₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಗಾರ್ಡನ್, ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಬೇಸರ
ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ನಿಡಶೇಸಿ ಕೆರೆಯ ದಡದಲ್ಲಿರುವ ಉದ್ಯಾನವನವನ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಅಧಿಕಾರಿಗಳು ಉದ್ಯಾನವನ ಸುಸ್ಥಿತಿಯಲ್ಲಿಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿಡಶೇಸಿ ಕೆರೆಯ ಉದ್ಯಾನವನವು ಆರಂಭದಲ್ಲಿ ಜಿಲ್ಲೆಯ ಗಮನ ಸೆಳೆದಿತ್ತು. ಈ ಉದ್ಯಾನವನದಲ್ಲಿ ಕೃಷಿ ಸಂಪ್ರದಾಯದ ಮಾದರಿಯಾದ ಕಣದಲ್ಲಿ ಎತ್ತುಗಳೊಂದಿಗೆ ಹೊಡೆಯುತ್ತಿರುವ ರೈತ, ಕರುವಿಗೆ ಹಾಲುಣಿಸುತ್ತಿರುವ ಹಸು, ತಲೆ ಮೇಲೆ ಬುಟ್ಟಿ ಹೊತ್ತ ರೈತ ಮಹಿಳೆ ಹಾಗೂ ರೈತರ ವಿವಿಧ ಬಗೆಯ ಮೂರ್ತಿಗಳು ಇದ್ದವು. ಅಲಂಕಾರಿಕ ಸಸ್ಯಗಳನ್ನು ನಾಟಿ ಮಾಡಲಾಗಿತ್ತು. ಇದರ ಜತೆಗೆ ಹುಲ್ಲು ಬೆಳೆಸಲಾಗಿತ್ತು.
ಈಗ ನಿರ್ವಹಣೆ ಕೊರತೆಯಿಂದ ಉದ್ಯಾನವನದಲ್ಲಿರುವ ಕೆಲವು ಸಸಿಗಳು ಬಾಡುತ್ತಿವೆ, ಕೆಲವು ಮುರಿದು ಹೋಗಿವೆ. ಕೆಲವು ಸಾಮಗ್ರಿಗಳನ್ನು ಕಿಡಿಗೇಡಿಗಳು ಮುರಿದು ಹಾಕಿದ್ದಾರೆ. ಒಟ್ಟಿನಲ್ಲಿ ಆರಂಭದಲ್ಲಿದ್ದ ಉದ್ಯಾನವನದ ಸೌಂದರ್ಯವೂ ಈಗ ಕಣ್ಮರೆಯಾಗುತ್ತಿದೆ.
ಕೆಲವು ಮದ್ಯವ್ಯಸನಿಗಳು, ಕಿಡಿಗೇಡಿಗಳಿಗೆ ಉದ್ಯಾನವನವೂ ಪಾರ್ಟಿ ಮಾಡುವ ತಾಣವಾಗಿ ಮಾರ್ಪಟ್ಟಿದೆ. ಊಟ ಮಾಡಿ ಬಿಸಾಕಿದ ತಾಟುಗಳು, ಗುಟ್ಕಾ ಪ್ಯಾಕೆಟ್, ಸಾರಾಯಿ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಬಿದ್ದು ಉದ್ಯಾನವನದ ಅಂದಗೆಡಿಸಿವೆ. ಕೆಲವು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗುವುದನ್ನು ಬಿಟ್ಟು ಈ ಉದ್ಯಾನವನದಲ್ಲಿ ಹರಟೆ ಹೊಡೆಯುತ್ತಾ ಕುಳಿತಿರುತ್ತಾರೆ.