ನವೆಂಬರ್‌ನಲ್ಲಿ ರಸ್ತೆಗಳಿಗೆ ಹೊಸ ರೂಪ!

KannadaprabhaNewsNetwork | Published : Sep 21, 2024 1:51 AM

ಸಾರಾಂಶ

ನಗರದ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಲ್ಲಿ ವಿಫಲವಾಗಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ, ನವೆಂಬರ್‌ನಲ್ಲಿ ನಗರದ ರಸ್ತೆಗಳಿಗೆ ಹೊಸ ಕಳೆ ತರುವುದಾಗಿ ಹೊಸ ವರಸೆ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚುವಲ್ಲಿ ವಿಫಲವಾಗಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ, ನವೆಂಬರ್‌ನಲ್ಲಿ ನಗರದ ರಸ್ತೆಗಳಿಗೆ ಹೊಸ ಕಳೆ ತರುವುದಾಗಿ ಹೊಸ ವರಸೆ ಆರಂಭಿಸಿದ್ದಾರೆ.

ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿರುವ ಸಾಕಷ್ಟು ಮಂದಿ ದೂರು ನೀಡಿದ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಭೆ ನಡೆಸಿ ಸೆ.15ರ ಒಳಗಾಗಿ ರಸ್ತೆ ಗುಂಡಿ ಮುಚ್ಚುವಂತೆ ನಿರ್ದೇಶಿಸಿದ್ದರು. ಆ ಬಳಿಕ ನಗರ ಪ್ರದಕ್ಷಿಣೆ ನಡೆಸಿ ಮುಖ್ಯಮಂತ್ರಿಗಳು ಸೆ.20ರ ವರೆಗೆ ರಸ್ತೆ ಗುಂಡಿ ಮುಚ್ಚುವ ಅವಧಿ ವಿಸ್ತರಣೆ ಮಾಡಿದ್ದರು.

ಮುಖ್ಯಮಂತ್ರಿ ನೀಡಲಾದ ಗಡುವು ಮುಕ್ತಾಯಗೊಂಡಿದೆ. ಆದರೂ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಇರುವುದು ಶುಕ್ರವಾರವೂ ಕಂಡು ಬಂದಿದೆ. ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರು, ಹೊಸ ವರಸೆ ಆರಂಭಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಉಪ ಮುಖ್ಯಮಂತ್ರಿ ಗಡುವು ನೀಡಿದಾಗ 2700 ರಸ್ತೆ ಗುಂಡಿ ಇದ್ದವು. ಆ ಗುಂಡಿ ಸೇರಿದಂತೆ ಈವರೆಗೆ 7 ರಿಂದ 8 ಸಾವಿರ ರಸ್ತೆ ಗುಂಡಿ ಮುಚ್ಚಿದ್ದೇವೆ. ಈ ರಸ್ತೆ ಗುಂಡಿ ಜತೆಗೆ, ಬ್ಯಾಡ್‌ ಪ್ಯಾಚಸ್‌ ಮತ್ತು ಬ್ಯಾಡ್‌ ರೀಚಸ್‌ಗಳು (ಹದಗೆಟ್ಟ ರಸ್ತೆ ಮೇಲ್ಮೈ) ಸಂಖ್ಯೆಯೂ ಹೆಚ್ಚಾಗಿವೆ. ಈ ರೀತಿಯ ಸುಮಾರು 8 ಸಾವಿರ ದುರಸ್ತಿ ಕಾಮಗಾರಿ ಮಾಡಲಾಗಿದೆ ಎಂದರು.

₹660 ಕೋಟಿ ವೆಚ್ಚದಲ್ಲಿ

ಮುಖ್ಯ ರಸ್ತೆಗೆ ಡಾಂಬರ್‌ಹಲವು ವರ್ಷದಿಂದ ನಗರದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಂಡಿಲ್ಲ. ವಾರ್ಡ್‌ ರಸ್ತೆಗಳಿಗೆ ಹೆಚ್ಚಿನ ಪ್ರಮಾಣ ಹಣ ವೆಚ್ಚ ಮಾಡಲಾಗಿದೆ. ಈ ಬಾರಿ ನಗರದ 459 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಮೇಲ್ಪದರ ತೆಗೆದು ಹೊಸದಾಗಿ ಡಾಂಬರಿಕರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು ₹660 ಕೋಟಿ ವೆಚ್ಚ ಮಾಡಲಾಗುತ್ತಿದೆ. ನವೆಂಬರ್‌ನಿಂದ ಕಾಮಗಾರಿ ಆರಂಭಿಸಲಾಗುವುದು. ಆಗ ರಸ್ತೆಗಳ ಗುಣಮಟ್ಟ ಸುಧಾರಿಸಲಿದ್ದು, ಹೊಸ ಕಳೆ ಬರಲಿದೆ ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ಅಧಿಕಾರಿಗಳ ವಿರುದ್ಧ ದಿಟ್ಟ ಕ್ರಮವಿಲ್ಲ?

ನಗರದ ಅನೇಕ ರಸ್ತೆಗಳಲ್ಲಿ ಇಂದಿಗೂ ಗುಂಡಿಗಳು ಇದ್ದರೂ ಈವರೆಗೆ ಯಾವುದೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನು ವಲಯ ಆಯುಕ್ತರಿಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆಗೆ ಸೂಚಿಸಲಾಗಿತ್ತು. ಫೋಟೋಕ್ಕಾಗಿ ಒಂದೆರಡು ದಿನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಟ್ಟರೆ ಯಾವುದೇ ಕೆಲಸ ಮಾಡಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.

Share this article