ಹೊಸ ಸಾಫ್ಟ್‌ವೇರ್‌: ಅಂಚೆ ಸೇವೆಗಳಲ್ಲಿ ವ್ಯತ್ಯಯ

KannadaprabhaNewsNetwork |  
Published : Aug 12, 2025, 12:30 AM IST
ಅಂಚೆ ಇಲಾಖೆ. | Kannada Prabha

ಸಾರಾಂಶ

ಕಳೆದ ಜೂನ್‌ ಕೊನೆ ವಾರದಲ್ಲಿ ಅಂಚೆ ಕಚೇರಿಗಳಲ್ಲಿ ಹೊಸ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಆದರೆ, ಅದು 15-20 ದಿನಗಳಾದರೂ ಈ ವರೆಗೂ ಸರಿ ಹೊಂದುತ್ತಿಲ್ಲ. ಹೀಗಾಗಿ ಸದಾಕಾಲ ನಿಧಾನಗತಿಯಲ್ಲಿ ಸಾಗುತ್ತಿದೆ. ಮೊದಲು ಅಂಚೆ ಕಚೇರಿಗಳಲ್ಲಿ ಎಲ್ಲವೂ ಮ್ಯಾನುವಲ್‌ ಆಗಿಯೇ ನಡೆಯುತ್ತಿತ್ತು.

ಹುಬ್ಬಳ್ಳಿ/ಧಾರವಾಡ: ಹೊಸ ಸಾಫ್ಟ್‌ವೇರ್‌ ಅಳವಡಿಸಿದ ಪರಿಣಾಮ ಅಂಚೆ ಸೇವೆಗಳಲ್ಲಿ ವ್ಯತ್ಯಯ ಕಂಡು ಬರುತ್ತಿದೆ. ಕಳೆದ ಕೆಲ ದಿನಗಳಿಂದ ಸರ್ವರ್‌ ಸಮಸ್ಯೆಯಾಗುತ್ತಿದ್ದರೆ, ಎರಡ್ಮೂರು ದಿನಗಳ ಕಾಲ ಸ್ಪೀಡ್‌ ಪೋಸ್ಟ್‌ ಸಂಪೂರ್ಣ ಸ್ಥಗಿತವಾಗಿತ್ತು. ಇದರಿಂದಾಗಿ ಗ್ರಾಹಕರು ಅಂಚೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ಕಳೆದ ಜೂನ್‌ ಕೊನೆ ವಾರದಲ್ಲಿ ಅಂಚೆ ಕಚೇರಿಗಳಲ್ಲಿ ಹೊಸ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಆದರೆ, ಅದು 15-20 ದಿನಗಳಾದರೂ ಈ ವರೆಗೂ ಸರಿ ಹೊಂದುತ್ತಿಲ್ಲ. ಹೀಗಾಗಿ ಸದಾಕಾಲ ನಿಧಾನಗತಿಯಲ್ಲಿ ಸಾಗುತ್ತಿದೆ.

ಮೊದಲು ಅಂಚೆ ಕಚೇರಿಗಳಲ್ಲಿ ಎಲ್ಲವೂ ಮ್ಯಾನುವಲ್‌ ಆಗಿಯೇ ನಡೆಯುತ್ತಿತ್ತು. ಬಳಿಕ ಖಾಸಗಿ ಸಾಫ್ಟ್‌ವೇರ್‌ ಕಂಪನಿಯೊಂದು ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್‌ ಅಳವಡಿಸಲಾಗಿತ್ತು. ಅದನ್ನು ಕೆಲವರ್ಷಗಳ ಉಪಯೋಗಿಸಲಾಗುತ್ತಿತ್ತು. ಬಳಿಕ ಇದಕ್ಕಿಂತ ಹೆಚ್ಚಿನ ಸೌಲಭ್ಯಗಳಿವೆ ಎಂದುಕೊಂಡು ಅಂಚೆ ಕಚೇರಿಯಲ್ಲಿ ಐಟಿ 2.0 ಸಾಪ್ಟ್‌ವೇರ್‌ನ್ನು ಜೂನ್‌ ಅಂತ್ಯಕ್ಕೆ ಅಳವಡಿಸಲಾಗಿದೆ. ಆದರೆ, ಇದು ಸರಿಯಾಗಿ ಇನ್ನು ಹೊಂದುತ್ತಿಲ್ಲ.

ರಿಜಿಸ್ಟರ್‌ ಪೋಸ್ಟ್‌, ಸ್ಪೀಡ್ ಪೋಸ್ಟ್‌, ಐಪಿಒ, ಪೋಸ್ಟಲ್‌ ಲೈಫ್‌ ಇನ್ಸುರೆನ್ಸ್‌ (ಪಿಎಲ್‌ಐ) ಸೇರಿದಂತೆ ಬಹುತೇಕ ಎಲ್ಲ ಸೇವೆಗಳಿಗೂ ಇದೇ ಸಾಪ್ಟ್‌ವೇರ್‌ ಬಳಸಲಾಗುತ್ತದೆ. ಆದರೆ, ಇದು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಜನರಿಗೆ ಸಕಾಲಕ್ಕೆ ಸರಿಯಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಜನರು ಯಾವುದಾದರೂ ಕೆಲಸಕ್ಕೆ ಬಂದರೆ ಒಂದೆರಡು ಗಂಟೆ ಕಾಯುವುದು ಅನಿವಾರ್ಯವೆಂಬಂತಾಗಿದೆ. ಹೀಗಾಗಿ ಕಚೇರಿಗೆ ಅಲೆಯುವುದು ತಪ್ಪುತ್ತಿಲ್ಲ. ಹೀಗಾಗಿ ಏನಪ್ಪ ಇದು ಎಂದುಕೊಂಡು ಅಂಚೆ ಕಚೇರಿಗೆ ಬಂದವರು ಮರಳಿ ಹೋಗುವಂತಾಗಿದೆ. ಇದು ಗ್ರಾಹಕರಿಗೂ ಕಿರಿಕಿರಿಯನ್ನುಂಟು ಮಾಡುತ್ತಿದ್ದರೆ, ಅಂಚೆ ಕಚೇರಿ ಸಿಬ್ಬಂದಿ ಕೂಡ ಏನ್‌ ಮಾಡೋದು ಸಾರ್‌? ಸರಿಯಾಗಿ ಸೇವೆ ಕಲ್ಪಿಸಲು ಸಾಧ್ಯವೇ ಆಗುತ್ತಿಲ್ಲ ಎಂದು ಬೇಸರಿಸಿಕೊಳ್ಳುತ್ತಿದ್ದಾರೆ.

ಕೋರಿಯರ್‌ ಮೊರೆ: ಸ್ಪೀಡ್‌ ಪೋಸ್ಟ್‌, ರಿಜಿಸ್ಟರ್‌ ಪೋಸ್ಟ್‌ಗಳ ಸೇವೆ ಸಕಾಲಕ್ಕೆ ಲಭ್ಯವಾಗದ ಕಾರಣ ಅಂಚೆ ಕಚೇರಿಗಳಿಗೆ ಆಗಮಿಸುವ ಗ್ರಾಹಕರು ಕೋರಿಯರ್‌ ಮೊರೆ ಹೋಗಬೇಕಾದ ಸ್ಥಿತಿ ಅನಿವಾರ್ಯವಾಗುತ್ತಿದೆ ಎಂದು ಗ್ರಾಹಕರು ಆರೋಪಿಸುತ್ತಿದ್ದಾರೆ. ರಕ್ಷಾ ಬಂಧನಕ್ಕೂ ಅಂಚೆ ಸೇವೆ ಸ್ಥಗಿತಗೊಂಡಿರುವುದು ಕಿರಿಕಿರಿಯನ್ನುಂಟು ಮಾಡಿದೆ. ರಕ್ಷಾ ಬಂಧನಕ್ಕಾಗಿ ತಮ್ಮ ಸಹೋದರನಿಗೆ ರಾಖಿ ಕಳುಹಿಸಲು ಬಂದಿದ್ದ ಯುವತಿ ಸ್ಪೀಡ್‌ ಪೋಸ್ಟ್‌ ಇಲ್ಲದ ಕಾರಣ ಕೋರಿಯರ್‌ ಮೂಲಕ ಕಳುಹಿಸಿದ್ದಾಳೆ. ಈ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ರೇಖಾ ಎಂಬ ಯುವತಿ, ತಾಂತ್ರಿಕ ಸಮಸ್ಯೆಯಿಂದ ಅಂಚೆ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಇಲ್ಲಿಗೆ ಬಂದು ವಿಚಾರಿಸಿ ಕೊನೆಗೆ ಕೋರಿಯರ್‌ ಮೂಲಕ ರಾಖಿ ಕಳುಹಿಸಿದೆ ಎಂದು ತಿಳಿಸುತ್ತಾರೆ.

ಎರಡ್ಮೂರು ದಿನಗಳಲ್ಲಿ ಸರಿ: ಹೊಸ ಸಾಫ್ಟ್‌ವೇರ್‌ ಆಗಿರುವುದರಿಂದ ಈ ರೀತಿ ಸಮಸ್ಯೆಯಾಗಿದೆ. ನಮಗೂ ಈ ಬಗ್ಗೆ ಬೇಸರವಿದೆ. ಆದರೆ, ಈ ವಿಷಯ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಸರಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಬಹುಶಃ ಎರಡ್ಮೂರು ದಿನಗಳಲ್ಲಿ ಸಾಫ್ಟ್‌ವೇರ್‌ನಿಂದ ಆಗಿರುವ ಸಮ್ಯೆ ಬಗೆಹರಿಯಲಿದೆ ಎಂದು ಅಧಿಕಾರಿ ವರ್ಗ ತಿಳಿಸುತ್ತಾರೆ.

ಒಟ್ಟಿನಲ್ಲಿ ಸಾಫ್ಟ್‌ವೇರ್‌ ಅಳವಡಿಕೆಯಿಂದ ಅಂಚೆ ಸೇವೆಗಳಲ್ಲಿ ಸಮಸ್ಯೆಯಾಗುತ್ತಿರುವುದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವುದಂತೂ ಸತ್ಯ.

ಸ್ಪೀಡ್‌ ಪೋಸ್ಟ್‌ ಕಳುಹಿಸಬೇಕಿತ್ತು. ಆದರೆ, ಅಂಚೆ ಕಚೇರಿಯಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಕಳುಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರಿಯರ್‌ ಮೂಲಕ ಕಳುಹಿಸಿದೆ ಎಂದು ಯುವತಿ ರೇಖಾ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!