ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದ ನವ ದಂಪತಿ

KannadaprabhaNewsNetwork | Published : Dec 19, 2024 12:33 AM

ಸಾರಾಂಶ

ಚಿಕ್ಕಮಗಳೂರು, ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆ ಕೋರಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿಯೇ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

ಡಾ. ವಿಕ್ರಂ ಅಮಟೆಗೆ ಮನವಿ ಸಲ್ಲಿಸಿದರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರೀತಿಸಿ ಮದುವೆಯಾದ ಜೋಡಿಯೊಂದು ರಕ್ಷಣೆ ಕೋರಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿಯೇ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದ ಅಜಯ್ ಹಾಗೂ ಭದ್ರಾವತಿ ಮೂಲದ ಶಾಲಿನಿ ಪ್ರೀತಿಸಿ ಸೋಮವಾರ ಮದುವೆಯಾಗಿರುವ ಜೋಡಿ. ಯುವತಿ ಮನೆಯಲ್ಲಿ ಮದುವೆಗೆ ಒಪ್ಪದೆ ನವ ಜೋಡಿಗೆ ಜೀವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಎಸ್‌ಪಿ ಕಚೇರಿಗೆ ಆಗಮಿಸಿರುವುದಾಗಿ ನವ ದಂಪತಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ರಕ್ಷಣೆ ಕೋರಿ ಯುವಕ ಯುವತಿ ಆಗಮಿಸಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಕರಅಗಿದ್ದು ಮದುವೆಯಾಗಿರುವುದಾಗಿ ತಿಳಿಸಿದ್ದಾರೆ. ಯುವತಿ ಮನೆಯವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನಮ್ಮ ಕಚೇರಿಗೆ ಆಗಮಿಸಿದ್ದಾರೆ. ಸ್ಥಳೀಯ ಪಿಎಸ್ಐಗೆ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದೇನೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಯುವಕ ಅಜಯ್ ಮಾತನಾಡಿ, ತಾವು ಪ್ರೀತಿಸಿ ಮದುವೆಯಾಗಿದ್ದೇವೆ. ಇದಕ್ಕೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಲಕ್ಕವಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಯುವತಿಯ ಮನೆಯವರನ್ನು ಪೊಲೀಸ್ ಠಾಣೆಗೆ ಕರೆಸಿದಾಗ ಅವರು ನೂರು ಜನ ಬಂದಿದ್ದರು. ಹೀಗಾಗಿ ಭಯಗೊಂಡ ನಾವು ರಕ್ಷಣೆ ಕೋರಿ ಎಸ್ಪಿ ಕಚೇರಿಗೆ ಆಗಮಿಸಿದ್ದೇವೆ ಎಂದರು.

ಯುವತಿ ಶಾಲಿನಿ ಮಾತನಾಡಿ, ಮನೆಯವರನ್ನು ಒಪ್ಪಿಸಿಯೇ ಮದುವೆಯಾಗಲು ನಿರ್ಧರಿಸಿದ್ದೆವು. ಆದರೆ, ಮನೆಯವರು ಹಲ್ಲೆ ಮಾಡಲು ಶುರು ಮಾಡಿದ್ದರು. ಅನ್ಯ ಜಾತಿಯವರನ್ನು ಮದುವೆಯಾಗಲು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ನಾನೇ ಇಷ್ಟಪಟ್ಟು ಮದುವೆಯಾಗಿದ್ದೇನೆ. ಮದುವೆ ಯಾದ ಬಳಿಕವೂ ನಮ್ಮ ಮನೆಯವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಮರ್ಲೆ ಅಣ್ಣಯ್ಯ ಉಪಸ್ಥಿತರಿದ್ದರು.

18 ಕೆಸಿಕೆಎಂ 6ಚಿಕ್ಕಮಗಳೂರಿನ ಎಸ್ಪಿ ಕಚೇರಿ ಆವರಣದಲ್ಲಿ ಪರಸ್ಪರ ಹಾರ ಬದಲಿಸಿಕೊಂಡ ಅಜಯ್ ಹಾಗೂ ಶಾಲಿನಿ.

Share this article