- ಕಾಡು ಪ್ರಾಣಿಗಳ ಮಾಂಸ ಪ್ರಿಯರಿಗೋಸ್ಕರ ಕಳ್ಳ ಬೇಟೆ । ಸಂಶಯಕ್ಕೆ ಎಡೆ ಮಾಡುತ್ತಿರುವ ಪ್ರಕರಣಗಳು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಹೊಸ ವರ್ಷಾಚರಣೆ ಕಾಡು ಪ್ರಾಣಿಗಳಿಗೆ ಕಂಟಕವಾಗುತ್ತಿದೆಯಾ ?ಈ ರೀತಿ ಪ್ರಶ್ನೆಯೊಂದು ಕಾಫಿ ನಾಡಿನಲ್ಲಿ ಹುಟ್ಟಿಕೊಂಡಿದೆ. ಕಾಡು ಪ್ರಾಣಿಗಳಿಗೂ ಹೊಸ ವರ್ಷಾಚರಣೆಗೂ ಏನು ಸಂಬಂಧ ವೆಂದು ಬಹಳಷ್ಟು ಮಂದಿ ಅಂದು ಕೊಳ್ಳಬಹುದು. ಹಿಂದಿನ ವರ್ಷಗಳಲ್ಲಿ ಹಾಗೂ ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಕಡೂರು ತಾಲೂಕಿನ "ಬಾಸೂರು ಕೃಷ್ಣ ಮೃಗ ಸಂರಕ್ಷಿತ " ಪ್ರದೇಶಕ್ಕೆ ಹೊಂದಿಕೊಂಡಿರುವ ರಾಗಿ ಹೊಲದಲ್ಲಿ ಗುಂಡು ಹಾರಿಸಿ ಮೂರು (ಎರಡು ಹೆಣ್ಣು, ಒಂದು ಗಂಡು) ಕೃಷ್ಣಮೃಗಗಳನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರೆ ಕಾಡು ಪ್ರಾಣಿಗಳಿಗೆ ಕಂಟಕ ಎಂಬ ಪ್ರಶ್ನೆ ಸಹಜವಾಗಿ ಕಂಡು ಬರುತ್ತಿದೆ.
ಇದೀಗ ಕ್ರಿಸ್‌ಮಸ್ ರಜೆ ಆರಂಭಗೊಂಡಿದೆ. ವರ್ಷದ ಕೊನೆ ಹಾಗೂ ಹೊಸ ವರ್ಷಾಚರಣೆಗೆ ಕಾಫಿ ನಾಡಿಗೆ ರಾಜ್ಯದ ವಿವಿಧೆಡೆ ಯಿಂದ ಪ್ರವಾಸಿಗರು ಆಗಮಿಸಲಿದ್ದಾರೆ. ಇವರಲ್ಲಿ ಹಲವು ಮಂದಿ ಮೋಜು ಮಸ್ತಿ ಮಾಡಲು ಬರುವವರೇ ಹೆಚ್ಚು. ಹೀಗೆ ಬಂದಿರುವವರಿಗೆ ಹಂದಿ, ಜಿಂಕೆ, ಕಡವೆ, ಸಾರಂಗ ಸೇರಿದಂತೆ ಇತರೆ ಮಾಂಸಗಳ ಊಟದ ಆಸೆ ತೋರಿಸಿ ವಾಸ್ತವ್ಯಕ್ಕೆ ಆಹ್ವಾನಿಸುವವರು ಜಿಲ್ಲೆಯಲ್ಲಿ ಇದ್ದಾರೆ. ಅವರಿಗೆ ಕಾಡು ಪ್ರಾಣಿಗಳ ಮಾಂಸ ಸರಬರಾಜು ಮಾಡಲು ಕಾಡು ಪ್ರಾಣಿಗಳ ಭೇಟೆಯಾಡುವವರು ವರ್ಷದ ಕೊನೆ ಹಾಗೂ ಆರಂಭ ದಿನಗಳಲ್ಲಿ ಸಕ್ರಿಯರಾಗುತ್ತಾರೆ. ನಾಡ ಬಂದೂಕು: ಜಿಲ್ಲೆಯಲ್ಲಿ ಸುಮಾರು 10 ರಿಂದ 11 ಸಾವಿರ ಲೈಸನ್ಸ್ ಬಂದೂಕುಗಳು ಇವೆ. ಇವುಗಳ ಜತೆಗೆ ಅಕ್ರಮ ಬಂದೂಕುಗಳು ಸಹ ಮಲೆನಾಡಿನ ಜನರ ಕೈಯಲ್ಲಿ ಓಡಾಡುತ್ತಿವೆ. ಇವುಗಳನ್ನು ಕಾಡಿನಲ್ಲಿ ಮಾಂಸಕ್ಕಾಗಿ ಕಾಡು ಪ್ರಾಣಿಗಳ ಭೇಟೆಗೆ ಬಳಸುತ್ತಿರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ.
ಬಾಸೂರು ಕೃಷ್ಣ ಮೃಗ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಹಿರೇನಲ್ಲೂರು ಗಸ್ತಿನ ಕಲ್ಲೇನಹಳ್ಳಿ ಗ್ರಾಮದ ಸರ್ವೆ ನಂ.11ರಲ್ಲಿ ಕಳೆದ 15 ದಿನಗಳ ಹಿಂದೆ ಕಟಾವು ಮಾಡಿದ ರಾಗಿ ಹೊಲದಲ್ಲಿ ಒಂದೂವರೆಯಿಂದ ಎರಡು ವರ್ಷ ಪ್ರಾಯದ ಮೂರು ಕೃಷ್ಣ ಮೃಗಗಳನ್ನು ಬೇಟೆಗಾರರು ಗುಂಡು ಹಾರಿಸಿ ಸೋಮವಾರ ಹತ್ಯೆ ಮಾಡಿದ್ದಾರೆ. ಸುಮಾರು ಒಂದು ಎಕರೆ ಸುತ್ತಳತೆಯಲ್ಲಿ ಎರಡು ಹೆಣ್ಣು, ಒಂದು ಗಂಡು ಕೃಷ್ಣಮೃಗಗಳನ್ನು ಹತ್ಯೆ ಮಾಡಲಾಗಿದೆ.