ಕನ್ನಡಪ್ರಭ ವಾರ್ತೆ ಮುಧೋಳ
ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಬಾಯ್ಲರ್ ಪ್ರದೀಪನ ಹಾಗೂ ಮುರುಗೇಶ ನಿರಾಣಿ ಅವರ ಮೊಮ್ಮಗ ಸಮರ್ಥ ವಿಜಯ ನಿರಾಣಿ ತನ್ನ 3ನೇ ವರ್ಷದಲ್ಲಿ ಗಾಲ್ಫ್ ಕಾರ್ಟ್ ಓಡಿಸಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಇಂಟರ್‌ನ್ಯಾಷನಲ್ ಯಂಗೆಸ್ಟ್ ಡ್ರೈವರ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ದಶಕದಿಂದ ಸಕ್ಕರೆ ಉದ್ಯಮದಲ್ಲಿ ತೊಡಗಿಕೊಂಡಿರುವ ನಿರಾಣಿ ಕುಟುಂಬವನ್ನು ರೈತಕುಲ ತಮ್ಮವರೆಂದು ಬೆಳೆಸಿಕೊಂಡು ಬಂದಿದೆ. ನಿಮ್ಮ ಸಹಕಾರದಿಂದ ಇಂದು ಬಾಗಲಕೋಟೆ ಜಿಲ್ಲೆ ಅದರಲ್ಲೂ ಮುಧೋಳ ತಾಲೂಕು ಸಕ್ಕರೆ ಉದ್ಯಮದಲ್ಲಿ ಬೃಹದ್ದಾಕಾರವಾಗಿ ಬೆಳೆದು ನಿಂತಿದೆ. ನಿಮ್ಮ ಬೆಂಬಲ ಇದೇ ರೀತಿ ಮುಂದುವರೆಯಲಿ ಎಂದರು.ಮಾಜಿಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಏಳಿಗೆಗಾಗಿ ಬಾಗಲಕೋಟೆ ಹಾಗೂ ಮುಧೋಳ ಭಾಗದಲ್ಲಿ ನಿರಾಣಿ ಕುಟುಂಬ ನೀಡಿರುವ ಸೇವೆ ಅಪಾರವಾದದು. ಚಿಕ್ಕ ವಯಸ್ಸಿನಲ್ಲಿಯೇ ಕಾರ್ಖಾನೆ ಆರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಸ್ವಾಭಿಮಾನ, ಶ್ರದ್ಧೆ, ಪರಿಶ್ರಮದಿಂದ ಮುರುಗೇಶ ನಿರಾಣಿಯವರು ಮುಗಿಲೆತ್ತರಕ್ಕೆ ಬೆಳೆದಿದ್ದಾರೆ. ಹಿಡಿದಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಛಾತಿ ನಿರಾಣಿಯವರಿಗೆ ಇದೆ. ರೈತರ ಅಭಿವೃದ್ಧಿಯಲ್ಲಿ ಹೆಚ್ಚಿನ ಶ್ರಮವಹಿಸಿದ್ದಾರೆ ಎಂದರು.ನಿರಾಣಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಗಮೇಶ ನಿರಾಣಿ ಮಾತನಾಡಿ, ಪ್ರಸಕ್ತ ಸಾಲಿನ ಹಂಗಾಮಿಗೆ ನಿಮ್ಮೆಲ್ಲರ ಸಮ್ಮುಖದಲ್ಲಿ ಅಗ್ನಿ ಪ್ರದೀಪನ ಯಶಸ್ವಿಯಾಗಿ ಜರುಗಿದೆ. ಸಕ್ಕರೆ ಕಾರ್ಖಾನೆ ಹಾಗೂ ಘಟಪ್ರಭಾ ನದಿಯಿಂದ ಮುಧೋಳ ನಾಗಾಲೋಟದಿಂದ ಬೆಳೆಯುತ್ತಿದೆ. ನಿಮ್ಮೆಲ್ಲರ ಸಹಕಾರದಿಂದ ಕಾರ್ಖಾನೆ ಬೆಳೆಯುತ್ತಿದೆ. ನಿಮ್ಮ ಸಹಕಾರ ಇದೇ ರೀತಿ ಇರಲಿ. ಕಳೆದ ವರ್ಷ ರೈತರ ಇಚ್ಛೆಯ ಪ್ರಕಾರ ಬಿಲ್ ನೀಡಿದ್ದೇವೆ. ಹಿಂದಿನ ಬಾಕಿ ನೀಡಲು ಎಲ್ಲರೂ ಕೂಡಿ ಶೀಘ್ರದಲ್ಲಿಯೇ ಸಭೆ ಸೇರಿ ಚರ್ಚಿಸೋಣ ಎಂದರು.ನಿರಾಣಿ ಗ್ರುಪ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ ನಿರಾಣಿ ಮಾತನಾಡಿ, ರೈತ ಕುಟುಂಬದ ಹಿನ್ನೆಲೆಯಿಂದ ಹಂತ, ಹಂತವಾಗಿ ಬೆಳೆದು ರೈತರೊಂದಿಗೆ ಸಮವಾಗಿ ಹೆಜ್ಜೆ ಹಾಕುತ್ತಿರುವ ನಿರಾಣಿಯವರು ಎಲ್ಲರೊಂದಿಗೆ ಬೆಳವಣಿಗೆ ಸಾಧಿಸುತ್ತಿರುವುದು ಸಂತಸ ಹೆಚ್ಚಿಸಿದೆ. ರೈತರ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುವ ನಿರಾಣಿಯವರು ರೈತರ ಜತೆ ನಿಲ್ಲುತ್ತಾರೆ ಎಂದರು.ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ತೀರ್ಪುಗಾರ ಹರೀಶ ಶರ್ಮಾ ಮಾತನಾಡಿ, 2022ರಲ್ಲಿ ಮುರುಗೇಶ ನಿರಾಣಿಯವರು ಹಮ್ಮಿಕೊಂಡಿದ್ದ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಕರ್ನಾಟಕಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ. ಮುರುಗೇಶ ಅವರು ರೈತರ ಏಳಿಗೆಗಾಗಿ ಹಲವಾರು ಯೋಜನೆ ಜಾರಿಗೊಳಿಸಿ ಹೆಸರುವಾಸಿಯಾಗಿದ್ದಾರೆ. ಜನರ ಕಲ್ಯಾಣಕ್ಕಾಗಿ ಕೈಗೊಂಡಿರುವ ಯೋಜನೆಯಿಂದ ಮುರುಗೇಶ ನಿರಾಣಿಯವರು ತಮಗರಿವಿಲ್ಲದೆ ಆಕಾಶ ದೆತ್ತರಕ್ಕೆ ಬೆಳೆದು ನಿಂತಿದ್ದಾರೆ. ಗಾಲ್ಫ್ ಕಾಟ್ ನಡೆಸುವುದರಲ್ಲಿ ಕೇವಲ 3 ವರ್ಷದಲ್ಲಿ ಯಶಸ್ವಿಗೊಳಿಸಿರುವ ಸಮರ್ಥನಿಗೆ ಶುಭ ಹಾರೈಸಿದರು.ಏಷಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ವಿಶೇಷ ಸಾಧನೆಗೈದ ಸಮರ್ಥ ನಿರಾಣಿಗೆ ನಿರಾಣಿ ಸಮೂಹದ ಕಾರ್ಮಿಕರು ಅಭಿನಂದಿಸಿ ಸನ್ಮಾಸಿದರು. ನಿಡಸೋಸಿಯ ಶ್ರೀಗಳು, ರೂಗಿಯ ನಿತ್ಯಾನಂದಶ್ರೀಗಳು, ಶಿರೋಳ ಗಣಾಚಾರಿ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಕಮಲಾ ಮು.ನಿರಾಣಿ ಸೇರಿದಂತೆ ಇತರೆ ಮಠಾಧೀಶರು, ರೈತರು, ಕಾರ್ಖಾನೆಯ ಸಿಬ್ಬಂದಿ ಇದ್ದರು.
-ಮುರುಗೇಶ ನಿರಾಣಿ,
-ಸಂಗಮೇಶ ನಿರಾಣಿ,
-ಕಟ್ಟಾಸುಬ್ರಹ್ಮಣ್ಯ ನಾಯ್ಡು,
ಮಾಜಿ ಸಚಿವರು.