ಆರೋಗ್ಯ ಕಾರ್ಯಕ್ರಮಗಳಿಗೆ ಬರುವಂತೆ ಆಹ್ವಾನಿಸಿ ಈ ಮೂಲಕ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮತ್ತು ಬಳಕೆ ಹಾಗೂ ಮಹಿಳಾ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾ ಮನೆ ಮನೆಗೂ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಮೂಲಕ ಮಂಡ್ಯ ತಾಲೂಕಿನ ಬೇವುಕಲ್ಲು ಗ್ರಾಪಂ ವಿಶಿಷ್ಟ ಆರೋಗ್ಯ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಿದ ಜಿಲ್ಲೆಯ ಏಕೈಕ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಅವರು ಕೂಡ ಇತ್ತೀಚೆಗೆ ನಡೆದ ಪಂಚಾಯ್ತಿ ಸಿಬ್ಬಂದಿ ತರಬೇತಿಯಲ್ಲಿ ಎಲ್ಲಾ ಗ್ರಾಪಂಗಳು ಮುಟ್ಟಿನ ಕಪ್ ವಿತರಣೆ ಮಾಡಲು ಕ್ರಮವಹಿಸಲು ಸೂಚಿಸಿರುವುದು ಬೇವುಕಲ್ಲು ಪಂಚಾಯ್ತಿ ಕಾರ್ಯಕ್ಕೆ ಸಿಕ್ಕ ಗೌರವವಾಗಿದೆ.ಮಹಿಳೆಯರ ಆರೋಗ್ಯದ ವಿಚಾರವಾಗಿ ಪಿಡಿಒ ಪ್ರದೀಪ್ ಅವರು ನೀಡಿದ ಸಲಹೆಯಿಂದ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮಹಿಳೆಯರಿಗೆ ಮುಟ್ಟಿನ ಕಪ್ ವಿತರಣೆ ಮಾಡಲು ಸಹಕಾರಿಯಾಗಿದೆ. ಯಾವಾಗಲೂ ವಿಭಿನ್ನ, ವಿಶಿಷ್ಟ ಆಲೋಚನೆ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುವ ಅಧಿಕಾರಿಗಳಿಂದ ಇಂತಹ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ.
- ರಾಜೇಶ್, ಉಪಾಧ್ಯಕ್ಷರು, ಬೇವುಕಲ್ಲು ಗ್ರಾಪಂಯಾವುದೇ ಕಾರ್ಯಕ್ರಮಗಳಾಗಲಿ ಅವುಗಳು ಯಶಸ್ವಿಯಾಗಲು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರ ಅಗತ್ಯ. ಇದಕ್ಕೆ ಬೇವುಕಲ್ಲು ಪಂಚಾಯ್ತಿ ಎಲ್ಲಾ ಆಡಳಿತ ಮಂಡಳಿ ಸದಸ್ಯರು ಕೈ ಜೋಡಿಸಿದ್ದರಿಂದ ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಯೋಜನೆ ರೂಪಿಸಲು ಸಹಕಾರಿಯಾಯಿತು.