ಸೋಮರಡ್ಡಿ ಅಳವಂಡಿ
ಕೊಪ್ಪಳ : ಬಿಸಿಲನಾಡು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನೇ ದಿನೇ ಚುನಾವಣೆ ರಂಗು ಪಡೆದುಕೊಳ್ಳುತ್ತಿದೆ. ಬಿಜೆಪಿಯ ಭದ್ರಕೋಟೆಯಾಗಿರುವ ಕೊಪ್ಪಳ ಕ್ಷೇತ್ರವನ್ನು ಈ ಬಾರಿ ಹೇಗಾದರೂ ಮಾಡಿ ಗೆದ್ದೇ ಗೆಲ್ಲಬೇಕು ಎಂದು ಕಾಂಗ್ರೆಸ್ ಪ್ರಯತ್ನ ಮಾಡುತ್ತಿರುವುದು ರಣಕಣ ತಾರಕಕ್ಕೇರುವಂತೆ ಮಾಡಿದೆ.2024ರ ಚುನಾವಣೆಯಲ್ಲಿ ಬಿಜೆಪಿ, ಹಾಲಿ ಸಂಸದ ಸಂಗಣ್ಣ ಕರಡಿ ಬದಲಿಗೆ ಹೊಸಮುಖ, ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಿ, ಅಖಾಡಕ್ಕೆ ಇಳಿಸಿದೆ. ಕಾಂಗ್ರೆಸ್ ತಮ್ಮ ಹಳೆಯ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಅವರನ್ನೇ ಕಣಕ್ಕೆ ಇಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಈ ಮೂಲಕ ಹಿಟ್ನಾಳ ಕುಟುಂಬ ಸತತ ಎರಡು ಸೋಲುಗಳ ಬಳಿಕ ಮೂರನೇ ಪ್ರಯತ್ನಕ್ಕೆ ಕೈ ಹಾಕಿದೆ.
ಕ್ಷೇತ್ರವ್ಯಾಪ್ತಿಯಲ್ಲಿ ಕೊಪ್ಪಳ ಜಿಲ್ಲೆಯ 5, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳಿವೆ. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಕೆಆರ್‌ಪಿಪಿ ಪಕ್ಷ (ಈಗ ಬಿಜೆಪಿಯೊಂದಿಗೆ ವಿಲೀನವಾಗಿದೆ)ದ ಗಾಲಿ ಜನಾರ್ದನರೆಡ್ಡಿ ಶಾಸಕರಾಗಿದ್ದಾರೆ.
ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿ ಬಲವರ್ಧನೆಗೆ ಕಾರಣವಾಗಿದೆ. ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿಲ್ಲವಾದರೂ ಅದರದೆ ಆದ ಮತದಾರರು ಇದ್ದಾರೆ. ಹೀಗಾಗಿ, ಇದು ಬಿಜೆಪಿಗೆ ಬಲ ಹೆಚ್ಚಳವಾಗುವಂತೆ ಮಾಡಿದೆ.
ಟಿಕೆಟ್ ವಂಚಿತ ಸಂಗಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಇದು ಪ್ಲಸ್. ಆದರೆ, ಕರಡಿ ಬಿಜೆಪಿ ತೊರೆದಿದ್ದರಿಂದ ಬಿಜೆಪಿ ನಾಯಕರೆಲ್ಲ ಒಗ್ಗಟ್ಟಾಗಿದ್ದಾರೆ. ತಾವೇ ಸ್ಪರ್ಧೆ ಮಾಡಿದಂತೆ ಹೋರಾಟ ನಡೆಸಿದ್ದಾರೆ. ಜೊತೆಗೆ ರೆಡ್ಡಿ ಸಹ ಸೇರ್ಪಡೆಯಾಗಿರುವುದು ಬಿಜೆಪಿಗೆ ಅನುಕೂಲವಾಗಿದ್ದು, ಒಳಬೇಗುದಿ ಇಲ್ಲದಂತಾಗಿದೆ. ಹೊಸಮುಖ, ಕ್ಯಾವಟರ್‌ರನ್ನು ಅಖಾಡಕ್ಕೆ ಇಳಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ತಪ್ಪಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಆದರೆ, ಕಾಂಗ್ರೆಸಲ್ಲಿ ಬೇಗುದಿ ದೊಡ್ಡ ಪ್ರಮಾಣದಲ್ಲಿಯೇ ಇದೆ. ಅದರಲ್ಲೂ ಗಂಗಾವತಿ ಕಾಂಗ್ರೆಸ್, ಮನೆಯೊಂದು ಮೂರುಬಾಗಿಲು ಎನ್ನುವಂತಾಗಿದೆ. ಆದರೆ, ಗಂಗಾವತಿಯ 2 ಬಣಗಳು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿವೆ ಎನ್ನುವುದು ಗಮನಾರ್ಹ ಸಂಗತಿ. ಅಲ್ಲದೆ, ಕಾಂಗ್ರೆಸ್ ಅಭ್ಯರ್ಥಿಗೆ ಕಳೆದ ಬಾರಿ ತಾವು ಸೋತಿರುವ ಹಾಗೂ ಅದಕ್ಕೂ ಹಿಂದಿನ ಬಾರಿ ಅವರ ತಂದೆ ಕೆ. ಬಸವರಾಜ ಹಿಟ್ನಾಳ ಸೋತಿರುವ ಅನುಕಂಪ ಇದ್ದೇ ಇದೆ. ಜೊತೆಗೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಸಿಎಂರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿಯವರ ಸಂಪುಟ ದರ್ಜೆಯ ಶಕ್ತಿಯೂ ಇರುವುದು ಪ್ಲಸ್ ಆಗಿದೆ. ಇದರ ಜೊತೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನಾಗಿ ಅಮರೇಗೌಡ ಬಯ್ಯಾಪುರ ಅವರನ್ನು ನೇಮಕ ಮಾಡಿರುವುದು, ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗುತ್ತವೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಅಭ್ಯರ್ಥಿಗಳ ಕಿರು ಪರಿಚಯ:ಕೆ.ರಾಜಶೇಖರ ಹಿಟ್ನಾಳ, ಕಾಂಗ್ರೆಸ್
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಅವರ ಪುತ್ರ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರ ಸಹೋದರ. ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ರಾಜಕೀಯ ಅನುಭವ ಹೊಂದಿದ್ದಾರೆ. ಕಾಂಗ್ರೆಸ್ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ಸೇವೆ ಮಾಡಿದ್ದಾರೆ. ಸುಮಾರು 20 ವರ್ಷಗಳ ರಾಜಕೀಯ ಅನುಭವ ಇದೆ. ಕಳೆದ ಬಾರಿಯೂ ಸ್ಪರ್ಧೆ ಮಾಡಿ 36000 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಇದಕ್ಕೂ ಮೊದಲು ಇವರ ತಂದೆ ಬಸವರಾಜ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಈಗ ಹಿಟ್ನಾಳ ಕುಟುಂಬ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 3ನೇ ಬಾರಿ ಪ್ರಯತ್ನ ನಡೆಸಿದೆ.ಡಾ. ಬಸವರಾಜ ಕ್ಯಾವಟರ್, ಬಿಜೆಪಿ
ಜೆಡಿಎಸ್ ಪಕ್ಷದ ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ. ವೈದ್ಯರಾಗಿ ನಾನಾ ದೇಶಗಳಲ್ಲಿ ಸೇವೆ ಸಲ್ಲಿಸಿ, ಈಗ ದೇಶದಲ್ಲಿಯೇ ಸೇವೆ ಮಾಡಬೇಕು ಎನ್ನುವ ಬಯಕೆಯಿಂದ ಕೊಪ್ಪಳ ನಗರದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ, ಸೇವೆ ಮಾಡುತ್ತಿದ್ದಾರೆ. ಬಿಜೆಪಿ ಬಗ್ಗೆ ಒಲವು ಹೊಂದಿದ್ದ ಡಾ. ಬಸವರಾಜ, ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಆದ ಸಂಪರ್ಕ ಹೊಂದಿದ್ದಾರೆ. ಹಾಲಿ ಸಂಸದ ಸಂಗಣ್ಣಗೆ ಟಿಕೆಟ್ ನಿರಾಕರಿಸಿದಾಗ ಅದೇ (ಪಂಚಮಸಾಲಿ) ಸಮುದಾಯದ ಡಾ. ಬಸವರಾಜರನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿದೆ.
ಮತದಾರರ ವಿವರ:
ಪುರುಷರು - 9,12, 818.
ಮಹಿಳಾ ಮತದಾರರು - 9,38, 750.ಇತರರು - 132.
ಒಟ್ಟು ಮತದಾರರು - 18, 51,700.ಜಾತಿವಾರು ಲೆಕ್ಕಾಚಾರ:
ಕೊಪ್ಪಳ ಲೋಕಸಭಾ ಕ್ಷೇತ್ರದ ಇತಿಹಾಸ ನೋಡಿದಾಗ ಲಿಂಗಾಯತರೇ ಅಧಿಕ ಬಾರಿ ಗೆಲುವು ಸಾಧಿಸಿದ್ದಾರೆ. ಕ್ರೋಢೀಕೃತ ಲಿಂಗಾಯತ ಮತಗಳೇ ಅಧಿಕ ಇವೆ. ಹಾಗೆಯೇ, ಹಿಂದುಳಿದ ವರ್ಗಗಳು ಮತ್ತು ಎಸ್ಸಿ, ಎಸ್ಟಿ ಮತಗಳ ಸಂಖ್ಯೆ ಒಟ್ಟುಗೂಡಿದಾಗ ಲಿಂಗಾಯತ ಮತಗಳಿಗೂ ಅಧಿಕವಾಗುತ್ತವೆ. ಲಿಂಗಾಯತರು 5.5 ಲಕ್ಷ, ಕುರುಬರು 2.5 ಲಕ್ಷ, ಎಸ್ಸಿ 2.25 ಲಕ್ಷ, ಮುಸ್ಲಿಂ 2.10 ಲಕ್ಷ , ಎಸ್ಟಿ 2.5 ಲಕ್ಷ ಹಾಗೂ 2.5 ಲಕ್ಷ ಇತರ ಮತಗಳಿವೆ. ಹಾಗೆಯೇ, ಆಂಧ್ರ ಮೂಲದ, ಬಾಂಗ್ಲಾ ಮೂಲದ ಮತದಾರರೂ ಇದ್ದಾರೆ.
2019ರ ಫಲಿತಾಂಶ:ಕರಡಿ ಸಂಗಣ್ಣ - ಬಿಜೆಪಿ - ಗೆಲುವು - 5,86,783.ರಾಜಶೇಖರ ಹಿಟ್ನಾಳ - ಕಾಂಗ್ರೆಸ್ - ಸೋಲು - 5,48,386. ಕ್ಷೇತ್ರ ಪರಿಚಯ:
ಕೊಪ್ಪಳ ಲೋಕಸಭಾ ಕ್ಷೇತ್ರ 1952ರಲ್ಲಿ, ಪ್ರಥಮ ಚುನಾವಣೆಯಲ್ಲಿಯೇ ಪಕ್ಷೇತರ ಅಭ್ಯರ್ಥಿ ಶಿವಮೂರ್ತಿಸ್ವಾಮಿ ಅಳವಂಡಿ ಅವರನ್ನು ಗೆಲ್ಲಿಸುವ ಮೂಲಕ ವಿಶೇಷತೆ ಮೆರೆದಿದೆ. ಅಷ್ಟೇ ಅಲ್ಲ, ಕುರುಬ ಸಮುದಾಯದ ಮತಗಳು ಹೆಚ್ಚಿವೆ ಎಂದು 1991ರಲ್ಲಿ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿರುವ ಕ್ಷೇತ್ರವಿದು. 2009ರ ವರೆಗೂ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆದಿದ್ದೇ ದಾರಿ. ಹೀಗಾಗಿ, ಇದು ಅಲ್ಲಿವರೆಗೂ ಕಾಂಗ್ರೆಸ್ ನ ಭದ್ರ ಕೋಟೆ. 2009ರಲ್ಲಿ ಮೊಟ್ಟ ಮೊದಲ ಬಾರಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿತು. ಅಲ್ಲಿಂದ ಇಲ್ಲಿವರೆಗೂ ಬಿಜೆಪಿ ನಡೆದಿದ್ದೆ ದಾರಿ ಎನ್ನುವಂತಾಗಿ, ಬಿಜೆಪಿ ಭದ್ರಕೋಟೆಯಾಗಿದೆ.