ಪತ್ರಿಕಾ ವಿತರಕರು ಪತ್ರಿಕೋದ್ಯಮದ ಬೆನ್ನೆಲುಬು

KannadaprabhaNewsNetwork |  
Published : Nov 12, 2026, 02:45 AM IST
ಪತ್ರಿಕಾ ವಿತರಕರ 6ನೇ ರಾಜ್ಯಮಟ್ಟದ ಸಮ್ಮೇಳನವನ್ನು ಕೆ.ವಿ.ಪ್ರಭಾಕರ ಉದ್ಘಾಟಿಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಪತ್ರಿಕಾ ವಿತರಕರು ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿದ್ದು, ಅವರಿಲ್ಲದೆ ಪತ್ರಿಕೆಗಳ ಪ್ರಕಟಣೆ ಮತ್ತು ಪ್ರಸರಣ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಸಂಪಾದಕರು, ವರದಿಗಾರರು ಹಾಗೂ ಪತ್ರಿಕಾ ಸಂಸ್ಥೆಗಳ ಸಿಬ್ಬಂದಿಯಷ್ಟೇ ವಿತರಕರೂ ಪತ್ರಿಕೋದ್ಯಮದ ಬೆನ್ನೆಲುಬು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪತ್ರಿಕಾ ವಿತರಕರು ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿದ್ದು, ಅವರಿಲ್ಲದೆ ಪತ್ರಿಕೆಗಳ ಪ್ರಕಟಣೆ ಮತ್ತು ಪ್ರಸರಣ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಸಂಪಾದಕರು, ವರದಿಗಾರರು ಹಾಗೂ ಪತ್ರಿಕಾ ಸಂಸ್ಥೆಗಳ ಸಿಬ್ಬಂದಿಯಷ್ಟೇ ವಿತರಕರೂ ಪತ್ರಿಕೋದ್ಯಮದ ಬೆನ್ನೆಲುಬು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಹೇಳಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ನ್ಯೂಸ್‌ ಪೇಪರ್ ಡಿಸ್ಟ್ರಿಬ್ಯೂಟರ್ ಚಾರಿಟಬಲ್ ಟ್ರಸ್ಟ್ ಹಾಗೂ ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಧರ್ಮನಾಥ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆಯ ಬೆಳಕು ಸಮಾಜದ ಮನಸುನ್ನು ಬೆಳಗಿಸಿದರೆ, ಆ ಬೆಳಕನ್ನು ಪ್ರತಿದಿನ ಮುಂಜಾನೆ ಮನೆಮನೆಗೆ ತಲುಪಿಸುವವರು ವಿತರಕರು. ಬಿಸಿಲು, ಮಳೆ, ಚಳಿ ಎನ್ನದೆ ಜನರು ನಿದ್ರೆಯಲ್ಲಿರುವಾಗಲೇ ಪತ್ರಿಕೆ ತಲುಪಿಸುವ ಅವರ ಸೇವೆ ಅನನ್ಯ. ಕೊಳಗೇರಿಯಿಂದ ವಿಧಾನಸೌಧದವರೆಗೆ, ಬಡವರ ಮನೆಯಿಂದ ಮುಖ್ಯಮಂತ್ರಿಗಳ ನಿವಾಸದವರೆಗೆ ಪತ್ರಿಕೆ ತಲುಪಿಸುವ ವಿತರಕರು ಸಮಾಜದಲ್ಲಿ ಜ್ಞಾನ ಪ್ರಸರಣೆಯ ಮಹತ್ವದ ಕೊಂಡಿಯಾಗಿದ್ದಾರೆ ಎಂದರು.

ವಿದ್ಯಾರ್ಥಿ ಜೀವನದಲ್ಲಿ ತಾವು ಕೂಡ ಪತ್ರಿಕಾ ವಿತರಕರಾಗಿ ಕೆಲಸ ಮಾಡಿದ್ದಾಗಿ ಸ್ಮರಿಸಿದ ಅವರು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಬಳಿಕ ತಂದೆ ಕೊಡಿಸಿದ ಸೈಕಲ್‌ನಲ್ಲಿ ಪ್ರತಿದಿನ ನೂರು ಮನೆಗಳಿಗೆ ಪತ್ರಿಕೆ ಹಂಚುತ್ತಿದ್ದೆ. ಆಗ ತಿಂಗಳಿಗೆ ₹90 ಸಂಬಳ ಸಿಗುತ್ತಿತ್ತು. ಪತ್ರಿಕೆ ಹಂಚುವುದಕ್ಕಿಂತ ತಿಂಗಳ ಕೊನೆಯಲ್ಲಿ ಚಂದಾದಾರರಿಂದ ಹಣ ಸಂಗ್ರಹಿಸುವುದು ಹೆಚ್ಚು ಕಷ್ಟವಾಗಿತ್ತು. ಹೀಗಾಗಿ ವಿತರಕರ ಶ್ರಮ ಮತ್ತು ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ ಎಂದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ವಿತರಕರು ಮನೆಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಮುಂದುವರಿಸಿದ್ದರು. ಅಸಂಘಟಿತ ವಿತರಕರನ್ನು ಸಂಘಟಿಸಿ ಅವರ ಸಮಸ್ಯೆಗಳಿಗೆ ಧ್ವನಿಯಾದ ಕೆ.ಶಂಭುಲಿಂಗ ಅವರ ಕಾರ್ಯ ಶ್ಲಾಘನೀಯ. ಅನಾರೋಗ್ಯದ ನಡುವೆಯೂ ವಿತರಕರ ಹಿತಕ್ಕಾಗಿ ಶ್ರಮಿಸುತ್ತಿರುವ ಅವರ ಚಾರಿಟಬಲ್ ಟ್ರಸ್ಟ್‌ಗೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

ವಿತರಕರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ತಲುಪಿಸುವಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಶಂಭುಲಿಂಗಪ್ಪ ಅವರೊಂದಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ವಿತರಕರ ಕಲ್ಯಾಣ ಹಾಗೂ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ವಿತರಕರು ಹಗಲು-ರಾತ್ರಿ ಎನ್ನದೆ ಪ್ರತಿದಿನ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ಪತ್ರಿಕೋದ್ಯಮದ ಯಶಸ್ಸಿನಲ್ಲಿ ಅವರ ಪಾತ್ರ ಪ್ರಮುಖವಾಗಿದ್ದರೂ, ಅವರ ಕಲ್ಯಾಣಕ್ಕೆ ನಿರೀಕ್ಷಿತ ಆದ್ಯತೆ ದೊರೆತಿಲ್ಲ. ವಿತರಕರ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಬೇಕು. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಮುದ್ರಣ ಮಾಧ್ಯಮ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪತ್ರಿಕಾ ಸಂಸ್ಥೆಗಳು ಮತ್ತು ವಿತರಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದರು.

ಸಮ್ಮೇಳನಾಧ್ಯಕ್ಷ ಪ್ರತಾಪ ಬೋಸಲೆ ಮಾತನಾಡಿ, ಬೆಳಗಾವಿಯಲ್ಲಿ ಪತ್ರಿಕಾ ವಿತರಕರ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸುವ ಅವಕಾಶ ದೊರೆತಿರುವುದು ಸಂತಸದ ಸಂಗತಿ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪತ್ರಿಕಾ ವಿತರಕರು ಹಾಗೂ ಪ್ರತಿನಿಧಿಗಳ ಉಪಸ್ಥಿತಿಯಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಹಾಗೂ ತಮ್ಮ ತಂಡದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ದೇಶದಲ್ಲಿ ಸುಮಾರು 25 ಲಕ್ಷ ಪತ್ರಿಕಾ ವಿತರಕರಿದ್ದು, ಅವರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ವಿತರಕರಿಗೆ ಅಪಘಾತ ಪರಿಹಾರ ಹಾಗೂ ವಿಮಾ ಸೌಲಭ್ಯ ಕಲ್ಪಿಸಲು ಕಾರ್ಮಿಕ ಇಲಾಖೆಯ ಮೂಲಕ ಪ್ರಯತ್ನಿಸಲಾಗುತ್ತಿದೆ. ರೈಲು ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪತ್ರಿಕೆ ಮಾರಾಟಕ್ಕೆ ವಿಧಿಸಿರುವ ನಿರ್ಬಂಧ ಮತ್ತು ಷರತ್ತುಗಳನ್ನು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಶಾಂತಕುಮಾರ ಎನ್. ಮಾತನಾಡಿದರು. ಇದೆ ವೇಳೆ ಕೆಯುಡಬ್ಲ್ಯುಜೆ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದಿಲೀಪ ಕುರಂದವಾಡೆ ಮಾತನಾಡಿ, ಹಲವು ಸವಾಲುಗಳ ನಡುವೆಯೂ ವಿತರಕರು ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸುವ ಮೂಲಕ ವೃತ್ತಿನಿಷ್ಠೆ ಪ್ರದರ್ಶಿಸುತ್ತಿದ್ದಾರೆ. ಅವರ ಕುಟುಂಬದ ಜವಾಬ್ದಾರಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಸಂಘ ಸದಾ ಬೆಂಬಲವಾಗಿ ನಿಲ್ಲಲಿದೆ. ಈ ಹಿಂದೆ ಸಂಘದಿಂದ ಸೈಕಲ್ ವಿತರಿಸಲಾಗಿದ್ದು, ಮುಂದೆಯೂ ಅಗತ್ಯ ನೆರವು ನೀಡಲು ಚಿಂತಿಸಲಾಗುವುದು ಎಂದರು. ಪತ್ರಿಕಾ ವಿತರಕರ ಚಾರಿಟೇಬಲ್‌ ಟ್ರಸ್ಟ್‌ಗೆ ವೈಯಕ್ತಿಕವಾಗಿ ತಾವೂ ಕೂಡ ₹1 ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.ಪತ್ರಿಕಾ ವಿತರಕರ ಸಂಘದ ಜಿಲ್ಲಾಧ್ಯಕ್ಷ ದೀಪಕ ರಾಜಗೋಳಕರ, ಸತೀಶ ನಾಯ್ಕ, ಸಂಗಮ ಸುರೇಶ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರಿನ ಜವರಪ್ಪ, ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀ ನರಸಿಂಹ ಮೊದಲಾದವರು ಉಪಸ್ಥಿತರಿದ್ದರು. ಶಿವಾಜಿ ಮೇತ್ರಿ ಸ್ವಾಗತಿಸಿದರು. ಯಾಸೀನ್ ಕಿತ್ತೂರ ವಂದಿಸಿದರು.

ಸಾಧಕರಿಗೆ ಪ್ರಶಸ್ತಿ ಪ್ರದಾನ:

ಪತ್ರಿಕಾರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕನ್ನಡಪ್ರಭ ಬೆಳಗಾವಿ ಬ್ಯುರೋ ಮುಖ್ಯಸ್ಥ ಬ್ರಹ್ಮಾನಂದ ಹಡಗಲಿ ಹಾಗೂ ಪ್ರಸರಣ ವಿಭಾಗದ ಮಂಜುನಾಥ ಕಸಮಳಗಿ ಸೇರಿದಂತೆ ಪತ್ರಿಕಾ ಪ್ರತಿನಿಧಿಗಳಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ದೀರ್ಘಕಾಲದಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ವಿತರಕರಿಗೆ ಪತ್ರಿಕಾ ವಿತರಕರ ಸೇವಾ ರತ್ನ ಪ್ರಶಸ್ತಿ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯ ಅಂಗೀಕಾರ

ಬೆಳಗಾವಿಯಲ್ಲಿ ನಡೆದ ಪತ್ರಿಕಾ ವಿತರಕರ 6ನೇ ರಾಜ್ಯ ಸಮ್ಮೇಳನದಲ್ಲಿ ವಿತರಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ದೇಶದಲ್ಲಿ ಸುಮಾರು 25 ಲಕ್ಷ ಪತ್ರಿಕಾ ವಿತರಕರಿದ್ದು, ಅವರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ರಾಜ್ಯ ಸರ್ಕಾರದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಪತ್ರಿಕಾ ವಿತರಕರ ಕ್ಷೇಮ ನಿಧಿ ಸ್ಥಾಪಿಸಬೇಕು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಿಮಾ ಪರಿಹಾರ ಯೋಜನೆಯಲ್ಲಿನ ಕಠಿಣ ಷರತ್ತುಗಳನ್ನು ಸಡಿಲಗೊಳಿಸಿ ಅರ್ಹ ವಿತರಕರಿಗೆ ಸೌಲಭ್ಯ ದೊರಕಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂಬಂಧ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು, ಪತ್ರಿಕಾ ವಿತರಕರ ಪ್ರತಿನಿಧಿಗಳೊಂದಿಗೆ ಶೀಘ್ರ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಕರ್ನಾಟಕ ಮಾಧ್ಯಮ ಅಕಾಡೆಮಿ ಮಾದರಿಯಲ್ಲಿ ಪತ್ರಿಕಾ ವಿತರಕರ ಕಲ್ಯಾಣಕ್ಕಾಗಿ ಪ್ರತ್ಯೇಕ ನಿಗಮ ಅಥವಾ ಮಂಡಳಿ ಸ್ಥಾಪಿಸಬೇಕು ಎಂಬ ಪ್ರಮುಖ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌