ರಾಜ್ಯದ ಗ್ರಾಮೀಣ ಭಾಗದ ನಿವಾಸಿಗಳಿಗೆ, ನಗರ ಪ್ರದೇಶಗಳಲ್ಲಿ ವಾಸಿಸುವ ಅನಕ್ಷರಸ್ಥರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ಮೂಲಕವೇ ನೇರ ಮಾರ್ಗದರ್ಶನ ಸಿಗುವಂತಹ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸಿಗೆ ಸರ್ಕಾರದ ಸ್ಪಂದನೆ । ಮಧ್ಯವರ್ತಿಗಳ ಹಾವಳಿಗೆ ಮುಕ್ತಿ । ಗ್ರಾಮೀಣ ಜನರಿಗೆ, ಅನಕ್ಷರಸ್ಥರಿಗೆ ಸಿಗಲಿದೆ ನೇರ ಆಸರೆ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ರಾಜ್ಯದ ಗ್ರಾಮೀಣ ಭಾಗದ ನಿವಾಸಿಗಳಿಗೆ, ನಗರ ಪ್ರದೇಶಗಳಲ್ಲಿ ವಾಸಿಸುವ ಅನಕ್ಷರಸ್ಥರಿಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯ ಮೂಲಕವೇ ನೇರ ಮಾರ್ಗದರ್ಶನ ಸಿಗುವಂತಹ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಪಿಂಚಣಿ, ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಮೂಲಭೂತ ಸೇವೆಗಳಿಗಾಗಿ ಮಧ್ಯವರ್ತಿಗಳ ಸುಲಿಗೆಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ ಸಿ) ಶಿಫಾರಸ್ಸಿನ ಅನ್ವಯ, ಪ್ರತಿ ತಾಲೂಕು, ಉಪ ವಿಭಾಗ, ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಗಳಲ್ಲಿ ತಹಶೀಲ್ದಾರ್ ಗ್ರೇಡ್-2 ಹಂತದ ಅಧಿಕಾರಿಗಳನ್ನು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಿಸಲು ರಾಜ್ಯ ಸರ್ಕಾರ ಸೆ. 22ರಂದು ಮಹತ್ವದ ಆದೇಶ ಹೊರಡಿಸಿದೆ.ಜನಸ್ನೇಹಿ ಹೆಜ್ಜೆ:
ಕಂದಾಯ ಕಚೇರಿಗಳಲ್ಲಿ ಕಾಗದಪತ್ರಗಳ ಗೋಜು, ನಿರಂತರ ಅಲೆದಾಟ ಹಾಗೂ ಕಡತ ವಿಲೇವಾರಿಯ ವಿಳಂಬದಿಂದಾಗಿ ಗ್ರಾಮೀಣ ಜನರು ಅನಿವಾರ್ಯವಾಗಿ ದಲ್ಲಾಳಿಗಳನ್ನು ಆಶ್ರಯಿಸಬೇಕಾಗಿತ್ತು. ತಮ್ಮ ಹಕ್ಕಿನ ವೃದ್ಧಾಪ್ಯ, ವಿಧವಾ ಅಥವಾ ಅಂಗವಿಕಲ ವೇತನ ಪಡೆಯಲೂ ಕಮಿಷನ್ ಕೊಡುವ ದುಸ್ಥಿತಿ ಇತ್ತು. ಇದೀಗ ಗ್ರೇಡ್-2 ತಹಶೀಲ್ದಾರ್ ದರ್ಜೆಯ ಅಧಿಕಾರಿಯೇ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುವುದರಿಂದ, ಕಚೇರಿಗೆ ಬರುವ ಜನಸಾಮಾನ್ಯರಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಕಡತಗಳ ಸ್ಥಿತಿಗತಿ ಹಾಗೂ ಸೇವೆ ಪಡೆಯುವ ವಿಧಾನದ ಕುರಿತು ಉಚಿತ ಹಾಗೂ ನೇರ ಮಾರ್ಗದರ್ಶನ ಸಿಗಲಿದೆ.ಅನುಕೂಲತೆಗಳು:
ಸಾರ್ವಜನಿಕರು ನೇರವಾಗಿ ಅಧಿಕಾರಿಯನ್ನು ಸಂಪರ್ಕಿಸಲು ವೇದಿಕೆ ಸಿಗುವುದರಿಂದ ಕಚೇರಿಗಳಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ಪೂರ್ಣ ತಡೆ ಬೀಳಲಿದೆ. ಅರ್ಜಿ ಭರ್ತಿ, ದಾಖಲೆಗಳ ಜೋಡಣೆ ಹಾಗೂ ನಿಯಮಗಳ ವಿವರಣೆಯನ್ನು ಅಧಿಕಾರಿಗಳೇ ಒದಗಿಸುವುದರಿಂದ ಅಶಿಕ್ಷಿತರು ವಂಚನೆಗೆ ಒಳಗಾಗುವುದು ತಪ್ಪುತ್ತದೆ. ಸಾರ್ವಜನಿಕರ ಅಹವಾಲುಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಶಾಖೆಗಳಿಂದ ತ್ವರಿತವಾಗಿ ಕೆಲಸ ಮಾಡಿಸಿಕೊಡುವ ಹೊಣೆಗಾರಿಕೆ ಸೇರಿದಂತೆ ಹತ್ತಾರು ಮಹತ್ವದ ಅನುಕೂಲತೆಗಳು ಆಗಲಿವೆ ಎನ್ನುವ ಮಹತ್ವದ ಉದ್ದೇಶವನ್ನು ಸರ್ಕಾರ ಹೊಂದಿದೆ.ಇದೊಂದು ಮಾನವ ಹಕ್ಕುಗಳ ರಕ್ಷಣೆಯ ಪ್ರಮುಖ ಸಾಧನವಾಗಲಿದೆ. ಸಕಾಲಕ್ಕೆ ಸಿಗದ ಸೇವೆಗಳಿಂದ ಹಕ್ಕುಚ್ಯುತಿಯಾಗುತ್ತಿದ್ದ ಜನಸಾಮಾನ್ಯರಿಗೆ ಆಡಳಿತಾತ್ಮಕ ರಕ್ಷಣೆ ದೊರೆಯಲಿದೆ. ಕಂದಾಯ ಕಚೇರಿ ಅಂದರೆ ಜನಸಾಮಾನ್ಯರು ಭಯ ಪಡುವ ವಾತಾವರಣ ಇರಬಾರದು. ಹಳ್ಳಿಗಳಿಂದ ಬರುವ ಅನಕ್ಷರಸ್ಥರು ಮತ್ತು ಬಡವರು ಮಧ್ಯವರ್ತಿಗಳ ಕೈಗೆ ಸಿಲುಕಿ ಶೋಷಣೆಗೆ ಒಳಗಾಗುವುದನ್ನು ತಪ್ಪಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಹಶೀಲ್ದಾರ್ ಗ್ರೇಡ್-2 ದರ್ಜೆಯ ಪಿಆರ್‌ಓಗಳು ಕಚೇರಿಗಳಲ್ಲಿ ಜನರ ಮೊದಲ ಧ್ವನಿಯಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎನ್ನುತ್ತಾರೆ ಗದಗ ಶಾಸಕ ಎಚ್.ಕೆ. ಪಾಟೀಲ.ವರ್ಷಗಳಿಂದ ಪಿಂಚಣಿಗಾಗಿ ತಾಲೂಕು ಕಚೇರಿಗೆ ಅಲೆದರೂ ಕೆಲಸವಾಗದೆ ದಲ್ಲಾಳಿಗಳಿಗೆ ಹಣ ಕೊಡಬೇಕಾದ ಪರಿಸ್ಥಿತಿ ಇತ್ತು. ಈಗ ಕಚೇರಿಯಲ್ಲೇ ಮಾರ್ಗದರ್ಶನ ನೀಡಲು ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿರುವುದು ನಮ್ಮಂತಹ ಬಡವರಿಗೆ ದೊಡ್ಡ ಆಸರೆಯಾಗಲಿದೆ ಎನ್ನುತ್ತಾರೆ ಗದಗ ನಗರದ ನಿವಾಸಿ ಮಲ್ಲಪ್ಪ ಹಡಪದ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.