ಛಾಯಾಚಿತ್ರವಿಲ್ಲದೆ ಸುದ್ದಿ ಅಪೂರ್ಣ : ಅನಿಲ್ ಎಚ್.ಟಿ

KannadaprabhaNewsNetwork |  
Published : Aug 20, 2024, 12:52 AM IST
ಚಿತ್ರ :  19ಎಂಡಿಕೆ3 : ಚಿತ್ರ : 2 : ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಪತ್ರಕರ್ತ ಹಾಗೂ ಹವ್ಯಾಸಿ ಛಾಯಾಗ್ರಾಹಕರಾದ ವಿಘ್ನೇಶ್ ಭೂತನಕಾಡು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಪತ್ರಿಕೆಗಳಲ್ಲಿ ಛಾಯಾಚಿತ್ರವಿಲ್ಲದೆ ಸುದ್ದಿ ಅಪೂರ್ಣ. ಛಾಯಾಚಿತ್ರ ಮುದ್ರಣ ಮಾಧ್ಯಮದ ಅವಿಭಾಜ್ಯ ಅಂಗ ಎಂದು ಹಿರಿಯ ಪತ್ರಕರ್ತ ಅನಿಲ್‌ ಎಚ್.ಟಿ. ಹೇಳಿದರು.

ಕನ್ನಡಪ್ರಭ ವಾರ್ತೆ ಗುಡ್ಡೆಹೊಸೂರು

ಪತ್ರಿಕೆಗಳಲ್ಲಿ ಛಾಯಾಚಿತ್ರವಿಲ್ಲದೆ ಸುದ್ದಿ ಅಪೂರ್ಣ. ಛಾಯಾಚಿತ್ರ ಮುದ್ರಣ ಮಾಧ್ಯಮದ ಅವಿಭಾಜ್ಯ ಅಂಗ. ಯಾವುದೇ ವರದಿ ಇದ್ದರೂ ಛಾಯಾಚಿತ್ರ ಇದ್ದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಹೇಳಿದ್ದಾರೆ.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸಮುದಾಯ ಭವನದಲ್ಲಿ ಸೋಮವಾರ ನಡೆದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳಲ್ಲಿ ಸುದ್ದಿಗಳು ಮಾತ್ರವೇ ಇದ್ದರೆ ಅದು ನೀರಸವಾಗುತ್ತದೆ. ಛಾಯಾಚಿತ್ರ ಇದ್ದರೆ ಮಾತ್ರ ಆ ಸುದ್ದಿಗೆ ಹೆಚ್ಚಿನ ಮಹತ್ವ ಇರುತ್ತದೆ. ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮಾನ ಎಂಬುದು ಸತ್ಯ. ಒಂದು ಚಿತ್ರ ಹಲವು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಂದು ಸುದ್ದಿ ಛಾಯಾಗ್ರಾಹಕರು ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಛಾಯಾಗ್ರಾಹಕರ ಕಷ್ಟ ಸಾಕಷ್ಟಿದೆ ಎಂದರು.

20ನೇ ಶತಮಾನದಲ್ಲಿ ಪ್ರಿಂಟ್ ಫೋಟೋಗ್ರಾಪಿ ಇತ್ತು. ನಂತರ ಡಿಜಿಟಲ್ ಫೋಟೋಗ್ರಫಿ ಆರಂಭವಾಗಿ ಇಂದು ಛಾಯಾಚಿತ್ರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಇಂದು ಮೊಬೈಲ್ ಕ್ಯಾಮೆರಾ ಇರುವುರೆಲ್ಲರೂ ಛಾಯಾಗ್ರಾಹಕರಾಗಲು ಹೊರಟಿರುವುದರಿಂದ ನೈಜ ವೃತ್ತಿಪರ ಛಾಯಾಗ್ರಾಹಕರಿಗೆ ಹೊಡೆತಬಿದ್ದಿದೆ. ಛಾಯಾಗ್ರಾಹಕರಿಗೆ ಸವಾಲು ಹುಟ್ಟುಹಾಕಿದಂತಾಗಿದೆ. ಮುಂದಿನ ದಿನಗಳಲ್ಲಿ ವೃತ್ತಿ ಉಳಿಯುತ್ತದೆಯೋ ಎಂಬ ಆತಂಕ ಉಂಟಾಗಿದೆ ಎಂದು ಹೇಳಿದರು.

ಮಡಿಕೇರಿಯ ಛಾಯಾಗ್ರಾಹಕ ಹರ್ಷಿತ್ ಮಾತನಾಡಿ ಇಂದು ಆಧುನಿಕ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ನಾವು ಕೂಡ ಆ ವೇಗಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕು. ಇದರಿಂದ ಮಾತ್ರ ನಾವು ಯಶಸ್ಸು ಗಳಿಸಲು ಸಾಧ್ಯ. ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಹೊಸ ತಂತ್ರಜ್ಞಾನ ಬರುತ್ತಿದೆ. ಅದನ್ನು ನಾವು ಅಳವಡಿಕೆ ಮಾಡಬೇಕು. ವೃತ್ತಿಪರ ಕ್ಯಾಮೆರಾ ಬೆಲೆ ಸಾಕಷ್ಟಿದೆ. ಈ ಕ್ಷೇತ್ರದಲ್ಲಿ ನಾವು ಕಲಿತಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡಲು ಸಾಧ್ಯ ಎಂದು ತಿಳಿಸಿದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಮಾತನಾಡಿ, ಎಲ್ಲರಿಗೂ ಅತ್ಯುತ್ತಮವಾಗಿ ಛಾಯಾಗ್ರಹಣ ಮಾಡಲು ಸಾಧ್ಯವಿಲ್ಲ. ಇದೊಂದು ಕಲೆ ಇದ್ದಂತೆ. ಚಿತ್ರಗಳನ್ನು ತಮ್ಮದೇ ಆದ ಶೈಲಿಯಲ್ಲಿ ಕ್ಲಿಕ್ಕಿಸುವ ಮೂಲಕ ಛಾಯಾಚಿತ್ರಗಾರರು ಚಿತ್ರಗಳಿಗೆ ಜೀವಂತಿಕೆ ತುಂಬುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ಸಿ. ದಿನೇಶ್ ಮಾತನಾಡಿ, ಫೋಟೋ ತೆಗೆದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂಬ ಕಾಲ ಇತ್ತು. ಆದರೆ ಇಂದು ಫೋಟೋ ತೆಗೆದರೆ ಇದು ನಾವೇನಾ ಎಂಬಷ್ಟರ ಮಟ್ಟಿಗೆ ಈ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿದೆ ಎಂದರು.

ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಪತ್ರಕರ್ತ ಹಾಗೂ ಹವ್ಯಾಸಿ ಛಾಯಾಗ್ರಾಹಕರಾದ ವಿಘ್ನೇಶ್ ಭೂತನಕಾಡು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿಕುಮಾರ್, ಸಂಘದ ಪದಾಧಿಕಾರಿಗಳಾದ ಟಿ.ಕೆ. ಸಂತೋಷ್, ಸುರೇಶ್ ಬಿಳಿಗೇರಿ, ಡಿ.ಪಿ. ಲೋಕೇಶ್, ಎಂ.ಎಸ್. ಸುನಿಲ್, ಜಿ.ಕೆ. ಬಾಲಕೃಷ್ಣ, ಚುಟುಕು ಸಾಹಿತಿ ಹಾ.ತಿ. ಜಯಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕೆ. ತಿಮ್ಮಪ್ಪ ನಿರೂಪಿಸಿದರು. ಸಂಘದ ಖಜಾಂಚಿ ನವೀನ್ ಚಿನ್ನಪ್ಪ ಸ್ವಾಗತಿಸಿ, ಬಿ.ಎನ್. ರವಿಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ರಾಜಕಾರಣಕ್ಕೆ ಎಚ್‌ಡಿಕೆ ಪರೋಕ್ಷ ಇಂಗಿತ
ಜೈಲಿನ ಬ್ಯಾರಕ್‌ಗಳಿಗೆ ಸಿಸಿಟಿವಿ ಕ್ಯಾಮೆರಾ!