ಹಾನಗಲ್ಲ: ಇಲ್ಲಿನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಡ್ರೀಮ್ ಸ್ಕೂಲ್ ಫೌಂಡೇಶನ್‌ನಿಂದ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು ತಾಲೂಕಿನ 7 ಸರ್ಕಾರಿ ಪ್ರೌಢಶಾಲೆಗಳಿಗೆ 55 ಇಂಚಿನ್ 4ಕೆ ಸ್ಮಾರ್ಟ್ ಟಿವಿ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಶಾಸಕ ಶ್ರೀನಿವಾಸ ಮಾನೆ ಉಚಿತವಾಗಿ ವಿತರಿಸಿದರು.
ಇದಕ್ಕೂ ಮೊದಲು ಏಕದಿನ ಅಂತರ್ ಶಾಲಾ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ ಮತ್ತು ಗಣಿತ ಪ್ರದರ್ಶನದ ಎರಡನೆ ಹಂತ ಯಶಸ್ವಿಯಾಗಿ ನಡೆಯಿತು. ತಾಲೂಕಿನ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಸೃಜನಶೀಲ ಮಾದರಿಗಳನ್ನು ಪ್ರದರ್ಶಿಸಿದರು. ಪ್ರತಿಫಲನ ಮತ್ತು ವಿಚಲನ, ಆಮ್ಲಗಳು, ಪ್ರತ್ಯಾಮ್ಲಗಳು, ಲವಣಗಳು, ಸರಣಿ, ಸಮಾಂತರ ರೆಸಿಸ್ಟರ್‌ಗಳು, ಉಸಿರಾಟದ ವ್ಯವಸ್ಥೆಯ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು. ಪ್ರದರ್ಶನದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರವಾಗಿ ನಗದು ಬಹುಮಾನ ವಿತರಿಸಲಾಯಿತು.
ಡ್ರೀಮ್ ಸ್ಕೂಲ್ ಫೌಂಡೇಶನ್‌ನ ಆಪರೇಷನಲ್ ಮುಖ್ಯಸ್ಥ ಸಗಾಯಿ ಸೆಬಾಸ್ಟಿಯನ್, ಪ್ರೋಗ್ರಾಂ ವ್ಯವಸ್ಥಾಪಕರಾದ ರವೀಂದ್ರ, ಮನೀಷಾ, ಜಿಲ್ಲಾ ಸಂಯೋಜಕರಾದ ಮಂಗಳಾ, ಬಿಇಒ ವಿ.ವಿ. ಸಾಲಿಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜಾಗತಿಕ ಸ್ಪರ್ಧೆಹಾನಗಲ್ ತಾಲೂಕಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಡ್ರೀಮ್ ಸ್ಕೂಲ್ ಫೌಂಡೇಶನ್ ಮತ್ತು ಪರಿವರ್ತನ ಕಲಿಕಾ ಕೇಂದ್ರದಿಂದ ಶಿಕ್ಷಣ ಉತ್ತೇಜಿಸುವ ನಾನಾ ಚಟುವಟಿಕೆ ಆಯೋಜಿಸಲಾಗುತ್ತಿದೆ. ನಗರ ಪ್ರದೇಶದಲ್ಲಿನ ಸೌಲಭ್ಯಗಳನ್ನು ಗ್ರಾಮೀಣ ಶಾಲೆಗಳಿಗೂ ಕಲ್ಪಿಸಿ ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸಲಾಗುತ್ತಿದೆ.
ಶ್ರೀನಿವಾಸ ಮಾನೆ, ಶಾಸಕ