ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಸ್ವಚ್ಛ ಭಾರತ ಎಂಬ ಯೋಜನೆ ಇದೆ ಎಂಬುದನ್ನು ಸ್ಥಳಿಯಾಡಳಿತಗಳು ಮರೆತುಬಿಟ್ಟಂತೆ ಕಾಣುತ್ತದೆ. ಇದಕ್ಕೆ ತಾಜಾ ಉದಾಹರಣೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಲ್ಮಂಜ ಮತ್ತು ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ.ಇಲ್ಲಿನ ನಿಡಗಲ್ ನೇತ್ರಾವತಿ ನದಿಯ ಸೇತುವೆಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗಿರುವ ಭಾರಿ ಪ್ರಮಾಣದ ತ್ಯಾಜ್ಯ ನದಿ ನೀರನ್ನು ಸೇರಿ ಕಲುಷಿತಗೊಳ್ಳಲು ಸಿದ್ಧವಾಗಿದೆ.
ಸಮಸ್ಯೆ ಹಿನ್ನೆಲೆ:ನಿಡಿಗಲ್ ನಲ್ಲಿ ಹಳೆ ಮತ್ತು ಹೊಸ ಎರಡು ಸೇತುವೆಗಳಿವೆ. ಬ್ರಿಟಿಷರ ಕಾಲದ ಹಳೆ ಸೇತುವೆ ಕಮಾನುಗಳನ್ನು ಹೊಂದಿದ್ದು ಅತ್ಯಾಕರ್ಷಕವಾಗಿದೆ. ಈ ಸೇತುವೆ ಹೊಸ ಸೇತುವೆಗಿಂತ ಸುಮಾರು 50 ಮೀ. ಅಂತರದಲ್ಲಿದೆ. ಹೊಸ ಸೇತುವೆ ನಿರ್ಮಾಣವಾದ ಬಳಿಕ ಹಳೆ ಸೇತುವೆಯಲ್ಲಿ ಸಂಚಾರ ಇರುವುದಿಲ್ಲ.
ಈ ಹಳೆ ಸೇತುವೆ ಹಾಗೂ ಅದರ ವ್ಯಾಪ್ತಿ ತ್ಯಾಜ್ಯ ತಂದು ಸುರಿಯುವವರಿಗೆ ಸ್ವರ್ಗವಾಗಿದೆ. ಸೇತುವೆ ಮೇಲೆ ಹಾಗೂ ಬದಿಗಳಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್, ಹಳೆ ಮನೆ ಸಾಮಗ್ರಿ, ಬಾಟಲಿ, ತರಕಾರಿ, ಮಾಂಸ ಸೇರಿದಂತೆ ಇತರ ತ್ಯಾಜ್ಯ ತಂದು ಹಾಕಲಾಗುತ್ತಿದೆ. ಕೆಲವೆಡೆ ರಾಶಿ ರಾಶಿಯಾಗಿ ಸುರಿಯಲಾದ ತ್ಯಾಜ್ಯವನ್ನು ಬೀದಿ ನಾಯಿಗಳು ಎಳೆದಾಡಿ ಚೆಲ್ಲಾಪಿಲ್ಲಿಗೊಳಿಸುತ್ತಿವೆ.ಹೊಸ ಸೇತುವೆ ಇಕ್ಕೆಲಗಳಲ್ಲಿಯೂ ಸಾಕಷ್ಟು ಕಸ, ಗೋಣಿಚೀಲಗಳು ಕಂಡುಬರುತ್ತಿವೆ.
ಇತ್ತೀಚೆಗೆ ಇಲ್ಲಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲಾಗಿದ್ದು ಸೇತುವೆಗಳ ವ್ಯಾಪ್ತಿಯಲ್ಲಿ ಉತ್ತಮ ಮಟ್ಟದಲ್ಲಿ ನೀರು ಸಂಗ್ರಹ ಗೊಂಡಿದೆ.ಈ ನೀರು ಪಂಚಾಯಿತಿಗಳಿಗೆ, ಜನಸಾಮಾನ್ಯರಿಗೆ, ಜಾನುವಾರುಗಳಿಗೆ, ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ಆಧಾರವಾಗಿದೆ. ಸೇತುವೆಗಳಲ್ಲಿ ಇರುವ ತ್ಯಾಜ್ಯ ನದಿ ನೀರು ಸೇರಿದರೆ ಕಲುಷಿತಗೋಳ್ಳುವುದು ಖಚಿತ. ಇಲ್ಲಿ ನೀರು ಕಲುಷಿತಗೊಂಡರೆ ಆರೋಗ್ಯ ಸಹಿತ ಇನ್ನಿತರ ಸಮಸ್ಯೆಗಳು ಕಂಡು ಬರಲಿವೆ.
ಹಳೆ ಸೇತುವೆಯಲ್ಲಿ ತ್ಯಾಜ್ಯ ತಂದು ಹಾಕುವಲ್ಲದೆ ಧೂಮಪಾನ, ಮದ್ಯಪಾನ,ಅಮಲು ಪದಾರ್ಥ ಸೇವನೆಯಂತಹ ನಾನಾ ಅನಪೇಕ್ಷಿತ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಇಲ್ಲಿನ ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿ ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಸಂಜೆಯಾಗುತ್ತಿದ್ದಂತೆ ಈ ಚಟುವಟಿಕೆಗಳು ಆರಂಭವಾಗುತ್ತವೆ.------ಪರಿಹಾರ ಏನು?------------ಸೇತುವೆ ವ್ಯಾಪ್ತಿಯಲ್ಲಿ ಸಿಸಿಟಿವಿ, ಬೀದಿದೀಪ ಅಳವಡಿಕೆ ಅಗತ್ಯ .
-ಹಳೆ ಸೇತುವೆ ಎರಡು ಬದಿಗಳಿಗೆ ಮಣ್ಣು ಹಾಕಿ ಜನ ಸಂಚಾರಕ್ಕೆ ಕಡಿವಾಣ ಹಾಕಬೇಕು.-ಪರಿಸರದಲ್ಲಿರುವ ತ್ಯಾಜ್ಯ ವಿಲೇವಾರಿ ಕೂಡಲೆ ನಡೆಯಬೇಕು.
-ಸೇತುವೆ ಕಲ್ಮಂಜ, ಮುಂಡಾಜೆ ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರಣ ಎರಡು ಗ್ರಾಮ ಪಂಚಾಯಿತಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು.-ನದಿ ವ್ಯಾಪ್ತಿಯಲ್ಲಿ ಎರಡು ದೇಗುಲ, ಒಂದು ಮಸೀದಿ ಕೂಡ ಇದೆ. ಇಲ್ಲಿಗೂ ಇದರ ನೀರು ಉಪಯೋಗಿಸಲಾಗುತ್ತದೆ.
.................ಕಲ್ಮಂಜ ಗ್ರಾಮ ಪಂಚಾಯಿತಿ ಜತೆ ಚರ್ಚಿಸಿ ಸೇತುವೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಮಾಡಲಾಗುವುದು. ಪಂಚಾಯಿತಿ ವತಿಯಿಂದ ಸಿಸಿಟಿವಿ ಬೀದಿದೀಪ ಅಳವಡಿಸುವ ಕ್ರಮ ಕೈಗೊಳ್ಳಲಾಗುವುದು.-ಗಣೇಶ ಬಂಗೇರ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷ.....................ಇಲ್ಲಿನ ನೀರು ನಮಗೆ ಬೇಸಿಗೆಯಲ್ಲಿ ಆಧಾರವಾಗಿದೆ.ಅದು ಕಲುಷಿತಗೊಂಡರೆ ನೂರಾರು ಕುಟುಬಗಳಿಗೆ ತೊಂದರೆ ಉಂಟಾಗುತ್ತದೆ. ಸೇತುವೆ ಮೇಲಿರುವ ಕಸ ನದಿ ಸೇರುವ ಮೊದಲು ವಿಲೇವಾರಿಯಾಗ ಬೇಕಾಗಿದೆ.
-ವಿಶ್ವನಾಥ, ಸ್ಥಳೀಯ, ನಿಡಿಗಲ್.