ಅ.30ರಂದು ಅಂಬಾದೇವಿ ನೂತನ ದೇವಸ್ಥಾನ ಸಿಎಂರಿಂದ ಉದ್ಘಾಟನೆ

KannadaprabhaNewsNetwork |  
Published : Oct 17, 2026, 01:30 AM IST
16ಕೆಪಿಎಸ್ಎನ್ಡಿ1: ಶಾಸಕ ಹಂಪನಗೌಡ ಬಾದರ್ಲಿ | Kannada Prabha

ಸಾರಾಂಶ

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿ ಮತ್ತು ಬರಗಾಲವನ್ನು ಗಮನದಲ್ಲಿಟ್ಟುಕೊಂಡು ಅ.19, 20 ಮತ್ತು 21 ರಂದು ಮೂರು ದಿನಗಳ ಕಾಲ ಸಿಂಧನೂರಿನಲ್ಲಿ ದಸರಾ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಯ ನೀತಿ ಸಂಹಿತೆ ಜಾರಿ ಮತ್ತು ಬರಗಾಲವನ್ನು ಗಮನದಲ್ಲಿಟ್ಟುಕೊಂಡು ಅ.19, 20 ಮತ್ತು 21 ರಂದು ಮೂರು ದಿನಗಳ ಕಾಲ ಸಿಂಧನೂರಿನಲ್ಲಿ ದಸರಾ ಉತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.19ರಂದು ಸಂಜೆ 4 ಗಂಟೆಗೆ ತಾಲೂಕಿನ ವಳಬಳ್ಳಾರಿ ಗ್ರಾಮದಲ್ಲಿ ನೂರಾರು ಮಹಿಳೆಯರು ಕುಂಭ-ಕಳಸದೊಂದಿಗೆ ತುಂಗಭದ್ರಾ ನದಿಯವರೆಗೆ ಮೆರವಣಿಗೆ ನಡೆಸಲಿದ್ದಾರೆ. ನಂತರ ವಾರಣಾಸಿಯ ಅರ್ಚಕರ ತಂಡದಿಂದ ತುಂಗಭದ್ರೆಗೆ ಅಂಬಾರಾತಿ ಕಾರ್ಯಕ್ರಮ ಜರುಗಲಿದೆ. ಅ.20ರಂದು ಸಂಜೆ 7 ಗಂಟೆಗೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಯುವ ದಸರಾ ನಡೆಯಲಿದ್ದು, ಗಾಯಕ ಚಂದನ್ ಶೆಟ್ಟಿ, ಜನಪದ ಗಾಯಕ ಹನುಮಂತ ಲಂಬಾಣಿ, ಸಂಗೀತ ಕಲಾವಿದೆ ಸುಪ್ರಿಯಾ ಮತ್ತು ಅವರ ತಂಡ ಆಗಮಿಸಿ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಅ.21ರಂದು ಸಂಜೆ 4 ಗಂಟೆಗೆ ಸ್ಥಳೀಯ ಮಿನಿವಿಧಾನಸೌಧ ಆವರಣದಿಂದ ಆನೆಯ ಮೇಲೆ ಅಂಬಾರಿಯಲ್ಲಿ ಅಂಬಾಮಠದ ಅಂಬಾದೇವಿಯ ಉತ್ಸವ ಮೂರ್ತಿಯನ್ನು ಇಟ್ಟು ಜಂಬೂ ಸವಾರಿ ಮೆರವಣಿಗೆ ಪುಣೆಯ ಡೊಳ್ಳು ಕುಣಿತ ಕಲಾ ತಂಡದೊಂದಿಗೆ ಬಸವೇಶ್ವರ ವೃತ್ತ, ಹಳೆಬಜಾರ್ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತದ ಮೂಲಕ ಮಿನಿವಿಧಾನಸೌಧ ಆವರಣದಲ್ಲಿ ಬಂದು ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮಗಳಲ್ಲಿ ಸಿಂಧನೂರಿನ ಸಂಘ ಸಂಸ್ಥೆಗಳ ಮುಖಂಡರು, ಸಮಾಜದ ಬಾಂಧವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಅ.30ರಂದು ಅಂಬಾದೇವಿ ನೂತನ ದೇವಸ್ಥಾನ ಸಿಎಂ ಉದ್ಘಾಟನೆ: ತಾಲೂಕಿನ ಅಂಬಾಮಠದ ಅಂಬಾದೇವಿಯ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮ ಅ.30ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೇವಸ್ಥಾನ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಅಂದಾಜು ರು.1500 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಜರುಗಲಿದೆ. ಇದೇ ಸಂದರ್ಭದಲ್ಲಿ ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್, ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ, ಮುಜುರಾಯಿ ಇಲಾಖೆಯ ಸಚಿವ ಕೆ.ಎಸ್.ಬಸವಂತಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ಎಸ್.ತಂಗಡಗಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಸೇರಿದಂತೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಅಂಬಣ್ಣ ಸೋಮಲಾಪುರ, ಖಾಜಿಮಲಿಕ್ ವಕೀಲ, ಅಂಬಾಮಠದ ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ಸದಸ್ಯರಾದ ಶಂಕ್ರಗೌಡ ಸಿಂಗಾಪುರ, ಶಿವಣ್ಣ, ರಾಘವೇಂದ್ರ ರೆಡ್ಡಿ ಮುಕ್ಕುಂದಾ, ಶೇಷಗಿರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನದಲ್ಲಿ ಧಾರಾಕಾರ ಮಳೆ ಹಿನ್ನೆಲೆ ರೈತರಿಗೆ ಸಂತಸ
ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ ಬೆಳೆಸಿಕೊಳ್ಳಿ