ಮಂಗಳೂರಿಗೆ ಶೀಘ್ರ ಎನ್‌ಐಎ ಘಟಕ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭರವಸೆ

KannadaprabhaNewsNetwork |  
Published : Jan 04, 2025, 12:32 AM IST
ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ದ.ಕ.ಸಂಸದ ಕ್ಯಾ.ಬ್ರಿಜೇಶ್‌ ಚೌಟ | Kannada Prabha

ಸಾರಾಂಶ

ಮಂಗಳೂರು ಈಗಾಗಲೇ ಬ್ಯಾಂಕ್‌ಗಳ ತೊಟ್ಟಿಲು ಎಂದು ಕರೆಯಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ಸಹಕಾರ ಬ್ಯಾಂಕಿಂಗ್‌ ವಲಯದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಣ್ಣ ಉದ್ದಿಮೆದಾರರು ಹಾಗೂ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಕೋ ಆಪರೇಟಿವ್‌ ಬ್ಯಾಂಕ್‌ಗಳ ಉತ್ತೇಜನ ಅನುಕೂಲ ಮಾಡಲಿದೆ ಎಂದು ಸಹಕಾರಿ ಸಚಿವರೂ ಆಗಿರುವ ಅಮಿತ್‌ ಶಾ ಅವರಲ್ಲಿ ಕ್ಯಾ. ಚೌಟ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಉಗ್ರ ಚಟುವಟಿಕೆ ನಿಗ್ರಹಕ್ಕೆ ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.

ಕರಾವಳಿ ತೀರದ ಸುರಕ್ಷತೆ ದೃಷ್ಟಿಯಿಂದ ಭಾರತೀಯ ಕೋಸ್ಟ್‌ಗಾರ್ಡ್‌ ಅಕಾಡೆಮಿ ಸ್ಥಾಪನೆ ಯೋಜನೆ ಅನುಷ್ಠಾನ, ದಕ್ಷಿಣ ಕನ್ನಡದಲ್ಲಿ ಸೈನಿಕ ಶಾಲೆ-ಮಿಲಿಟರಿ ನೆಲೆ ಸ್ಥಾಪಿಸುವುದು, ಮಂಗಳೂರು-ಬೆಂಗಳೂರು ನಡುವಿನ ರೈಲು ಹಾಗೂ ರಸ್ತೆ ಸಂಪರ್ಕ ಮತ್ತಷ್ಟು ಸುಗಮಗೊಳಿಸುವುದು ಸೇರಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆ ಹೆಚ್ಚಳಕ್ಕೆ ಪೂರಕವಾದ ಹಲವು ಪ್ರಮುಖ ಬೇಡಿಕೆ ಒಳಗೊಂಡಿರುವ ಮನವಿಯನ್ನು ಇದೇ ವೇಳೆ ಸಂಸದ ಕ್ಯಾ. ಚೌಟ ಅವರು ಗೃಹ ಸಚಿವ ಅಮಿತ್‌ ಶಾ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಗೃಹಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಮಂಗಳೂರಿಗೆ ಶೀಘ್ರ ಎನ್‌ಐಎ ಘಟಕ: ಮಂಗಳೂರು ಸೇರಿ ಕರಾವಳಿಯಲ್ಲಿ ಎಸ್‌ಡಿಪಿಐ, ಪಿಎಫ್‌ಐನಂಥ ಮತಾಂಧ ಸಮಾಜಘಾತುಕ ಸಂಘಟನೆಗಳ ಮೂಲಕ ಸ್ಲೀಪರ್‌ಸೆಲ್‌ನಂತಿರುವ ಉಗ್ರ ಚಟುವಟಿಕೆ ಮಟ್ಟ ಹಾಕಬೇಕಾದರೆ ಕರಾವಳಿಯಲ್ಲಿ ಎನ್‌ಐಎ ಘಟಕ ಸ್ಥಾಪಿಸುವುದು ಅತ್ಯಂತ ಅಗತ್ಯವಾಗಿದೆ. ಈ ಹಿಂದೆ ಸಿಎಎ ಪ್ರತಿಭಟನೆ ಹೆಸರಿನಲ್ಲಿ ನಡೆಸಿದ್ದ ಮೂಲಭೂತವಾದಿಗಳ ಗಲಭೆ ಕೂಡ ಕರಾವಳಿಯ ಭದ್ರತೆಗೆ ಎದುರಾದ ಸವಾಲಿಗೆ ಸ್ಪಷ್ಟ ನಿದರ್ಶನ. ಹೀಗಿರುವಾಗ, ಮಂಗಳೂರಿನಲ್ಲಿ ಎನ್‌ಐಎ ಘಟಕ ಸ್ಥಾಪನೆಯಾದರೆ ಈ ಭಾಗದಲ್ಲಿ ಉಗ್ರ ಚಟುವಟಿಕೆಯ ಮೂಲೋತ್ಪಾಟನೆ ಜತೆಗೆ ಕರಾವಳಿಯ ಸುರಕ್ಷತೆ ಹೆಚ್ಚಿಸುವುದಕ್ಕೂ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ಕ್ಯಾ. ಚೌಟ ತಿಳಿಸಿದ್ದಾರೆ. ಸೈನಿಕ ಶಾಲೆ ಮತ್ತು ಮಿಲಿಟರಿ ಬೇಸ್‌ ಸ್ಥಾಪನೆ: ಶೈಕ್ಷಣಿಕವಾಗಿ ಮಂಗಳೂರು ವಿಶ್ವದರ್ಜೆ ಮನ್ನಣೆ ಪಡೆದಿರುವ ಹಿನ್ನಲೆಯಲ್ಲಿ ಈ ಭಾಗದಲ್ಲಿ ದೇಶ ಸೇವೆಗೆ ಮುಂದಾಗುವ ಯುವಕರನ್ನು ಪ್ರೋತ್ಸಾಹಿಸುವುದಕ್ಕೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಶಿಸ್ತು, ನಾಯಕತ್ವ ಗುಣ ಬೆಳೆಸುವುದಕ್ಕೆ ಸೈನಿಕ ಶಾಲೆ ಸ್ಥಾಪನೆಯಾಗಬೇಕು. ನಮ್ಮ ಕರಾವಳಿ ತೀರದ ರಕ್ಷಣಾ ಸಾಮರ್ಥ್ಯ ಹಾಗೂ ರಾಷ್ಟ್ರೀಯ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಮಿಲಿಟರಿ ಬೇಸ್‌ ಮಂಗಳೂರಿನಲ್ಲಿ ಸ್ಥಾಪಿಸಬೇಕು. ಸೈನಿಕ ಶಾಲೆ ಜತೆಗೆ ಮಿಲಿಟರಿ ನೆಲೆಯನ್ನೂ ಸ್ಥಾಪಿಸುವುದರಿಂದ ಕರಾವಳಿ ಭಾಗದ ಸುರಕ್ಷತೆಯ ಜತೆಗೆ ದೇಶದ ರಕ್ಷಣಾ ಮೂಲಸೌಕರ್ಯ ಮತ್ತಷ್ಟು ಬಲಗೊಳಿಸುವುದಕ್ಕೆ ವಿಪುಲ ಅವಕಾಶ-ಅನುಕೂಲತೆಗಳು ದೊರೆಯುತ್ತದೆ ಎಂದು ಚೌಟ ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರು ಈಗಾಗಲೇ ಬ್ಯಾಂಕ್‌ಗಳ ತೊಟ್ಟಿಲು ಎಂದು ಕರೆಯಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿರುವ ಸಹಕಾರ ಬ್ಯಾಂಕಿಂಗ್‌ ವಲಯದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಸಣ್ಣ ಉದ್ದಿಮೆದಾರರು ಹಾಗೂ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಕೋ ಆಪರೇಟಿವ್‌ ಬ್ಯಾಂಕ್‌ಗಳ ಉತ್ತೇಜನ ಅನುಕೂಲ ಮಾಡಲಿದೆ ಎಂದು ಸಹಕಾರಿ ಸಚಿವರೂ ಆಗಿರುವ ಅಮಿತ್‌ ಶಾ ಅವರಲ್ಲಿ ಕ್ಯಾ. ಚೌಟ ಮನವಿ ಮಾಡಿದ್ದಾರೆ.ಭೇಟಿಯ ವೇಳೆ ಕೇಂದ್ರ ಸಚಿವರಿಗೆ ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ