ಕುಂಭಮೇಳದಲ್ಲಿ ಆಗಿರುವ ಸಾವುಗಳ ನಿಖರ ದಾಖಲೆಗಳಿಲ್ಲ: ಲಾಡ್‌

KannadaprabhaNewsNetwork |  
Published : Feb 06, 2025, 12:17 AM IST
446 | Kannada Prabha

ಸಾರಾಂಶ

ಬಿಜೆಪಿಯವರು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ, ಕೋವಿಡ್‌, ಕುಂಭಮೇಳದಲ್ಲಿನ ಸಾವು ಸೇರಿದಂತೆ ಕಳೆದ 11 ವರ್ಷಗಳ ಅವಧಿಯ ಘಟನೆಗಳ ಬಗ್ಗೆ ಎಲ್ಲಿಯೂ ನಿಖರ ಮಾಹಿತಿ ಇಲ್ಲ. ಎನ್‌ಡಿಎ ಅಂದರೆ "ನೋ ಡಾಟಾ ಅವೈಲೇಬಲ್‌ ".

ಹುಬ್ಬಳ್ಳಿ:

ಕುಂಭಮೇಳದಲ್ಲಿ ಈಚೆಗೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆಗಿರುವ ಸಾವಿನ ಬಗ್ಗೆ ಯಾವುದೇ ನಿಖರ ದಾಖಲೆ ಇಲ್ಲ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ, ಕೋವಿಡ್‌, ಕುಂಭಮೇಳದಲ್ಲಿನ ಸಾವು ಸೇರಿದಂತೆ ಕಳೆದ 11 ವರ್ಷಗಳ ಅವಧಿಯ ಘಟನೆಗಳ ಬಗ್ಗೆ ಎಲ್ಲಿಯೂ ನಿಖರ ಮಾಹಿತಿ ಇಲ್ಲ. ಎನ್‌ಡಿಎ ಅಂದರೆ "ನೋ ಡಾಟಾ ಅವೈಲೇಬಲ್‌ " ಎಂದು ವ್ಯಂಗ್ಯವಾಡಿದರು. ವಿಶ್ವ ಗುರುವಿನಿಂದ ಏನೂ ಆಗುತ್ತಿಲ್ಲ, ಅವರ ಬದಲಾವಣೆ ಆಗಬೇಕು, ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು, ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂಬುದರ ಬಗ್ಗೆ ಬಿಜೆಪಿಯಲ್ಲಿಯೇ ಚರ್ಚೆ ನಡೆಯುತ್ತಿದೆ. ಅಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಲು ಅವರಿಗೆ ಸ್ವಾಂತಂತ್ರ್ಯ ಇಲ್ಲ ಎಂದು ಲೇವಡಿ ಮಾಡಿದರು.

ಪ್ರಶ್ನಿಸಬಾರದೇ? ಭಾರತವನ್ನು ಚೀನಾಗೆ ಹೋಲಿಕೆ ಮಾಡಲು ಆಗುವುದಿಲ್ಲ, 10 ವರ್ಷದಲ್ಲಿ ಚೀನಾ ಏನೆಲ್ಲಾ ಮಾಡಿದೆ. ಇಂದು ಡಾಲರ್ ಎದುರು ರುಪಾಯಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ದೇಶದ ಸಾಲ ಎಷ್ಟಾಗಿದೆ ಎಂದು ಪ್ರಶ್ನಿಸಬಾರದೇ? 70 ವರ್ಷದಲ್ಲಿ ಆಗಿರುವ ಸಾಲದ 3 ಪಟ್ಟು ಕೇವಲ 10 ವರ್ಷಗಳಲ್ಲಾಗಿದೆ ಎಂದು ಲಾಡ್‌ ಆರೋಪಿಸಿದರು.

ಹಿಂದೆ ಬಲಿಷ್ಠ 10 ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತ ಇಂದು ಹೊರ ಬಿದ್ದಿದೆ. ಇದಕ್ಕೆಲ್ಲ ಏನು ಕಾರಣ ಎಂಬುದರ ಕುರಿತು ಚರ್ಚಿಸಬಾರದೆ? ದೇಶವು ಅಷ್ಟೊಂದು ಶಕ್ತಿಶಾಲಿಯಾಗಿದ್ದರೆ ಡಾಲರ್‌ ಎದುರು ಭಾರತದ ರುಪಾಯಿ ಮೌಲ್ಯ ಏಕೆ ಕುಸಿದಿದೆ ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಲಿ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ದಿನ ಬೆಳಗಾದರೆ ಸಾಕು ಕೇವಲ ಧರ್ಮ, ಜಾತಿ ಬಗ್ಗೆ ಮಾತನಾಡುತ್ತಾರೆ. ಮೊದಲು ಇದನ್ನು ನಿಲ್ಲಿಸಲಿ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ