ಹೂವಿನಹಡಗಲಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೊಸ ಉದ್ಯೋಗ ಸೃಷ್ಠಿಸುವಂತಹ ಕೋರ್ಸ್‌ಗಳನ್ನು, ಕಾಲೇಜಿನಲ್ಲಿ ಆರಂಭಿಸಬೇಕೆಂಬ ಉದ್ದೇಶದಿಂದ ಬಿಸಿಎ ಕೋರ್ಸ್‌ಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.ಇಲ್ಲಿನ ಜಿಬಿಆರ್ ಕಾಲೇಜಿನಲ್ಲಿ ಸರ್ವ ಸಂಘಗಳ ಕಾರ್ಯ ಚಟುವಟಿಕೆ ಹಾಗೂ ಹೊಸದಾಗಿ ಆರಂಭಿಸಿರುವ ಬಿಸಿಎ ಕೋರ್ಸ್ ಉದ್ಘಾಟನೆ ಮತ್ತು ಪ್ರಾಚಾರ್ಯ ಎಸ್.ಎಸ್.ಪಾಟೀಲ ಅವರು ಬರೆದ ಭಾರತದ ಆರ್ಥಿಕತೆ ಪುಸ್ತಕ ಬಿಡುಗಡೆ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಣವೇ ಕಾರಣವಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಕಾರಣಕ್ಕಾಗಿ ಇಂತಹ ಹೊಸ ಕೋರ್ಸ್‌ಗಳನ್ನು ಸರ್ಕಾರ ಮಟ್ಟದಲ್ಲಿ, ಉನ್ನತ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಮಂಜೂರು ಮಾಡಿಸಿದ್ದೇನೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ನಾನು ಗ್ರಾಮೀಣ ಭಾಗದ ವಿದ್ಯಾರ್ಥಿಯಾಗಿದ್ದು, ಈ ದೆಸೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಕಷ್ಟು ಕಷ್ಟಪಟ್ಟಿದ್ದೇನೆ, ಇಂತಹ ಕಷ್ಟವನ್ನು ಯಾರು ಅನುಭವಿಸಬಾರದೆಂಬ ಕಾರಣಕ್ಕಾಗಿ, ನಾನು ಹೆಚ್ಚು ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಹೊಂದಬೇಕು, ಅದರಂತೆ ಅಭ್ಯಾಸವನ್ನೂ ಮಾಡಿ ಕುಂಟು ನೆಪಗಳನ್ನು ಹೇಳದೇ, ಗುರಿಯತ್ತ ಸಾಗಿದರೇ ಸುಲಭವಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.ಪ್ರಾಚಾರ್ಯ ಎಸ್.ಎಸ್. ಪಾಟೀಲರ ಭಾರತದ ಆರ್ಥಿಕತೆ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ, ಬೆಂಗಳೂರು ವಿವಿಯ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಸ್.ಆರ್. ಕೇಶವ,
ಭಾರತ ಆರ್ಥಿಕತೆ ಕುರಿಸು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಆದರೆ, ಎಸ್.ಎಸ್. ಪಾಟೀಲರ ಭಾರತ ಆರ್ಥಿಕತೆ ಪುಸ್ತಕ ಒಂದಿಷ್ಟು ವಿಭಿನ್ನವಾಗಿದ್ದು, ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗೆ ಉತ್ತಮ ಮಾಹಿತಿ ಹೊಂದಿದೆ ಎಂದರು.ಕಲಬುರಗಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಾಸುದೇವ ಸೇಡಂ ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೂ ಅಭಿವೃದ್ಧಿ ಮಾತ್ರ ಕಾಣಲಿಲ್ಲ. ಡಾ. ನಂಜುಂಡಪ್ಪ ವರದಿಯಲ್ಲಿ ನೀಡಿರುವ ಅಂಕಿ ಅಂಶಗಳಲ್ಲಿ ಇಂದಿಗೂ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ ಹಿಂದುಳಿದ ಪ್ರದೇಶವೆಂಬ ಹಣೆ ಪಟ್ಟಿಯಿಂದ ಹೊರಗೆ ಬರಲು ಸಾಧ್ಯವಾಲಿಲ್ಲ. ಆದರಿಂದ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಒತ್ತು ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ಕುಮಾರಸ್ವಾಮಿ ಮಿನರಲ್ಸ್ ಹಿರಿಯ ವ್ಯವಸ್ಥಾಪಕ ಚಂದ್ರಕಾಂತ ಎಸ್.ಪಾಟೀಲ್ ಮಾತನಾಡಿ, ಕೈಗಾರಿಕೆಗಳು ಕೇವಲ ಬೆಂಗಳೂರಿನಲ್ಲೇ ಕೇಂದ್ರೀಕೃತವಾಗುತ್ತಿದೆ, ಅವುಗಳಿಗೆ ಜಿಲ್ಲಾ ಮಟ್ಟದಲ್ಲಿ ಸೂಕ್ತ ಜಾಗ ನೀಡಿ ಅವುಗಳನ್ನು ವಿಕೇಂದ್ರೀಕರಣ ಮಾಡಿದಾಗ ಹೆಚ್ಚು ಉದ್ಯೋಗಳು ಸೃಷ್ಠಿಯಾಗುವ ಜತೆಗೆ ಸ್ಥಳೀಯವಾಗಿ ಜನರಿಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಎಲ್ಲ ಭಾಷೆಗಳ ಜ್ಞಾನವನ್ನು ಹೊಂದಿದಾಗ ಎಲ್ಲ ಕಡೆಗೂ ಬದುಕುವ ಕಲೆ ಕಲಿಯಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ ರಡ್ಡಿ, ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ ಮಾತನಾಡಿದರು. ವೀವಿ ಸಂಘದ ಡಾ. ಅರವಿಂದ ಪಾಟೀಲ, ಬಿ. ಏರಿಸ್ವಾಮಿ, ಎಚ್.ನಾಗರಾಜ, ಶಿವಕುಮಾರ ಅಕ್ಕಿ, ಕೆ.ಎಂ. ಉದಾಸಿ, ಎಂ. ಮಲ್ಲಿಕಾರ್ಜುನ, ಎಎಸ್ಪಿ ಸಲೀಂ ಪಾಷ, ಸಿದ್ದಲಿಂಗಮೂರ್ತಿ, ಶ್ರೀನಿವಾಸ, ಅಮರೇಗೌಡ ಪಾಟೀಲ, ಜಿ. ವೇಣುಗೋಪಾಲ ಸೇರಿದಂತೆ ಇತರರಿದ್ದರು. ನಂತರದಲ್ಲಿ ವಿದ್ಯಾರ್ಥಿಗಳಿಗೆ ದತ್ತಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.