ನಿಖಿಲ್‌ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಗೆಲ್ಲಿಸಿ : ಎಚ್‌.ಡಿ. ಕುಮಾರಸ್ವಾಮಿ

KannadaprabhaNewsNetwork |  
Published : Oct 26, 2024, 01:12 AM ISTUpdated : Oct 26, 2024, 11:45 AM IST
ನಿಖಿಲ್‌ ಕುಮಾರಸ್ವಾಮಿ | Kannada Prabha

ಸಾರಾಂಶ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ನನಗೆ ಅಮೃತ ಕೊಟ್ಟಿರುವವರು ನೀವು. ಇದೀಗ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಆಶೀರ್ವದಿಸಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕ ಮನವಿ ಮಾಡಿದರು.

 ಚನ್ನಪಟ್ಟಣ : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ನನಗೆ ಅಮೃತ ಕೊಟ್ಟಿರುವವರು ನೀವು. ಇದೀಗ ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವರನ್ನು ಆಶೀರ್ವದಿಸಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಭಾವನಾತ್ಮಕ ಮನವಿ ಮಾಡಿದರು.

ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರೋಡ್‌ ಶೋನಲ್ಲಿ ಮಾತನಾಡಿ, ನಮ್ಮಿಂದ ಅನ್ಯಾಯ ಆಗಿದ್ದರೆ ಶಿಕ್ಷೆ ಕೊಡಿ. ಎಲ್ಲವನ್ನೂ ನಿಮ್ಮ ತೀರ್ಮಾನಕ್ಕೆ ಬಿಡುತ್ತೇನೆ. ಮಂಡ್ಯದಲ್ಲಿ ನಿಖಿಲ್‌ನನ್ನು ಕುತಂತ್ರ ಮಾಡಿ ಸೋಲಿಸಿದರು. ರಾಮನಗರದಲ್ಲೂ ಬಂದು ಬಿಲ ತೋಡಿ ಸೋಲುಣಿಸಿದರು. ಈಗ ಇಲ್ಲಿಗೆ ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಎಲ್ಲಿದೆ 500 ಕೋಟಿ? :  ಚನ್ನಪಟ್ಟಣಕ್ಕೆ ನಮ್ಮ ಕನಕಪುರದ ಸ್ನೇಹಿತರ ಕೊಡುಗೆ ಏನು? ಕಾಂಗ್ರೆಸ್‌ನಿಂದ ಅಷ್ಟು ವರ್ಷ ರಾಜಕಾರಣ ಮಾಡಿದಾಗ ಏನು ಕೊಡುಗೆ ಕೊಟ್ಟರು? ಬಿಡದಿ ಹತ್ತಿರ ಅದೇನೋ ಗ್ರೇಟರ್ ಬೆಂಗಳೂರು ಮಾಡ್ತಾರಂತೆ. ಇವರಿಗೆ ನಾಡಿನ ಬಡವರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಬೆಂಗಳೂರಲ್ಲಿ ಚದರಕ್ಕೆ ಇಷ್ಟು ಎಂದು ಕಮಿಷನ್ ಪಡೆಯುತ್ತಿದ್ದಾರೆ. ಚನ್ನಪಟ್ಟಣಕ್ಕೆ ೫೦೦ ಕೋಟಿ ರು. ಕೊಟ್ಟಿದ್ದೇವೆ ಅಂದರು. ಎಲ್ಲಿದೆ ೫೦೦ ಕೋಟಿ, ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಉಪಮುಖ್ಯಮಂತ್ರಿ ನಮ್ಮಲ್ಲಿ ಸಾಕ್ಷಿಗುಡ್ಡೆ ಕೇಳ್ತಾರೆ. ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ, ಎಂಜಿನಿಯರಿಂಗ್ ಕಾಲೇಜು ಮಾಡಿದ್ದು ಯಾರು? ರಾಮನಗರ ಜಿಲ್ಲೆ ಮಾಡಿದ್ದು ಯಾರು? ಈಗ ಏನೋ ಬೆಂಗಳೂರಿಗೆ ಸೇರಿಸ್ತಾರಂತೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ದಾಖಲೆ ತೆಗೆಯಿರಿ: ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದು ಯಾರು ಅಂತ ದಾಖಲೆ ತೆಗೆಯಿರಿ? ಎಷ್ಟು ಸೇತುವೆ ಮಾಡಿದ್ದೇವೆ ಎಂಬ ದಾಖಲೆ ನೋಡಿ. ದೇವೇಗೌಡರು ಹಾಗೂ ನಾನು ರೈತಪರ ಕೆಲಸ ಮಾಡಿದ್ದೇವೆ. ವಿಠ್ಠಲೇನಹಳ್ಳಿ ಗೋಲಿಬಾರ್‌ನಲ್ಲಿ ಇಬ್ಬರು ರೈತರು ಮೃತಪಟ್ಟರು. ಯಾರಿಂದ ಗೋಲಿಬಾರ್ ಆಯ್ತು? ಆ ದಿನ ಇಲ್ಲಿಗೆ ಬಂದಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಕೊಡಿಸಿದ್ದು ದೇವೇಗೌಡರು. ಈಗ ನಾಲ್ಕು ತಿಂಗಳಿನಿಂದ ಅವರು ಬರುತ್ತಿದ್ದಾರೆ. ಜನರಿಗೆ ಸೈಟ್ ಕೊಡ್ತೀವಿ, ಮನೆ ಕೊಡ್ತೀವಿ ಅಂತಿದ್ದಾರೆ. ಸಾಗುವಳಿ ಮಾಡಿಕೊಂಡು ಬಂದ ರೈತರನ್ನು ಆಚೆ ಹಾಕಿದ್ದಾರೆ ಎಂದು ಆರೋಪಿಸಿದರು.

ಸಿಪಿವೈ ವಿರುದ್ಧ ವಾಗ್ದಾಳಿ: ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಚನ್ನಪಟ್ಟಣದ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಭಗೀರಥ ಅಂತ ಹೆಸರು ತೆಗೆದುಕೊಂಡಿದ್ದು ಮಾತ್ರ ಅವರು. ಅದೇನೋ ಸ್ವಾಭಿಮಾನಿ ಅಂತಿದ್ದಾರೆ. ನಮ್ಮ ಸರ್ಕಾರ ತೆಗೆದಾಗ ಆ ಸ್ವಾಭಿಮಾನ ಎಲ್ಲಿತ್ತು ಅಂದು ನಾನು ಏನು ಅನ್ಯಾಯ ಮಾಡಿದ್ದೆ? ಅವರು ನಮ್ಮ ಕಾರ್ಯಕರ್ತರಿಗೆ ನೋವು ಕೊಟ್ಟರು. ಎಲ್ಲವನ್ನೂ ವಿಶ್ವಾಸಕ್ಕೆ ಪಡೆದು ನೀವೇ ನಿಲ್ಲಿ ಅಂತ ಈಗಿನ ಕಾಂಗ್ರೆಸ್ ಅಭ್ಯರ್ಥಿಗೆ ಹೇಳಿದ್ದೆ. ಆದರೆ ಅವರು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಉಳಿಸಿದ್ದೇ ನಾನು, ಮಂಜುನಾಥ್ ಗೆಲ್ಲಿಸಿದ್ದೇ ನಾನು ಅಂತ ಹೇಳಿಕೊಂಡು ಓಡಾಡ್ತಿದ್ದಾರೆ ಎಂದು ಯೋಗೇಶ್ವರ್‌ ವಿರುದ್ಧ ಕಿಡಿಕಾರಿದರು.

ಟೋಪಿ ಹಾಕಿಹೋದ್ರು :  ಉಪ ಚುನಾವಣೆಯಲ್ಲಿ ನಿಲ್ಲಲು ನಾವು ಅವರಿಗೆ ಅನುಮತಿ ಕೊಟ್ಟಿದ್ದೆವು. ಆದರೆ ನಮಗೆ, ಬಿಜೆಪಿಗೆ ಟೋಪಿ ಹಾಕಿ ಕಾಂಗ್ರೆಸ್ ಸೇರಿದ್ದಾರೆ. ಚನ್ನಪಟ್ಟಣದ ಜನ ಮಾಡುವ ಆಶೀರ್ವಾದ ರಾಜ್ಯದಲ್ಲಿ ಬದಲಾವಣೆ ತರುತ್ತೆ. ನನಗೆ ಆರೋಗ್ಯದ ಸಮಸ್ಯೆ ಇದ್ದರೂ ಕೆಲಸ ಮಾಡ್ತಿದ್ದೇನೆ, ದೇಶ ಸುತ್ತುತ್ತಿದ್ದೇನೆ, ಮೋದಿ ಕೊಟ್ಟಿರೋ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ