ಹಾವೇರಿ: ವಿಜಯನಗರ ಜಿಲ್ಲೆ ಹರಪನಹಳ್ಳಿ ಸಮೀಪದ ಕೊಮಾರನಹಳ್ಳಿಯಲ್ಲಿ ನೂತನವಾಗಿ ಆರಂಭಿಸಲಾದ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನ. 3ರಂದು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಯಾಗಲಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ ಪಾದೇಕಲ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಿಂದಾಗಿ ರೋಗಗಳು ಇಂದು ದೇಶದ ಸಾಮಾಜಿಕ ಹಾಗೂ ಆರ್ಥಿಕ ಮುನ್ನಡೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯುವಜನತೆಯಿಂದ ವೃದ್ಧವರೆಗೂ ಅನೇಕ ಕಾಯಿಲೆಗಳು ಬರತೊಡಗಿವೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದೆ. ಆಧುನಿಕ ವೈದ್ಯವಿಜ್ಞಾನ ರೋಗಚಿಕಿತ್ಸೆಗಿಂತ ರೋಗಗಳು ಬಾರದಂತೆ ತಡೆಯುವ ಮುಂಜಾಗ್ರತಾ ಕ್ರಮಗಳಿಗೆ ಒತ್ತು ನೀಡಿದ್ದು, ಆಯುರ್ವೇದ ಚಿಕಿತ್ಸೆ ಮೂಲಕ ಸಮಗ್ರ ಸುಕ್ಷೇಮಕ್ಕೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವರದಾನವಾಗಿದೆ ಎಂದರು.ಕೊಮಾರನಹಳ್ಳಿಯಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ನುರಿತ ಹಾಗೂ ಅನುಭವಿ ತಜ್ಞರು, ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಕೃತಿಯ ಜ್ಞಾನ ಮತ್ತು ಆಧುನಿಕ ಆರೈಕೆಯ ಸಮನ್ವಯದೊಂದಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಅನುಭವಿಸುವ ಅವಕಾಶ ಕಲ್ಪಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗದವರಿಗೂ ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.ಆಸ್ಪತ್ರೆಯಲ್ಲಿ ಹಿಪ್ ಬಾತ್, ಎನಿಮಾ, ಕೊಲೊನ್ ಹೈಡ್ರೊಥೆರಪಿ, ಅಂಡರ್‌ವಾಟರ್ ಮಸಾಜ್, ಸೋನಾ ಮತ್ತು ಸ್ಟೀಮ್‌ಬಾತ್, ಡುಶ್ ಪ್ಯಾಕ್, ಮ್ಯಾಗ್ನೆಟೊ ಥೆರಪಿ, ಫಿಜಿಯೋಥೆರಪಿ, ಅಕ್ಯುಪಂಕ್ಚರ್ ಆ್ಯಂಡ್ ಅಕ್ಯುಪ್ರೆಶರ್, ವ್ಯಾಯಾಮ ಚಿಕಿತ್ಸೆ, ಆಹಾರ ಚಿಕಿತ್ಸೆ, ಮಣ್ಣು ಚಿಕಿತ್ಸೆಯಂಥ ಸೌಲಭ್ಯಗಳು ಲಭ್ಯವಿದ್ದು, ವಿಶಾಲವಾದ, ಗಾಳಿ ಬೆಳಕು ಸಮೃದ್ಧವಾದ ಯೋಗ ಸಭಾಂಗಣ, ಸ್ವಚ್ಛ ಮತ್ತು ಸುರಕ್ಷಿತ ಕ್ರಿಯಾ ಕೊಠಡಿಗಳು ಇರುತ್ತವೆ. ಸಮಗ್ರ ಹಾಗೂ ಔಷಧರಹಿತ ಚಿಕಿತ್ಸೆ, ಅನುಭವ ಸಂಪನ್ನ ವೈದ್ಯರು ಮತ್ತು ಚಿಕಿತ್ಸಕರ ಸೇವೆ ಒದಗಿಸಲಾಗುತ್ತಿದೆ. ಸಾರಿಗೆ ಸೌಲಭ್ಯದ ವ್ಯವಸ್ಥೆಯೂ ಇರಲಿದೆ. ಈ ಹಿನ್ನೆಲೆ ಜಿಲ್ಲೆಯ ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಮೊ.9353063097, 8317363097 ಸಂಪರ್ಕಿಸಬಹುದು ಎಂದರು. ಈ ವೇಳೆ ಆಸ್ಪತ್ರೆಯ ಮುಖ್ಯಸ್ಥ ಉದಯಶಂಕರ ಭಟ್ ಇದ್ದರು.