ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಪಟ್ಟಣದ ಪೊಲೀಸ್ ನಗರ ಠಾಣೆಗೆ ಹೊಸ ಬೊಲೆರೋ ಜೀಪನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಜೀಪನ್ನು ಶಾಸಕರಾದ ಸಿ.ಎನ್. ಬಾಲಕೃಷ್ಣ ಶನಿವಾರ ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ೧೦-೧೨ ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಆಶ್ರಯಿಸಿ ಪೊಲೀಸರು ಕಾರ್ಯನಿರ್ವಹಿಸುವ ಪರಿಸ್ಥಿತಿ ಇದೆ. ಗೃಹ ಸಚಿವರು ಆಯಾ ಸರ್ಕಲ್ ಇನ್ಸ್‌ಪೆಕ್ಟರ್ ವ್ಯಾಪ್ತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಹೊಸ ವಾಹನ ಪಡೆಯುವಂತೆ ಇಲಾಖೆಗೆ ಸೂಚಿಸಿರುವುದರ ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾರವರ ಮನವಿ ಮೇರೆಗೆ ಶ್ರೀನಿವಾಸಪುರದಲ್ಲಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ವ್ಯವಸ್ಥಾಪಕರು, ನಿರ್ದೇಶಕರ ಅನುಮತಿ ಪಡೆದು ನೂತನ ಜೀಪನ್ನು ಇಲಾಖೆಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.
ಚನ್ನರಾಯಪಟ್ಟಣ ನಗರ ಜನವಸತಿ ಪ್ರದೇಶ ವಿಸ್ತಾರವಾಗುತ್ತಿದೆ. ಹಾಲಿ ಇದ್ದ ಜೀಪು ಹಳೆಯದಾಗಿ ಹಾಗಾಗೇ ರಿಪೇರಿಗೊಳಪಡುತ್ತಿತ್ತು, ಇನ್ಮುಂದೆ ಆ ಗೋಜಲು ಇಲ್ಲದ ರೀತಿ ಉಚಿತವಾಗಿ ಹೊಸ ವಾಹನ ನೀಡಲಾಗಿದೆ. ಪುರಸಭೆ ಸಾಮಾನ್ಯಸಭೆಯಲ್ಲಿ ಅನುಮೋದನೆ ಪಡೆದಿದ್ದು, ಪುರಸಭೆಯಿಂದಲೂ ಶೀಘ್ರ ಇನ್ನೊಂದು ಜೀಪನ್ನು ಕೊಡಿಸಲಾಗುವುದು. ಆದನ್ನು ಡಿವೈಎಸ್‌ಪಿಯವರ ಓಡಾಟಕ್ಕೆ ನೀಡಿ, ಸದ್ಯ ಅವರು ಬಳಸುತ್ತಿರುವ ಜೀಪನ್ನು ಹಿರಿಸಾವೆ ವೃತ್ತ ನಿರೀಕ್ಷಕರಿಗೆ ನೀಡಲಾಗುವುದು, ಇದರೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದ್ದು, ಪೊಲೀಸ್ ಇಲಾಖೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಎಪಿಎಂಸಿ ರಾಜ್ಯ ನಿರ್ದೇಶಕರೊಂದಿಗೆ ಚರ್ಚಿಸಿ ಜೀಪು ಕೊಡಿಸುವುದಾಗಿ ಭರವಸೆ ನೀಡಿದರು.ಶಾಂತಿ, ಸುವ್ಯವಸ್ಥೆಗಾಗಿ ಪಟ್ಟಣದಲ್ಲಿ ೩೨ ಕಡೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಮತ್ತಷ್ಟು ಕ್ಯಾಮೆರಾಗಳ ಬೇಡಿಕೆಯನ್ನು ಇಲಾಖೆ ಸಲ್ಲಿಸಿದ್ದು, ಈ ಕುರಿತಾಗಿ ಪುರಸಭೆಯಲ್ಲಿ ಅನುಮೋದನೆ ಪಡೆದಿದ್ದು, ಶೀಘ್ರ ಸಿಸಿ ಕ್ಯಾಮೆರಾ ಅಳವಡಿಕೆಯೊಂದಿಗೆ ನಿರ್ವಹಣೆಯನ್ನು ಮಾಡಲಾಗುವುದು ಎಂದರು.
ಜೀಪು ಸ್ವೀಕಾರ ಮಾಡಿದ ಪೊಲೀಸ್ ಇಲಾಖೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ವೆಂಕಟೇಶ್ ನಾಯ್ಡು ಮಾತನಾಡಿ, ಪೊಲೀಸ್ ಇಲಾಖೆಗೆ ಸುಸಜ್ಜಿತ ವಾಹನ ಮತ್ತು ಸಿಸಿ ಕ್ಯಾಮೆರಾಗಳ ಅವಶ್ಯಕತೆ ಹೆಚ್ಚಿನದಾಗಿದ್ದು, ಇದನ್ನು ಮನಗಂಡು ಶಾಸಕರು ವಿವಿಧ ಸಂಪನ್ಮೂಲಗಳ ಕ್ರೋಢೀಕರಣದಿಂದ ಕೊಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಮುಂದೆಯೂ ಅವರ ಸಹಕಾರ ಇಲಾಖೆಗೆ ಇರಲಿ ಎಂದು ಅವರಿಗೆ ಇಲಾಖೆಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದರು. ಈ ಸಂದರ್ಭ ಡಿವೈಎಸ್‌ಪಿಗಳಾದ ಎನ್.ಕುಮಾರ್, ಟಿ.ಆರ್. ಪಾಲಾಕ್ಷ, ಇನ್ಸ್‌ಪೆಕ್ಟರ್ ರಘುಪತಿ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್.ವೆಂಕಟೇಶ್, ನಿರ್ದೇಶಕರಾದ ಮಂಜುನಾಥ್, ರವೀಶ್, ಯೋಗಾನಂದ್, ಭಾರತಿ ಶಿವಣ್ಣ, ವಳಂಬಗೆ ನಾರಾಯಣ್, ಹೊನ್ನಶೆಟ್ಟಿಹಳ್ಳಿ ರವಿಕುಮಾರ್ ಸೇರಿ ಇತರರು ಇದ್ದರು.