ಸಂಡೂರು: ಸಂಡೂರಿಗೆ ಬಳ್ಳಾರಿ, ಹೊಸಪೇಟೆ ಹಾಗೂ ಕೂಡ್ಲಿಗಿಯಿಂದ ರಾತ್ರಿ ೮.೩೦ರ ನಂತರ ಸಾರಿಗೆ ಸಂಸ್ಥೆಯಿಂದ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ರೈತ ಸಂಘ ಹಾಗೂ ಜನ ಸಂಗ್ರಾಮ ಪರಿಷತ್ ಸಲ್ಲಿಸಿದ್ದ ಮನಿವಿಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಸ್ಪಂದನೆ ದೊರೆತಿದೆ.
ಸಂಡೂರಿನ ಸಾರಿಗೆ ಸಂಸ್ಥೆಯ ಬಸ್ ಘಟಕದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಘಟನೆಗಳ ಮುಖಂಡರಾದ ಟಿ.ಎಂ. ಶಿವಕುಮಾರ್, ಎಂ.ಎಲ್.ಕೆ. ನಾಯ್ಡು, ಶ್ರೀಶೈಲ ಆಲ್ದಳ್ಳಿ, ಜಿ.ಕೆ. ನಾಗರಾಜ, ಮೂಲಿಮನೆ ಈರಣ್ಣ ಅವರು ಸಂಡೂರಿನ ಜನತೆ ಎದುರಿಸುತ್ತಿರುವ ಸಾರಿಗೆ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.ಸಂಘಟನೆಗಳ ಮುಖಂಡರ ಬೇಡಿಕೆಗಳನ್ನು ಆಲಿಸಿದ ವಿಭಾಗೀಯ ನಿಯಂತ್ರಕ ಇನಾಯತ್ ಬಗ್ಬಾನ್ ಶನಿವಾರದಿಂದ ಸಂಡೂರಿನಿಂದ ಹೊಸಪೇಟೆಗೆ ರಾತ್ರಿ ಕೊನೆಯದಾಗಿ ೮.೩೦ಗಂಟೆಗೆ, ಹೊಸಪೇಟೆಯಿಂದ ಸಂಡೂರಿಗೆ ರಾತ್ರಿ ೧೦ ಗಂಟೆಗೆ ಬಸ್ ಓಡಿಸಲಾಗುವುದು. ಕೂಡ್ಲಿಗಿಯಿಂದ ಸಂಡೂರಿಗೆ ರಾತ್ರಿ ೯ ಗಂಟೆಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಸಂಡೂರು-ದೇವಗಿರಿ ಹಾಗೂ ದೇವಗಿರಿ-ಸಂಡೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಇಂದಿನಿಂದ ಶ್ರೀಕುಮಾರಸ್ವಾಮಿ ದೇವಸ್ಥಾನದ ಕ್ರಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸದೆ, ಕಡ್ಡಾಯವಾಗಿ ದೇವಸ್ಥಾನದ ಆವರಣಕ್ಕೆ ಹೋಗಿ ಬರಲು ಆದೇಶಿಸಿದರು.
ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಯ ಬೇಕಾದರೆ, ಸಂಡೂರು ಬಸ್ ಘಟಕಕ್ಕೆ ಹೆಚ್ಚುವರಿಯಾಗಿ ಇನ್ನು ೧೦ ಬಸ್‌ಗಳು ಬೇಕಾಗುತ್ತವೆ. ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬಳ್ಳಾರಿ, ಕೂಡ್ಲಿಗಿ ಹಾಗೂ ಹೊಸಪೇಟೆಯಿಂದ ಸಂಡೂರಿಗೆ ರಾತ್ರಿ ೮.೩೦ರ ನಂತರ ಬಸ್ ಸಂಚಾರ ವ್ಯವಸ್ಥೆ ಇಲ್ಲದ ಕಾರಣ, ಈ ಭಾಗಗಳಿಂದ ಸಂಡೂರಿಗೆ ರಾತ್ರಿ ೮.೩೦ ಗಂಟೆಯ ನಂತರ ಬರಲು ಸಾಧ್ಯವಾಗದೆ, ತೊಂದರೆ ಅನುಭವಿಸುವಂತಾಗಿತ್ತು. ಈ ಕುರಿತು ರೈತ ಸಂಘ ಹಾಗೂ ಜನ ಸಂಗ್ರಾಮ ಪರಿಷತ್ ಮುಖಂಡರು ಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಾರಿಗೆ ಸಚಿವರಿಗೆ ಹಾಗೂ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದು ಸಮಸ್ಯೆಯ ಪರಿಹಾರಕ್ಕೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಡೂರಿನಲ್ಲಿ ನಡೆದ ಸಭೆಯಲ್ಲಿ ಸಂಘಟನೆಗಳ ಬೇಡಿಕೆಗೆ ಸ್ಪಂದನೆ ದೊರೆತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸಂಡೂರಿನ ಬಸ್ ಘಟಕದ ಕಚೇರಿಯಲ್ಲಿ ಮಂಗಳವಾರ ರೈತ ಸಂಘ, ಜನ ಸಂಗ್ರಾಮ ಪರಿಷತ್ ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ಜರುಗಿತು.