ಜನವರಿ ಅಂತ್ಯದೊಳಗೆ ನೂತನ ಬಡಾವಣೆಯ ಸೈಟ್ ವಿತರಣೆಯಾಗಲಿದೆ ಎಂದ ಸಚಿವ

KannadaprabhaNewsNetwork | Updated : Dec 27 2023, 01:33 AM IST

ಸಾರಾಂಶ

ಬಡಾವಣೆ ನಿರ್ಮಾಣ ವಿಚಾರದಲ್ಲಿ ರೈತರಿಂದ ಯಾವುದೇ ದೂರು ಇಲ್ಲ. ೫೦:೫೦ ಯೋಜನೆಯಡಿ ಲೇ ಔಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಸಚಿವರಿಗೆ ಸರ್ಕಾರದ ಕಾರ್ಯದರ್ಶಿ ಶಾಸಕರು ಸಮೇತ ಯಾರು ಕೂಡ ಒಂದೆ ಒಂದು ಸೈಟ್ ವಿತರಣೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಯಾರಿಗೆ ನಗರದಲ್ಲಿ ವಸತಿ ಇಲ್ಲವೊ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಬಹು ನಿರೀಕ್ಷೆಯ ಕೃಷ್ಣ ನಗರದ 2ನೇ ಹಂತದ ನೂತನ ಬಡಾವಣೆಯ ನಿವೇಶನಗಳ ಜನವರಿ ಅಂತ್ಯದೊಳಗೆ ವಿತರಣೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ನಗರ ಸಚಿವ ಭೈರತಿ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಬಿ.ಎಂ. ರಸ್ತೆ ಬಳಿ ಇರುವ ಹುಡಾ ಕಚೇರಿಯಲ್ಲಿ ಮಂಗಳವಾರ ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಮುನ್ನ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರಾಭಿವೃದ್ಧಿ ಇಲಾಖೆಯ ವತಿಯಿಂದ (ಹುಡಾ) ೧೦೦೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಲೇಔಟ್ ಕಾಮಗಾರಿ ನಡೆಯುತ್ತಿದೆ. ಹಾಸನ ನಗರಕ್ಕೆ ಕುಡಿಯುವ ನೀರು ಹಾಗೂ ಒಳಚರಂಡಿ ವಿಚಾರದಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದೆನೆ. ನೂತನ ಬಡಾವಣೆಗೆ ಸಂಬಂಧಿಸಿದ ೧೦ ಸಾವಿರ ಅರ್ಜಿ ಬಾಕಿ ಇದ್ದು, ಸ್ವಲ್ಪ ಜಮೀನು ಅವಶ್ಯಕತೆ ಇದೆ. ಜಮೀನು ಕೊಡಿಸುವಂತೆ ಸ್ಥಳೀಯ ಶಾಸಕರಲ್ಲಿ ಸಹ ಕೋರಲಾಗಿದೆ. ಜನವರಿ ಅಂತ್ಯದೊಳಗೆ ನೂತನ ಬಡಾವಣೆ ಸೈಟ್ ವಿತರಣೆ ಮಾಡಲಾಗುವುದು ಎಂದರು.

ಬಡಾವಣೆ ನಿರ್ಮಾಣ ವಿಚಾರದಲ್ಲಿ ರೈತರಿಂದ ಯಾವುದೇ ದೂರು ಇಲ್ಲ. ೫೦:೫೦ ಯೋಜನೆಯಡಿ ಲೇ ಔಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಸಚಿವರಿಗೆ ಸರ್ಕಾರದ ಕಾರ್ಯದರ್ಶಿ ಶಾಸಕರು ಸಮೇತ ಯಾರು ಕೂಡ ಒಂದೆ ಒಂದು ಸೈಟ್ ವಿತರಣೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಯಾರಿಗೆ ನಗರದಲ್ಲಿ ವಸತಿ ಇಲ್ಲವೊ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು.

ಬಸವರಾಜ್ ರಾಯರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಅವರ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಒಂದೊಂದು ಬಾರಿ ಹೇಳಿಕೆ ನೀಡುತ್ತಾರೆ. ವಿರೋಧ ಪಕ್ಷದವರು ಮಾಲೆ ಧಾರಣೆ ಮಾಡಿರುವುದರಿಂದ ಹಿಂದುತ್ವ ಬರುವುದಿಲ್ಲ. ನಾನು ಹಿಂದೂ, ಶಾಸಕ ಸ್ವರೂಪ್ ಸಹ ಹಿಂದೂ ಎಂದರು. ಹಿಜಾಬ್ ನೋಡೋಣ ಎಂದು ಸಿಎಂ ಹೇಳಿದ್ದಾರೆ. ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಹೇಳಿಕೆ ನೀಡಿಲ್ಲ ಮುಖ್ಯಮಂತ್ರಿಗಳು ಫೋನ್‌ನಲ್ಲಿ ಹೇಳಿರುವುದಾಗಿ ತಿಳಿಸಿದರು. ನಿಗಮ ಮಂಡಳಿ ಪಟ್ಟಿ ರೆಡಿ ಇದೆ. ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಹೈಕಮಾಂಡ್, ಮುಖ್ಯಮಂತ್ರಿಗಳು ನಿರ್ಣಯ ಮಾಡುತ್ತಾರೆ ಎಂದರು. ಇದಾದ ಮೇಲೆ ಹುಡಾ ಇಲಾಖೆ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

ಹುಡಾ ಕಚೇರಿಗೆ ಬಂದಾಗ ಮುಖ್ಯದ್ವಾರದಲ್ಲಿ ಕಾಂಗ್ರೆಸ್ ಮುಖಂಡರಾದ ಗೌಡಗೆರೆ ಪ್ರಕಾಶ್ ಅವರು ಹಾರ ಹಾಕಿ ಸ್ವಾಗತಿಸಿದರು.

ಇದೆ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ. ಎಚ್.ಪಿ. ಸ್ವರೂಪ್, ಕಾಂಗ್ರೆಸ್ ಮುಖಂಡರಾದ ಗೌಡಗೆರೆ ಪ್ರಕಾಶ್ ಸೇರಿದಂತೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.

Share this article