ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌

KannadaprabhaNewsNetwork |  
Published : Dec 16, 2025, 04:00 AM IST
ಲೋಕಾಪುರ ಬಸವೇಶ್ವರ ವೃತ್ತದಲ್ಲಿ ಕಾಂಗ್ರೇಸ್ ಹಿರಿಯ ಮುಖಂಡ ಶ್ಯಾಮನೂರ ಶಿವಶಂಕರಪ್ಪ ನಿಧನ ಹಿನ್ನಲೆಯಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಜರುಗಿತು. ಈ ವೇಳೆ ಶಿವಾನಂದ ಉದಪುಡಿ, ಆನಂದ ಹಿರೇಮಠ, ಗುರುರಾಜ ಉದಪುಡಿ, ಸುಭಾಸ ಗಸ್ತಿ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಸ್ವಯಂ ಮೌಲ್ಯಮಾಪನದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆ ಕಂಡುಕೊಳ್ಳಲು, ತನ್ಮೂಲಕ ಚಿಕಿತ್ಸೆಗೆ ಮುಂದಾಗುವಂತೆ ಪ್ರೇರೇಪಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ರೂಪಿಸಿರುವ ‘ಮೈಂಡ್‌ ನೋಟ್‌’ ಆ್ಯಪ್‌ ಬಳಕೆ ಹೆಚ್ಚಳವಾಗಿದೆ. ಕನ್ನಡದಲ್ಲಿ ಬಳಕೆಗೆ ಅನುಕೂಲ ಇರುವುದರಿಂದ ಜನಪ್ರಿಯತೆ ಬಂದಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ವಯಂ ಮೌಲ್ಯಮಾಪನದ ಮೂಲಕ ಮಾನಸಿಕ ಆರೋಗ್ಯ ಸಮಸ್ಯೆ ಕಂಡುಕೊಳ್ಳಲು, ತನ್ಮೂಲಕ ಚಿಕಿತ್ಸೆಗೆ ಮುಂದಾಗುವಂತೆ ಪ್ರೇರೇಪಿಸಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ರೂಪಿಸಿರುವ ‘ಮೈಂಡ್‌ ನೋಟ್‌’ ಆ್ಯಪ್‌ ಬಳಕೆ ಹೆಚ್ಚಳವಾಗಿದೆ. ಕನ್ನಡದಲ್ಲಿ ಬಳಕೆಗೆ ಅನುಕೂಲ ಇರುವುದರಿಂದ ಜನಪ್ರಿಯತೆ ಬಂದಿದೆ.

ಖಿನ್ನತೆಗಾಗಿಯೇ ನಿಮ್ಹಾನ್ಸ್ ಈ ಹಿಂದೆ ಪುಶ್‌-ಡಿ ಆ್ಯಪ್‌ ರೂಪಿಸಿತ್ತು. ಹೊಸ ಆ್ಯಪ್‌ ಅದಕ್ಕಿಂತ ಭಿನ್ನವಾಗಿದೆ. ಮಾನಸಿಕ ಆರೋಗ್ಯ ಹೇಗಿದೆ, ನಿಜವಾಗಿಯೂ ಸಮಸ್ಯೆ ಎದುರಿಸುತ್ತಿದ್ದೀರಾ? ಕೌನ್ಸೆಲಿಂಗ್‌ನ ಅಗತ್ಯವಿದೆಯೆ? ಇಂತಹ ಪ್ರಶ್ನೆಗಳು ನಿಮ್ಮಲ್ಲಿದ್ದರೆ ಅಥವಾ ತೊಂದರೆ ಎದುರಿಸುತ್ತಿರುವುದೇ ಗೊತ್ತಿಲ್ಲದಿದ್ದರೆ ಈ ಆ್ಯಪ್‌ ಅದಕ್ಕೂ ಪರಿಹಾರ ಒದಗಿಸುತ್ತಿದೆ. ಆ ಮೂಲಕ ಒಂಟಿತನ, ಖಿನ್ನತೆ ಹಾಗೂ ನಿರಂತರ ಆತಂಕ ಎದುರಿಸುವವರ ಆರೋಗ್ಯ ಸುಧಾರಿಸುತ್ತಿದೆ.

ಯುವಕರೇ ಹೆಚ್ಚು:

ಐಐಐಟಿ ಬೆಂಗಳೂರು, ಮೈಕ್ರೋಸಾಫ್ಟ್‌ ಇಂಡಿಯಾ ಸಹಯೋಗದಲ್ಲಿ ನಿಮ್ಹಾನ್ಸ್‌ ‘ಮೈಂಡ್‌ನೋಟ್‌’ ಸಿದ್ಧಪಡಿಸಿ ‘ಮೆಂಟಲ್‌ ಹೆಲ್ತ್‌ ಸಂತೆ’ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿತ್ತು. ಇದರ ಬಳಕೆ ಸಂಪೂರ್ಣ ಉಚಿತವಾಗಿದೆ. ಒಂದು ವರ್ಷದಲ್ಲಿ 2.50 ಲಕ್ಷ ಡೌನ್‌ಲೋಡ್‌ ಆಗಿದ್ದು, 50 ಸಾವಿರದಷ್ಟು ಕನ್ನಡಿಗರೇ ಕ್ರಿಯಾಶೀಲವಾಗಿ ಬಳಸುತ್ತಿದ್ದಾರೆ. ಅದರಲ್ಲೂ 18 ರಿಂದ 35 ವರ್ಷದ ಒಳಗಿನ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು ನಿಮ್ಹಾನ್ಸ್‌ ತಿಳಿಸಿದೆ.

ಹೇಗೆ ಕಾರ್ಯ?:ಆತಂಕ ಮತ್ತು ಖಿನ್ನತೆಯಂತಹ ಸಾಮಾನ್ಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳ ಸಚಿತ್ರ ಕಥೆ ಮೂಲಕ ಬಳಕೆದಾರರಿಗೆ ಅಪ್ಲಿಕೇಶನ್‌ ಮಾರ್ಗದರ್ಶನ ನೀಡುತ್ತದೆ. ರಸಪ್ರಶ್ನೆ ಮತ್ತು ಪ್ರಮಾಣೀಕೃತ ಸ್ವಯಂ-ಶ್ರೇಣಿಯ ಪ್ರಶ್ನಾವಳಿಯು ಬಳಕೆದಾರರಿಗೆ ಅವರ ಮನಸ್ಥಿತಿ ಅರ್ಥೈಸಿಕೊಂಡು ವಸ್ತುನಿಷ್ಠವಾಗಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.

ವೈದ್ಯರಲ್ಲಿಗೆ ಬರುವ ಸಮಸ್ಯೆ ನಿವಾರಿಸುವುದು ಆ್ಯಪ್‌ನ ಪ್ರಮುಖ ಕಾರ್ಯ. ಗ್ರಾಹಕರ ನಿರೂಪಣೆ ಮತ್ತು ಮಾನಸಿಕ ಆರೋಗ್ಯ ತಜ್ಞರ ವಿಡಿಯೋಗಳು ಇದರಲ್ಲಿದ್ದು, ಅದರ ಸಹಾಯ ಸಿಗುತ್ತಿದೆ. ಸ್ವ-ಸಹಾಯ ವಿಭಾಗವು ಆಲೋಚನಾ ಕ್ರಮವನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಚಿಂತೆ ಕಡಿಮೆ ಮಾಡುವುದು, ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು, ಕೋಪ ಅಥವಾ ಉದ್ವೇಗ ನಿಭಾಯಿಸುವಂತಹ ಕಾರ್ಯ ಚಟುವಟಿಕೆಗಳನ್ನೂ ಆ್ಯಪ್‌ನಲ್ಲಿ ನೀಡಲಾಗಿದೆ.

ಬಿಕ್ಕಟ್ಟಿನ, ಮಾನಸಿಕ ತುರ್ತುಸ್ಥಿತಿ ಎದುರಿಸಲು ಆ್ಯಪ್‌ ಮಾರ್ಗದರ್ಶಿಯಾಗಿದೆ. ತುರ್ತು ಬೆಂಬಲ ಅಗತ್ಯವಿದ್ದಾಗ ಟೆಲಿಮನಸ್‌ನಂತಹ ಸಹಾಯವಾಣಿ ಸಂಖ್ಯೆಯ ಡೈರೆಕ್ಟರಿ ಒಳಗೊಂಡಿದೆ. ಮೈಂಡ್‌ನೋಟ್ಸ್ ಬಳಕೆದಾರರು ಪಠ್ಯ ಅಥವಾ ಆಡಿಯೊ ಸಂದೇಶದ ಮೂಲಕ ಮಾನಸಿಕ ಆರೋಗ್ಯ ವೈದ್ಯರನ್ನು ಸಂಪರ್ಕಿಸಬಹುದು.ಅಪ್ಲಿಕೇಶನ್‌ನಲ್ಲಿರುವ ‘ನನ್ನ ಪತ್ರಗಳು’, ಮೈಂಡ್‌ನೋಟ್ಸ್ ತಂಡದ ಸಂದೇಶ ಮತ್ತು ಯೋಗಕ್ಷೇಮ ಸವಾಲುಗಳನ್ನು ನೀಡುತ್ತದೆ. ಇದರಲ್ಲಿ ‘ಲಿಟಲ್ ಆಕ್ಟ್‌ ದಟ್ ಕೌಂಟ್’ ವಿಭಾಗ ಬಳಕೆದಾರ ಆರೋಗ್ಯ ಟ್ರ್ಯಾಕ್ ಮಾಡಲು ಮತ್ತು ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಲು ಪ್ರತಿ ತಿಂಗಳು ಸರಳ, ಅರ್ಥಪೂರ್ಣ ಚಟುವಟಿಕೆ ನೀಡುತ್ತದೆ.

ಮಾನಸಿಕ ಆರೋಗ್ಯ ವೈದ್ಯರ ಭೇಟಿ ಮಾಡಲು ಭಯವಿತ್ತು. ‘ಮೈಂಡ್‌ ನೋಟ್‌’ ಬಳಕೆ ಬಳಿಕ ಆತಂಕ ನಿವಾರಿಸಿಕೊಂಡು ವೈದ್ಯರನ್ನು ಭೇಟಿ ಆಗಿರುವುದಾಗಿ ಬಳಕೆದಾರ ಎಂ.ಸಿ.ಸಮೀಮ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ.

ಶೀಘ್ರ ಎಐ ಅಳವಡಿಕೆ:

ಸದ್ಯ ಈ ಆ್ಯಪ್‌ ತಾನು ಒಳಗೊಂಡ ಡೇಟಾ ಮೂಲಕ ಕಾರ್ಯನಿರ್ವಹಿಸುತ್ತಿದೆ. ಶೀಘ್ರ ಅಥವಾ ಮುಂದಿನ ಮೆಂಟಲ್‌ ಹೆಲ್ತ್‌ ಸಂತೆ ವೇಳೆಗೆ ಇದರಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ಯೋಜನೆ ಇದೆ. ಇದರಿಂದ ಮೌಲ್ಯಮಾಪನ ಇನ್ನಷ್ಟು ಕ್ಷಮತೆಯಿಂದ ಹಾಗೂ ಕರಾರುವಾಕ್ಕಾಗಿ ಆಗಲು ಸಾಧ್ಯವಾಗಲಿದೆ. ಇದರಿಂದ ಬಳಕೆದಾರರು ಹೆಚ್ಚಲಿದ್ದಾರೆ ಎಂದು ನಿಮ್ಹಾನ್ಸ್‌ ಐಸಿಎಂಆರ್‌ ವಿಜ್ಞಾನಿ ಅಭಿಷೇಕ್‌ ಕರಿಸಿದ್ಧಿಮಠ ತಿಳಿಸಿದರು.

ಕಳಂಕದ ಭಯ, ಜಾಗೃತಿ ಕೊರತೆಯಿಂದ ಮಾನಸಿಕ ಆರೋಗ್ಯ ಆಸ್ಪತ್ರೆಗೆ ತಪಾಸಣೆ, ಕೌನ್ಸೆಲಿಂಗ್‌ಗೆ ಬರಲೂ ಹೆದರುತ್ತಾರೆ. ಇಂತವರಿಗೆ ಸ್ವಯಂ ಮೌಲ್ಯಮಾಪನ ಮೂಲಕ ಮಾನಸಿಕ ಆರೋಗ್ಯ ತಿಳಿದು ಚಿಕಿತ್ಸೆಗೆ ಬರುವಂತೆ ಮಾಡುವುದು ಈ ಆ್ಯಪ್‌ ಉದ್ದೇಶ.

- ಡಾ.ಸೀಮಾ ಮಲ್ಹೋತ್ರಾ, ನಿಮ್ಹಾನ್ಸ್‌ ಕ್ಲಿನಿಕಲ್‌ ಸೈಕಾಲಜಿ ಪ್ರೊಫೆಸರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!
ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ