ಸುದ್ದಿ ಮಾಧ್ಯಮ ಸಮಾಜದ ಮುಖವಾಣಿ-ಶಾಸಕ ಮಾನೆ

KannadaprabhaNewsNetwork | Published : Sep 28, 2024 1:23 AM

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯೋಧರಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಜಾಗೃತಿಯ ಹೋರಾಟ ಮಾಡಿರುವುದಲ್ಲದೆ, ಇಂದಿಗೂ ಕೂಡ ಸತ್ಯ ಶೋಧದಲ್ಲಿ ಪತ್ರಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸುದ್ದಿ ಮಾಧ್ಯಮ ಸಮಾಜದ ಮುಖವಾಣಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯೋಧರಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಜಾಗೃತಿಯ ಹೋರಾಟ ಮಾಡಿರುವುದಲ್ಲದೆ, ಇಂದಿಗೂ ಕೂಡ ಸತ್ಯ ಶೋಧದಲ್ಲಿ ಪತ್ರಿಕೆಯ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಸುದ್ದಿ ಮಾಧ್ಯಮ ಸಮಾಜದ ಮುಖವಾಣಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಗುರುವಾರ ಹಾನಗಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರ, ಶಿಡ್ಲು ಕೌರವ ಪತ್ರಿಕಾ ಬಳಗದ ಸಹಯೋಗದಲ್ಲಿ ಸ್ವಾತಂತ್ರ್ಯ ಯೋಧ ಲಿಂ.ಜಿ.ಪಿ. ಮಹಾನುಭಾವಿಮಠ, ಲಿಂ. ಶಿವಲಿಂಗು ಮಹಾನುಭಾವಿಮಠ ಅವರ ಸ್ಮರಣಾರ್ಥ ಉದಯೋನ್ಮುಖ ವರದಿಗಾರರಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಪಡೆಯಲು ದೊಡ್ಡ ಯೋಧರ ಪಡೆ ಯಶಸ್ವಿಯಾಯಿತು. ಸಮಾಜ ತಿದ್ದುವ ಕಾರ್ಯದಲ್ಲಿ ಪತ್ರಿಕೆಗಳು ಅತ್ಯಂತ ದಿಟ್ಟತನ ತೋರುತ್ತಿವೆ. ಪತ್ರಿಕೆಗಳಲ್ಲಿ ಮಾನವೀಯ ಮೌಲ್ಯ ಜಾಗೃತಗೊಳಿಸುವ ಹೆಚ್ಚು ಸುದ್ದಿಗಳು ಪ್ರಕಟವಾಗಬೇಕು. ಒಳ್ಳೆಯ ಸುದ್ದಿಗಳನ್ನು ಓದುವ ಹವ್ಯಾಸವೂ ಓದುಗರಿಗೆ ಬೇಕು. ವರದಿಗಾರರು ಕೂಡ ಪತ್ರಿಕಾ ಧರ್ಮವನ್ನು ಕಾಪಾಡಬೇಕು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಸಿ.ಎಸ್. ಕುಮ್ಮೂರ ಮಾತನಾಡಿ, ಪತ್ರಿಕೆಗಳು ಸಮಾಜದ ಕನ್ನಡಿ ಇದ್ದಂತೆ. ಎಲ್ಲ ಸಂದರ್ಭದಲ್ಲಿಯೂ ಸಮಾಜದ ತುಡಿತ ಆಗು ಹೋಗುಗಳನ್ನು ದಿಟ್ಟವಾಗಿ ಪ್ರಕಟಪಡಿಸುವ ಮೂಲಕ ಸಾಮಾಜಿಕ ಎಚ್ಚರಿಕೆಯನ್ನು ಮೂಡಿಸುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ಸುದ್ದಿ ಮಾಧ್ಯಮ ಸ್ವಾತಂತ್ರ್ಯದ ಜಾಗೃತಿ ಮೂಡಿಸುವಲ್ಲಿ ಅಂತ್ಯಂತ ಪ್ರಭಾವಿಯಾಗಿ ಕೆಲಸ ಮಾಡಿದೆ. ಯುವಕರು ಈಗ ಪತ್ರಿಕಾ ರಂಗದತ್ತ ಮುನ್ನಡೆಯಬೇಕು. ಬರಹದ ಮೂಲಕ ಸಾಮಾಜಿಕ ಸತ್ಯಗಳನ್ನು ಸಮಾಜಕ್ಕೆ ಮುಟ್ಟಿಸಲು ಮುಂದಾಬೇಕು ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಜಿ.ಎಚ್. ಇಮ್ರಾಪೂರ, ಎಸ್.ಜಿ. ಮಹಾನುಭಾವಿಮಠ, ಆರ್.ಜಿ. ಮಹಾನುಭಾವಿಮಠ, ಸಿಕಂದರ ವಾಲಿಕಾರ, ಪುರಸಭೆ ಮಾಜಿ ಉಪಾಧ್ಯಕ್ಷ ಮಹೇಶ ಪವಾಡಿ, ನ್ಯಾಯವಾದಿ ಎಸ್.ಎಂ. ಕೋತಂಬರಿ, ಫೈರೋಜ ಸಿರಬಡಗಿ ಇದ್ದರು.