ಕನ್ನಡಪ್ರಭ ವಾರ್ತೆ ಮಣಿಪಾಲ
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ‍್ಯಾಂಕಿಂಗ್ ಫ್ರೇಮ್ ವರ್ಕ್ (ಎನ್‌ಐಆರ್‌ಎಫ್) ಇದರ 2025ನೇ ಸಾಲಿನ ವಿಶ್ವವಿದ್ಯಾಲಯ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಮಣಿಪಾಲ ಮಾಹೆ ಸ್ವಾಯತ್ತ ವಿವಿ ದೇಶದಲ್ಲಿಯೇ 3ನೇ ಸ್ಥಾನವನ್ನು ಪಡೆದಿದೆ. ಕಳೆದ ಸಾಲಿನಲ್ಲಿ 4ನೇ ಸ್ಥಾನದಲ್ಲಿದ್ದ ಮಾಹೆ, ಈ ಬಾರಿ ತಮ್ಮ ಪರಿಣಾಮಕಾರಿ ಸಾಧನೆಯಿಂದ ಬಡ್ತಿ ಪಡೆದಿದೆ.ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ಎನ್‌ಐಆರ್‌ಎಫ್ ರ‍್ಯಾಂಕಿಂಗ್‌ನಲ್ಲಿ ಈ ವರ್ಷ ದೇಶಾದ್ಯಂತ 14,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ಈ ಸಂಸ್ಥೆಗಳನ್ನು 9 ವಿಭಾಗ, 8 ವಿಷಯ ಕ್ಷೇತ್ರಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ಎಲ್ಲ ವಿಭಾಗಗಳಲ್ಲಿ ಮಾಹೆಯ ಗಮನಾರ್ಹ ಸಾಧನೆಯಿಂದಾಗಿ, ಭಾರತದ ಅಗ್ರ ಮೂರು ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇದು ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಮಾಹೆ ಸಂಸ್ಥೆ ಹೊಂದಿರುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮಾಹೆ ತಿಳಿಸಿದೆ.ಜೊತೆಗೆ ಮಾಹೆಯು ಸುಸ್ಥಿರತೆ ಮಾನದಂಡದಲ್ಲಿ 5ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಸಂಶೋಧನೆಯಲ್ಲಿ 23ನೇ ಸ್ಥಾನದಿಂದ 19ನೇ ಸ್ಥಾನಕ್ಕೇರಿದೆ. ನಾವೀನ್ಯತೆಯಲ್ಲಿ 11-50 ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ.ಅಲ್ಲದೇ ಮಾಹೆಯ ಅಂಗಸಂಸ್ಥೆಗಳಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮಣಿಪಾಲ 10ನೇ, ಕೆಎಂಸಿ ಮಂಗಳೂರು 35ನೇ, ಮಣಿಪಾಲ ದಂತ ವಿಜ್ಞಾನ ಕಾಲೇಜು 5ನೇ, ಮಂಗಳೂರು ದಂತ ವಿಜ್ಞಾನ ಕಾಲೇಜು 11ನೇ, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 59ನೇ, ಮಣಿಪಾಲ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ 27ನೇ, ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ 8ನೇ ಮತ್ತು ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ 39ನೇ ಸ್ಥಾನಗಳನ್ನು ಗಳಿಸಿವೆ.ಶೈಕ್ಷಣಿಕ ಶ್ರೇಷ್ಟತೆಯ ಮೌಲ್ಯೀಕರಣ:ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ಮಾಹೆಯ ಉಪಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್, ಮಾಹೆಯು ದೇಶದ ವಿವಿಗಳಲ್ಲಿ ಅಗ್ರ 3ನೇ ಸ್ಥಾನ ಗಳಿಸಿರುವುದು ವಿವಿಯ ಶೈಕ್ಷಣಿಕ ಶ್ರೇಷ್ಠತೆಯನ್ನು ಮೌಲ್ಯೀಕರಿಸುತ್ತದೆ. ಈ ಗಮನಾರ್ಹ ಪ್ರಗತಿಯು ನಮ್ಮ ಅಧ್ಯಾಪಕರ ಅಸಾಧಾರಣ ಸಮರ್ಪಣೆ, ನಮ್ಮ ವಿದ್ಯಾರ್ಥಿಗಳ ನವೀನ ಮನೋಭಾವ ಮತ್ತು ನಮ್ಮ ಸಂಸ್ಥೆಯ ಭವಿಷ್ಯದ ಕಾರ್ಯತಂತ್ರ, ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.ಮಾಹೆ: ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್
ಮಾಹೆಗೆ 2020ರಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ (ಉತ್ಕೃಷ್ಟ ಸಂಸ್ಥೆ) ಸ್ಥಾನಮಾನವನ್ನು ನೀಡಿದೆ. ಮಾಹೆಯು ಆರೋಗ್ಯ ವಿಜ್ಞಾನ, ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನ ಶಾಖೆಗಳಲ್ಲಿ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಷೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಅಗಸಂಸ್ಥೆಗಳ ಮೂಲಕ 400 ವಿಷಯಗಳಲ್ಲಿ ಶಿಕ್ಷಣವನ್ನು ನೀಡುತ್ತಿದೆ. ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಗಮನಾರ್ಹ ಕೊಡುಗೆಗಳಿಂದ ಮಾಹೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಇದಕ್ಕೆಲ್ಲಾ ಪೂರವಾಗಿ ಎನ್‌ಐಆರ್‌ಎಫ್‌ನಿಂದ ರಾಷ್ಟ್ರಮಟ್ಟದಲ್ಲಿ 3 ನೇ ಸ್ಥಾನ ಪಡೆದಿದೆ.