ಶಿವಾನಂದ ಗೊಂಬಿ
ಇವೆಲ್ಲವೂ ಏಷ್ಯಾದ ಎರಡನೆಯ ದೊಡ್ಡ ಎಪಿಎಂಸಿ ಎಂದು ಹೆಸರು ಗಳಿಸಿರುವ ಹುಬ್ಬಳ್ಳಿಯ ಬಸವೇಶ್ವರ ಕೃಷಿ ಹುಟ್ಟುವಳಿ ಮಾರುಕಟ್ಟೆ ಸಂಸ್ಥೆಯಲ್ಲಿ ಪ್ರತಿದಿನ ಬೆಳ್ಳಂಬೆಳಗ್ಗೆ ಕಂಡು ಬರುವ ದೃಶ್ಯಗಳು.
ಬೆಂಗಳೂರು, ಕೋಲ್ಕತ್ತಾ, ಮುಂಬೈ, ದೆಹಲಿ ಸೇರಿದಂತೆ ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ ನೈಟ್ ಲೈಫ್ ಎಂದರೆ ಸಾಕು ಕುಡಿಯೋದು, ತಿನ್ನೋದು, ಕುಣಿಯೋದು.. ಇವುಗಳ ಬಗ್ಗೆಯೇ ಉತ್ತರ ದೊರೆಯುತ್ತದೆ. ಬರೀ ಪೆಗ್, ಲೆಗ್ ಬಗ್ಗೆಯೇ ಅಲ್ಲಿನ ಯುವ ಜನತೆ ತಿಳಿಸುತ್ತದೆ. ಜತೆಗೆ ರಾತ್ರಿಯೆಲ್ಲ ಪಾರ್ಟಿ ಮಾಡುತ್ತಾರೆ. ಆದರೆ, ಹುಬ್ಬಳ್ಳಿಯಲ್ಲಿ ನೈಟ್ ಲೈಫ್‌ನ ಕಥೆಯೇ ಬೇರೆ.ಹುಬ್ಬಳ್ಳಿಯ ನೈಟ್ ಲೈಫ್ ಹೇಗಿರುತ್ತದೆ ಎಂಬುದನ್ನು ಅರಿಯಬೇಕೆಂದರೆ ಎಪಿಎಂಸಿಗೆ ಬರಬೇಕು. ಮಧ್ಯರಾತ್ರಿ 12 ಗಂಟೆ ಆದರೆ ಸಾಕು ಸಾಲುಗಟ್ಟಿ ನಿಂತ ತರಕಾರಿ ಹೊತ್ತಿರುವ ವಾಹನಗಳು, ಅಂಗಡಿಗಳ ಮುಂದೆ ಎಲ್ಲೆಂದರಲ್ಲೇ ರೈತರು, ಅವರೊಂದಿಗೆ ಬಂದಿರುವವರು ಮಲಗಿರುವ ದೃಶ್ಯ. ಇಲ್ಲವೇ ವಾಹನಗಳಲ್ಲೇ ತೂಕಡಿಸುತ್ತಾ ನಿದ್ದೆಗೆ ಜಾರಿರುವ ಡ್ರೈವರ್‌ಗಳು. ಅವರನ್ನು ಎಚ್ಚರಿಸಿ ತಮ್ಮ ಚಹಾ ಮಾರಾಟ ಮಾಡಲು ಹವಣಿಸುತ್ತಿರುವ ಚಾಯ್‌ವಾಲಾಗಳು. ಇದೇ ಇಲ್ಲಿನ ನೈಟ್‌ಲೈಫ್ ಎಂಬಂತಾಗಿದೆ.
ಆದರೆ, ಹೀಗೆ ಬರುವ ರೈತರಿಗೆ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತದೆ. ಹಾಗಂತ ಎಪಿಎಂಸಿ ಸೌಲಭ್ಯಗಳನ್ನು ನೀಡಿಯೇ ಇಲ್ಲ ಅಂತೇನೂ ಇಲ್ಲ. 8 ಶೌಚಾಲಯಗಳನ್ನು ಮಾಡಿದೆ. ಆದರೆ, ತರಕಾರಿ ಮಾರುಕಟ್ಟೆ ಹತ್ತಿರ ಒಂದೇ ಇದೆ. ಅದು ರೈತರಿಗೆ ಸಾಕಾಗುವುದಿಲ್ಲ. ಹೀಗಾಗಿ ರೈತರು ಅನಿವಾರ್ಯವಾಗಿ ಹೊರಗೆ ಬಯಲು ಶೌಚಾಲಯಕ್ಕೆ ಹೋಗಬೇಕು. ಜತೆಗೆ ಇರುವ ಶೌಚಾಲಯವೂ ಸರಿಯಾಗಿ ನಿರ್ವಹಣೆಯಿಲ್ಲ. ಖಾಸಗಿ ಗುತ್ತಿಗೆದಾರರಿಂದ ನಿರ್ವಹಿಸಲಾಗುತ್ತದೆ. ಗಬ್ಬೆದ್ದು ನಾರುತ್ತಿರುತ್ತದೆ. ಹೀಗಾಗಿ ಅಲ್ಲಿಗೆ ಹೋಗಲು ರೈತರು ಹಿಂಜರಿಯುತ್ತಾರೆ.
ಇನ್ನು ಇರುವ ಇನ್ನೊಂದು ರೈತ ಭವನ ತರಕಾರಿ ಮಾರುಕಟ್ಟೆಯಿಂದ ದೂರವಿದೆ. ಅಲ್ಲಿಗೆ ಹೋಗಿ ವಿಶ್ರಾಂತಿ ಪಡೆಯುವುದು ರೈತರಿಗೆ ಅಸಾಧ್ಯದ ಮಾತು. ಅಲ್ಲಿಗೆ ಹೋಗಬೇಕೆಂದರೆ ಒಂದೆರಡು ಕಿಮೀ ದೂರ ಹೋಗಬೇಕು. ಬೆಳಗಿನ ಜಾವವೇ ತರಕಾರಿ ಮಾರುಕಟ್ಟೆ ಶುರುವಾಗುವುದರಿಂದ ಅಲ್ಲಿಗೆ ಹೋಗಿ ಬರಲು ಸಾಧ್ಯವಾಗಲ್ಲ. ಈ ಕಾರಣದಿಂದ ರೈತರು ಅಲ್ಲಿಗೆ ಹೋಗಲು ಮನಸ್ಸು ಮಾಡಲ್ಲ.
ಏನೇ ಆದರೂ ಹುಬ್ಬಳ್ಳಿಯಲ್ಲಿ ನೈಟ್‌ಲೈಫ್ ಎಪಿಎಂಸಿಯಲ್ಲಿ ನಡೆಯುತ್ತಿರುತ್ತದೆ. ಎಪಿಎಂಸಿ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆಯನ್ನೂ ನೀಡುತ್ತಿದೆ. ಅದಕ್ಕೆ ತಕ್ಕಂತೆ ಅಲ್ಲಿಗೆ ಬರುವ ರೈತರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕೊಂಚ ವಿಶ್ರಾಂತಿ ಪಡೆಯಲು ಸಮೀಪದಲ್ಲಿರುವ ವಿಶ್ರಾಂತಿ ಭವನ ನೀಡಬೇಕೆಂಬುದು ರೈತರ ಆಗ್ರಹ.