ಕನ್ನಡಪ್ರಭ ವಾರ್ತೆ ಕಾರ್ಕಳ
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ವಿದ್ಯಾಸಂಸ್ಥೆಗಳಲ್ಲೊಂದಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಬಿ.ಟೆಕ್. ಕೋರ್ಸ್ ಗಳಿಗೆ ೨೦೨೫ ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ನೂತನ ಬ್ಯಾಚ್ ನ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಿಟ್ಟೆಯ ಸದಾನಂದ ಸಭಾಂಗಣದಲ್ಲಿ ಜರುಗಿತು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ, ಇಂದಿನ ದಿನಗಳಲ್ಲಿ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಂಡು ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು. ನಿಟ್ಟೆ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಈ ದೃಷ್ಟಿಯಲ್ಲಿ ಸಜ್ಜುಗೊಳಿಸಲು ಸದಾ ಕಾರ್ಯಪ್ರವೃತ್ತವಾಗಿರುತ್ತದೆ. ತಾಂತ್ರಿಕ ಶಿಕ್ಷಣದೊಂದಿಗೆ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ವೃದ್ದಿಯ ಹಿನ್ನಲೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ವಿಷಯಗಳಿಗೂ ಸಮಾನ ಮಹತ್ವವನ್ನು ನೀಡುವುದು ಮುಖ್ಯ ಎಂದರು.ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೋ ಚಾನ್ಸಲರ್ ಡಾ.ಶಾಂತರಾಮ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಅಭಿವೃದ್ಧಿಗೆ ಏನೆಲ್ಲಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಇಷ್ಟಪಟ್ಟು ಮಾಡುವ ಕೆಲಸ ಯಾವತ್ತೂ ಕಷ್ಟಕರವೆನಿಸುವುದಿಲ್ಲ ಎಂದು ತಿಳಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ವೈಸ್-ಚಾನ್ಸಲರ್ ಡಾ.ಎಂ.ಎಸ್.ಮೂಡಿತ್ತಾಯ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಅಣಿಗೊಳ್ಳಬೇಕು ಎಂಬುದನ್ನು ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಪ್ರೊ.ಡಾ. ಗೋಪಾಲ್ ಮುಗೇರಾಯ ಮಾತನಾಡಿ, ನಿಟ್ಟೆ ವಿದ್ಯಾಸಂಸ್ಥೆಯ ಇತಿಹಾಸ, ಬೆಳೆದುಬಂದ ಹಾದಿಯ ಬಗೆಗೆ ನೂತನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿವರಿಸಿದರು.ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಪ್ರಥಮ ವರ್ಷ ಬಿಟೆಕ್ ವಿದ್ಯಾರ್ಥಿಗಳ ಸಂಯೋಜಕ ಹಾಗೂ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮದ ಸಂಯೋಜಕ ಡಾ. ಜಾಯ್ ಮಾರ್ಟಿಸ್ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಗ್ರೈನಲ್ ಡಿಮೆಲ್ಲೋ ನಿರೂಪಿಸಿದರು.ನಂತರ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ನಿಟ್ಟೆ ಸಮೂಹ ಸಂಸ್ಥೆಯ ಹಾಗೂ ಅದು ಬೆಳೆದು ಬಂದ ಹಾದಿಯ ಬಗೆಗೆ ಮಾತನಾಡಿದರು.