ಸಂದೀಪ್ ವಾಗ್ಲೆ
ರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವ್ಯಾಪಾರ ವಹಿವಾಟಿನ ನಿರ್ಬಂಧವನ್ನು ರಾತ್ರಿ 1 ಗಂಟೆವರೆಗೆ ವಿಸ್ತರಿಸಿ ಬಜೆಟ್ ಲ್ಲಿ ಘೋಷಣೆಯಾಗಿ ಏಳೆಂಟು ತಿಂಗಳೇ ಕಳೆದಿವೆ. ಆದರೆ ಮಂಗಳೂರು ಸೇರಿದಂತೆ ಬಹುತೇಕ ಮಹಾನಗರಗಳಲ್ಲಿ ಇದು ಜಾರಿಯೇ ಆಗಿಲ್ಲ. ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ ಅಧೀನ ಸಂಸ್ಥೆಗಳೇ ಇದನ್ನು ಜಾರಿ ಮಾಡಲು ಬಿಡುತ್ತಿಲ್ಲ.
ಇದರಿಂದ ಮಂಗಳೂರು ಸೇರಿದಂತೆ ಪ್ರವಾಸೋದ್ಯಮ ಅವಕಾಶ ಹೆಚ್ಚಿರುವ ಮಹಾನಗರಗಳ ಬೆಳವಣಿಗೆ, ಐಟಿ ಹೂಡಿಕೆ, ಪ್ರವಾಸೋದ್ಯಮ ಉತ್ತೇಜನಕ್ಕೆ ಅಡ್ಡಿಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.ಮಂಗಳೂರಿನಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ಈ ವಿಚಾರ ಪ್ರಧಾನವಾಗಿ ಚರ್ಚೆಗೆ ಬಂದಿತ್ತು. ನೈಟ್ ಲೈಫ್ ಆದೇಶ ಜಾರಿ ಮಾಡಲು ಅವಕಾಶ ಕೊಡಬೇಕು, ವ್ಯಾಪಾರ ವಹಿವಾಟು ಹೆಚ್ಚಿಸಬೇಕು ಎಂಬ ಒತ್ತಾಯ ಪ್ರವಾಸೋದ್ಯಮ ಕ್ಷೇತ್ರದ ಸ್ಟಾಕ್ ಹೋಲ್ಡರ್‌ಗಳಿಂದ ಕೇಳಿಬಂದಿತ್ತು. ಇದಕ್ಕೆ ಜಿಲ್ಲಾಧಿಕಾರಿಯೂ ಸಹಮತ ವ್ಯಕ್ತಪಡಿಸಿದ್ದರು.
ಸರ್ಕಾರದ ನಿರ್ದೇಶನದಂತೆ ಮಹಾನಗರ ವ್ಯಾಪ್ತಿಯ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು 1 ಗಂಟೆವರೆಗೂ ತೆರೆದಿಡಬಹುದು. ನಗರದೊಳಗಿನ ಬೀಚ್‌ಗಳಲ್ಲೂ ರಾತ್ರಿ 1 ಗಂಟೆವರೆಗೆ ಪ್ರವಾಸಿಗರು ಓಡಾಡಲು, ವ್ಯಾಪಾರ ಮಾಡಲು ಅವಕಾಶವಿದೆ. ಆದರೆ ತಣ್ಣೀರುಬಾವಿ ಬೀಚ್‌ಗೆ ಹೋದರೆ ರಾತ್ರಿ 7-8 ಗಂಟೆಯೊಳಗೆ ಪ್ರವಾಸಿಗರನ್ನು ಬಲವಂತವಾಗಿ ಹೊರಕಳಿಸಲಾಗುತ್ತಿದೆ. 9ರ ವೇಳೆಗೆ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಬಾರ್ ಆಂಡ್ ರೆಸ್ಟೋರೆಂಟ್‌ಗಳನ್ನಂತೂ 11 ಗಂಟೆಗೇ ಮುಚ್ಚಿಸುತ್ತಿದ್ದಾರೆ. ಅದೇ ರೀತಿ ಗೂಡಂಗಡಿಯವರು, ಬೀದಿ ಬದಿ ವ್ಯಾಪಾರವನ್ನೂ ನಿಲ್ಲಿಸಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸುತ್ತಾರೆ.
‘ಖಾಸಗಿ ಸಾರಿಗೆ ವ್ಯವಸ್ಥೆಯು 110 ವರ್ಷಗಳ ಸುದೀರ್ಘ ಕಾಲ ಅತ್ಯುತ್ತಮ ಸೇವೆ ನೀಡಿದ್ದರಿಂದ ಶಿಕ್ಷಣ, ಆರೋಗ್ಯ, ಉದ್ಯಮ ಕ್ಷೇತ್ರದಲ್ಲಿ ಮಂಗಳೂರು ಇಷ್ಟು ಬೆಳೆಯಲು ಕಾರಣವಾಗಿದೆ. ಸರ್ಕಾರ ಆದೇಶ ಮಾಡಿದಂತೆ ರಾತ್ರಿ 1 ಗಂಟೆವರೆಗೆ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಿದರೆ ಅಷ್ಟೂ ಸಮಯ ನಾವು ಸಾರಿಗೆ ಸೇವೆಯನ್ನು ನೀಡಲು ಬದ್ಧ’ ಎನ್ನುತ್ತಾರೆ ದ.ಕ. ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ.
-------
- ಯತೀಶ್ ಬೈಕಂಪಾಡಿ, ಟೂರಿಸಂ ಪ್ರಮೋಟರ್.